Advertisement

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

08:14 PM Apr 17, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಸಿಇಟಿ ಗುರುವಾರದಿಂದ ಆರಂಭಗೊಳ್ಳಲಿದ್ದು ದಾಖಲೆಯ 3.49 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 737 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

Advertisement

ಕಳೆದ ವರ್ಷ 2.60 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಈ ವರ್ಷ ಸುಮಾರು ಮೂರೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದು ಹೊಸ ದಾಖಲೆ ನಿರ್ಮಾಣಗೊಳ್ಳಲಿದೆ.

ಇಂಜಿನಿಯರಿಂಗ್‌, ಕೃಷಿ ವಿಜ್ಞಾನ, ಪಶುವೈದ್ಯ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ಗುರುವಾರ ಮತ್ತು ಶುಕ್ರವಾರ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಯ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ತಿಳಿಸಿದ್ದಾರೆ.

ಸಿಇಟಿ ಕರ್ತವ್ಯಕ್ಕೆ ಒಟ್ಟಾರೆ 20,300 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 167 ಪರೀಕ್ಷಾ ಕೇಂದ್ರಗಳಿದ್ದು, ಈ ಬಾರಿ 648 ವಿಶೇಷ ಚೇತನ ಅಭ್ಯರ್ಥಿಗಳು ಸಿಇಟಿ ಬರೆಯುತ್ತಿದ್ದಾರೆ.

ಗುರುವಾರ ಜೀವಶಾಸ್ತ್ರ, ಗಣಿತ ಹಾಗೂ ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಇಂಗ್ಲಿಷ್‌ ಮತ್ತು ಕನ್ನಡ ಎರಡರಲ್ಲೂ ಪ್ರಶ್ನೆಪತ್ರಿಕೆ ಇರಲಿದೆ. ಕಲಬುರಗಿ ಮುಂತಾದ ಉತ್ತರ ಕರ್ನಾಟಕದ ಭಾಗಗಳ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಗೊಂದಲವನ್ನು ಬಗೆಹರಿಸಿದ್ದು ಸಾಧ್ಯವಾದಷ್ಟೂ ವಿದ್ಯಾರ್ಥಿಗಳಿಗೆ ಅವರ ಸಮೀಪದ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯ ಝಳ ಇರುವುದರಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ ಕೆಡೆಟ್‌ಗಳು ಪರೀಕ್ಷೆಯು ಸುಗಮವಾಗಿ ನಡೆಯಲು ಸಹಕರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Advertisement

20ರಂದು ಹೊರನಾಡು ಕನ್ನಡಿಗರಿಗೆ ಪರೀಕ್ಷೆ:
ಇದೇ 20ರಂದು ಬೆಳಗಾವಿ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಬೆಳಿಗ್ಗೆ 11.30ರಿಂದ 12.30ರವರೆಗೆ ಕನ್ನಡ ಪರೀಕ್ಷೆ ನಡೆಯಲಿದೆ. ಈ ಸಲ ಒಟ್ಟು 1,545 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲಿ¨ªಾರೆ ಎಂದು ಅವರು ವಿವರಿಸಿದರು.

ಪರೀಕ್ಷಾರ್ಥಿಗಳಿಗೆ ಸೂಚನೆಗಳು
ಅಭ್ಯರ್ಥಿಗಳು ಪ್ರವೇಶಪತ್ರ ಮತ್ತು ಗುರುತಿನ ಪತ್ರದೊಂದಿಗೆ ಬರುವುದು ಕಡ್ಡಾಯ. ನೀಲಿ ಅಥವಾ ಕಪ್ಪು ಬಣ್ಣದ ಪೆನ್‌ ಮಾತ್ರ ಬಳಸಬೇಕು. ತುಂಬುದೋಳಿನ ಅಂಗಿ ಧರಿಸಿಕೊಂಡು ಬರುವಂತಿಲ್ಲ. ಮೊಬೈಲ್ ಬ್ಲೂಟೂತ್‌, ಟ್ಯಾಬ್ಲೆಟ್‌, ಕೈಗಡಿಯಾರ, ಕ್ಯಾಲುಕುಲೇಟರ್‌, ನೋಟ್‌ ಪ್ಯಾಡ್‌, ಐ-ಪಾಡ್‌, ಇಯರ್‌ ಫೋನ್‌ ಇತ್ಯಾದಿಗಳನ್ನು ತರುವಂತಿಲ್ಲ. ಒಮ್ಮೆ ಉತ್ತರವನ್ನು ಗುರುತು ಮಾಡಿದ ಬಳಿಕ ಅದನ್ನು ಅಳಿಸಲು ಅವಕಾಶವಿರುವುದಿಲ್ಲ. ಓಎಂಆರ್‌ ಶೀಟಲ್ಲಿ ಪ್ರವೇಶಪತ್ರ ಸಂಖ್ಯೆ, ಪ್ರಶ್ನೆಪತ್ರಿಕೆಯ ವರ್ಶನ್‌ ಕೋಡ್‌ ನಮೂದಿಸುವುದು ಕಡ್ಡಾಯ. ಓಎಂಆರ್‌ ಶೀಟ್‌ನ ಕೆಳಭಾಗದಲ್ಲಿ ಅಭ್ಯರ್ಥಿಗಳು ಮರೆಯದೆ ಸಹಿ ಮಾಡಬೇಕು. ಓಎಂಆì ಶೀಟ್ನಲ್ಲಿರುವ ಟೈಮಿಂಗ್‌ ಮಾರ್ಕ್‌ ಮೇಲೆ ಏನನ್ನೂ ಬರೆಯುವುದಾಗಲಿ, ಗೀಚುವುದಾಗಲಿ ಮಾಡಬೇಡಿ ಎಂದು ಸೂಚಿಸಲಾಗಿದೆ.

ಹಿಜಾಬ್‌ ಗೊಂದಲ
ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಬಹುದೇ ಅಥವಾ ಪರೀಕ್ಷಾ ಕೇಂದ್ರದ ಹೊರಗೆ ಹಿಜಾಬ್‌ ಬಿಟ್ಟು ಬರಬೇಕೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡಲು ಕೆಇಎ ಅಧಿಕಾರಿಗಳು ನಿರಾಕರಿಸಿದ್ದು ಗೊಂದಲ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next