ದಾವಣಗೆರೆ: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಭ್ರಷ್ಟಾಚಾರ, ಅವ್ಯವಹಾರ, ಸ್ವಜನ ಪಕ್ಷಪಾತ ವಿರುದ್ಧ ತನಿಖೆ ನಡೆಸುವ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ, ಉಪ ಕಾರ್ಯದರ್ಶಿ ವಿರುದ್ಧವೇ ತನಿಖೆಗೆ ಕೋರಿ ಖುದ್ದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್. ಜಯಶೀಲಾ ಗುರುವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ಸಲ್ಲಿಸಿದ್ದಾರೆ. ತಾವು ಸದಸ್ಯೆಯಾದ ಕಳೆದ ಎರಡು ವರ್ಷ ಹಾಗೂ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ನಾಲ್ಕು ತಿಂಗಳಲ್ಲಿ ಜಿಲ್ಲಾ ಪಂಚಾಯತ್‌ಗೆ ಎಲ್ಲಾ ಲೆಕ್ಕ ಶೀರ್ಷಿಕೆಯಲ್ಲಿ ಬಿಡುಗಡೆ ಮತ್ತು ಖರ್ಚಾಗಿರುವ ಅನುದಾನದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಜಯಶೀಲಾ ಭ್ರಷ್ಟಾಚಾರ ನಿಗ್ರಹ ದಳ ಡಿವೈಎಸ್ಪಿ ಎಚ್.ಎಸ್. ಪರಮೇಶ್ವರ್‌ಗೆ ದೂರು ಸಲ್ಲಿಸಿದರು.
ದೂರು ಸಲ್ಲಿಸಿದ ನಂತರ ಅಧ್ಯಕ್ಷೆ ಕೆ.ಆರ್. ಜಯಶೀಲಾ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಅಶ್ವತಿ, ಉಪ ಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ ಅವರು ಭ್ರಷ್ಟಾಚಾರ, ಅವ್ಯವಹಾರ ಮತ್ತು ಸ್ವಜನ ಪಕ್ಷಪಾತ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ನಾನು ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಗ್ರಾಮ ಪಂಚಾಯತ್, ಸಾರ್ವಜನಿಕರಿಂದ ಬಂದಿರುವ ಎಲ್ಲಾ ದೂರುಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದೇನೆ ಎಂದರು.
ಜಿಲ್ಲೆಯ 282 ಗ್ರಾಮ ಪಂಚಾಯತ್‌ಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ, 14ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಅನೇಕರು ತಮಗೆ ದೂರು ಸಲ್ಲಿಸಿದ್ದರು. ಅವುಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ. 10 ಲಕ್ಷ ರೂ. ಅವ್ಯವಹಾರ ಮಾಡಿದರೂ ಭ್ರಷ್ಟಾಚಾರವೇ. ಅದೇ ರೀತಿ 1 ರೂಪಾಯಿ ಅವ್ಯವಹಾರ ಮಾಡಿದರೂ ಅದೂ ಸಹ ಭ್ರಷ್ಟಾಚಾರ. ಏಕೆಂದರೆ ಅದು ಸಾರ್ವಜನಿಕರ ಸ್ವತ್ತು. ಹಾಗಾಗಿಯೇ ದೂರುಗಳ ಸತ್ಯಾಸತ್ಯತೆ ಹೊರಗೆ ಬರಲಿ ಎಂದು ತಿಳಿಸಿದರು.
ನನಗೆ ಬಂದಿದ್ದಂತಹ ದೂರು, ಅವುಗಳ ಜೊತೆಗೆ ಕೆಲವಾರು ಮಾಹಿತಿ, ದಾಖಲೆ ಸಲ್ಲಿಸಿದ್ದೇನೆ. ಸೂಕ್ತ ತನಿಖೆ ನಡೆದು, ಸತ್ಯಾಸತ್ಯತೆ ತಿಳಿಯಲಿ. ಒಂದೇ ಒಂದು ರೂಪಾಯಿಯ ಅವ್ಯವಹಾರವಾಗಿದ್ದರೂ ಅದು ಮತ್ತೆ ಖಜಾನೆಗೆ ಸೇರಲಿ. ಅಲ್ಲಿಂದ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗಲಿ ಎಂದರು.
ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ಸ್ವತ್ಛತೆ, ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆ ಮಾಡಿರುವ ಅನುದಾನವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ, ಉಪ ಕಾರ್ಯದರ್ಶಿ ಮನಸೋಇಚ್ಛೆ ವೆಚ್ಚ ಮಾಡಿದ್ದಾರೆ. ಜಿಲ್ಲಾ ಪಂಚಾಯತ್‌ನಲ್ಲಿ ಜನಪ್ರತಿನಿಧಿಗಳಿಗೆ ಅವಕಾಶವೇ ಇಲ್ಲದಂತೆ ಇಬ್ಬರೇ ಸರ್ವಾಧಿಕಾರ ನಡೆಸುತ್ತಿದ್ದಾರೆ. ಅವರನ್ನು ನೋಡದಂತೆ ಕೆಳಗಿನ ಅಧಿಕಾರಿಗಳು, ಸಿಬ್ಬಂದಿ ಮೂಕಪ್ರೇಕ್ಷಕರಂತೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಾಮಾನ್ಯರು ಭ್ರಷ್ಟಾಚಾರ ನಡೆಸಿದರೂ ಭ್ರಷ್ಟಾಚಾರವೇ. ದೊಡ್ಡವರು ಮಾಡಿದರೂ ಅದು ಸಹ ಭ್ರಷ್ಟಾಚಾರವೇ. ಯಾರೇ ಮಾಡಿದರೂ ಅದು ಭ್ರಷ್ಟಾಚಾರ. ಕಳೆದ 2 ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲಾ ಪಂಚಾಯತ್‌ಗೆ ಎಲ್ಲಾ ಲೆಕ್ಕ ಶೀರ್ಷಿಕೆಯಲ್ಲಿ ಬಿಡುಗಡೆಯಾಗಿರುವ ಮತ್ತು ಖರ್ಚಾಗಿರುವ ಅನುದಾನದ ಬಗ್ಗೆ ಮಾತ್ರವಲ್ಲ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಭ್ರಷ್ಟಾಚಾರ ನಡೆದಿರುವ 282 ಗ್ರಾಮ ಪಂಚಾಯತಿಗಳ ಬಗ್ಗೆಯೂ ತನಿಖೆ ಆಗಲಿ. ಸತ್ಯಾಸತ್ಯತೆ ಹೊರ ಬರಲಿ ಎಂದು ಪುನರುಚ್ಚರಿಸಿದರು.
ಯಾರೂ ಹೇಳಿಕೊಳ್ಳಲಿಕ್ಕಾಗದ ಮಟ್ಟಿಗೆ ಜಿಲ್ಲಾ ಪಂಚಾಯತ್ ವ್ಯವಸ್ಥೆ ಹೋಗಿದೆ. ಗಾಂಧಿ ಪುರಸ್ಕಾರ ಪ್ರಶಸ್ತಿಗೂ ಸಹ ಹಣ ನೀಡಬೇಕಾಗಿದೆ ಎಂದು ಖುದ್ದಾಗಿ ಕೆಲ ಗ್ರಾಮ ಪಂಚಾಯತ್ ಸದಸ್ಯರೇ ತಮಗೆ ತಿಳಿಸಿದ್ದಾರೆ ಎಂದರು.