ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಸಂಬಂಧ ಸೆ.5ರೊಳಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸುವ ಸಾಧ್ಯತೆ ಇದೆ.
ಸೆ.15ರ ವೇಳೆಗೆ ಕೌನ್ಸೆಲಿಂಗ್ ಆರಂಭಿಸುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಸಿಇಟಿ -2022ರ ಫಲಿತಾಂಶ ಪ್ರಕಟವಾಗಿ ತಿಂಗಳಾದರೂ ಪ್ರವೇಶ ಪ್ರಕ್ರಿಯೆ ಆರಂಭ ಮಾಡಿದಿರುವ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ.ಮತ್ತೊಂದೆಡೆ ಖಾಸಗಿ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಈಗಾಗಲೇ ಕೆಲವೆಡೆ ತರಗತಿಗಳನ್ನು ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ.
ಖಾಸಗಿ ಕಾಲೇಜುಗಳು ಸೆ.4ರ ಒಳಗೆ ಇನ್‌ಟೇಕ್ ವಿವರಗಳನ್ನು ಕೆಇಎ ಗೆ ಸಲ್ಲಿಸಲಿವೆ. ಸೆ.5 ಅಥವಾ 6ರಂದು ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಲಾಗುತ್ತದೆ. ಸೆ.15ರ ವೇಳೆಗೆ ಮೊದಲ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದರು.
ಮುಂದಿನ 3-4 ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಆದಷ್ಟು ಬೇಗ ಪ್ರಕ್ರಿಯೆ ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮತ್ತೊಂದು ಅವಕಾಶ:
ಆ.24ರಿಂದ 26ರ ವರೆಗೆ ನಡೆದ ವೈದ್ಯಕೀಯ ತಪಾಸಣೆಗೆ ಗೈರು ಹಾಜರಾದ ವಿಕಲಚೇತನ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ಸೆ.6ರಂದು ಬೆಂಗಳೂರಿನ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ತಪಾಸಣೆ ನಡೆಸಲಾಗುತ್ತದೆ. ಅಂದು ಬೆಳಗ್ಗೆ 9 ಗಂಟೆಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಹಾಜರಾಗುವಂತೆ ಕೆಇಎ ತಿಳಿಸಿದೆ.