ಬೆಂಗಳೂರು: ಮಹಿಳೆಯರ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಮೂಲದ ಮೊಹಮ್ಮದ್ ರಫೀಕ್ (32), ತೌಸಿಫ್ ಸಾದಿಕ್ (30) ಬಂಧಿತರು. ಆರೋಪಿ ಗಳಿಂದ ಕಳವು ವಸ್ತುಗಳನ್ನು ಸ್ವೀಕರಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಾಯುಂ (34) ಎಂಬಾತ ತಲೆಮರೆಸಿಕೊಂ ಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 70 ವರ್ಷದ ವೃದ್ಧೆಯ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಅದೇ ವೇಳೆ ಉಡುಪಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಹೀಗಾಗಿ ಬಾಡಿ ವಾರೆಂಟ್ ಪಡೆದು ಆರೋಪಿ ಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ಅವರಿಂದ ಮೂರು ಲಕ್ಷ ರೂ. ಮೌಲ್ಯದ 49 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, 2018ನೇ ಸಾಲಿನಲ್ಲಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸರ ಕಳವು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಜಾಮೀನು ಪಡೆದು ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಇನ್ನು ಆರೋಪಿಗಳ ಪೈಕಿ ಮೊಹಮ್ಮದ್ ರಫೀಕ್, ಪ್ರಕರಣವೊಂದರಲ್ಲಿ ಮಂಗಳೂರು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಲು ಕರೆದೊಯ್ಯುವಾಗ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಎಂಬುದು ಗೊತ್ತಾಗಿದೆ.
ನಾಲ್ಕೈದು ವರ್ಷಗಳಿಂದ ಮಂಗಳೂರಿನಲ್ಲಿ ವಾಸವಿದ್ದ ಕಾಯುಂ, ಅಲ್ಲಿಯೇ ಚಿನ್ನಾಭರಣ ವ್ಯಾಪಾರ ಮಾಡಿಕೊಂಡಿದ್ದ. ಈ ವೇಳೆ ಕಳ್ಳರ ಪರಿಚಯವಾಗಿದ್ದು, ಅವರ ಕಳವು ಮಾಲು ಸ್ವೀಕರಿಸಿ ಹಣ ಕೊಡುತ್ತಿದ್ದ. ಸದ್ಯ ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಮಲ್ಲೇಶ್ವರಂ ಠಾಣಾಧಿಕಾರಿ ಎಂ.ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.