ನವದೆಹಲಿ: ಇರಾನ್‌ನ ಚಬಹಾರ್‌ನಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಬಂದರಿನಲ್ಲಿ ಮತ್ತೆ ಚಟುವಟಿಕೆಗಳು ಶುರುವಾಗಿವೆ.
ಅಫ್ಘಾನಿಸ್ತಾನದಲ್ಲಿ ಸದ್ಯ ಆಡಳಿತದ ಚುಕ್ಕಾಣಿ ಹಿಡಿದಿರುವ ತಾಲಿಬಾನ್ ಆಡಳಿತ ಬಂದರು ಮೂಲಕ ವ್ಯಾಪಾರ-ವಹಿವಾಟು ನಡೆಸುವ ನಿಟ್ಟಿನಲ್ಲಿ ಅಭ್ಯಂತರವಿಲ್ಲ ಎಂದು ವಾಗ್ಧಾನ ಮಾಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ.
ತಾಲಿಬಾನ್ ಆಡಳಿತ, ಭಾರತ ಸರ್ಕಾರದ ಜತೆಗೆ ಉತ್ತಮ ರೀತಿಯ ರಾಜತಾಂತ್ರಿಕ ಮತ್ತು ವ್ಯಾವಹಾರಿಕ ಬಾಂಧವ್ಯ ಹೊಂದುವ ಬಗ್ಗೆ ಈಗಾಗಲೇ ಆಸಕ್ತಿ ವ್ಯಕ್ತಪಡಿಸಿದೆ. ಇದರಿಂದಾಗಿ ಅಫ್ಘಾನಿಸ್ತಾನಕ್ಕೆ ನೇರವಾಗಿ ಮತ್ತು ಪ್ರಾದೇಶಿಕವಾಗಿ ನೆರವಾಗಲಿರುವ ಹಿನ್ನೆಲೆಯಲ್ಲಿ ಚಬಹಾರ್ ಬಂದರಿನಲ್ಲಿ ವಾಣಿಜ್ಯಿಕ ಚಟುವಟಿಕೆಗಳಿಗೆ ಅಭ್ಯಂತರವಿಲ್ಲ ಎಂದು ಈಗಾಗಲೇ ತಿಳಿಸಿದೆ.
ಇದೇ ಬಂದರು ಮೂಲಕ ಕೇಂದ್ರ ಏಷ್ಯಾ ರಾಷ್ಟ್ರಗಳಿಗೆ ಸಂಪರ್ಕ ಸ್ಥಾಪಿಸಲು ಕೂಡ ಆರ್ಥಿಕವಾಗಿ, ಸ್ಥಿರವಾಗಿರುವ ಮತ್ತು ದೃಢವಾಗಿರುವ ದಾರಿ ಎಂಬ ಅಂಶವನ್ನೂ ಅಫ್ಘಾನಿಸ್ತಾನದ ಈಗಿನ ಆಡಳಿತ ಅರಿತುಕೊಂಡಿದೆ.
ಇದನ್ನೂ ಓದಿ:ಶ್ವಾನದ ಹೆಸರಲ್ಲಿದೆ 3 ಸಾವಿರ ಕೋಟಿ ರೂ. ಬಂಗಲೆ
ತಾಲಿಬಾನ್ ಮುಖಂಡ ಶೇರ್ ಅಬ್ಟಾಸ್ ಸ್ಟಾನಿಕ್‌ಜೈ ಬಂದರಿನಲ್ಲಿ ವ್ಯಾಪಾರ ಮತ್ತು ವಾಣಿಜ್ಯ ವಹಿವಾಟಿಗೆ ಯಾವುದೇ ಅಡ್ಡಿ ಇಲ್ಲ ಎಂದು ಭರವಸೆ ನೀಡಿದ ಬಳಿಕ ಅಲ್ಲಿ ಚಟುವಟಿಕೆಗಳು ಹೆಚ್ಚಾಗಿವೆ.