ನಂಜನಗೂಡು: ಸಾರ್ವಜನಿಕರ ಪಾಲಿಗೆ ಆಪದ್ಬಾಂದವರಾಗಬೇಕಾದ ಸೆಸ್ಕಾಂ ಅಧಿಕಾರಿಗಳು ಕೇಬಲ್ ಮಾಫಿಯಾದವರ ಹಿಡಿತಕ್ಕೆ ಸಿಲುಕಿ ಸರ್ಕಾರಕ್ಕೆ ಸಂದಾಯವಾಗಬೇಕಾದ ಹಣ ಖೋತಾಕ್ಕೆ ಕಾರಣವಾಗುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಶಂಕರಪುರ ಸುರೇಶ್, ಜನಸಂಗ್ರಾಮ ಪರಿಷತ್ ವಿಭಾಗೀಯ ಕಾರ್ಯದರ್ಶಿ ನಗರ್ಲೆ ಎಂ.ವಿಜಯಕುಮಾರ್ ಆರೋಪಿಸಿದರು. ಸೆಸ್ಕಾಂ ಕಚೇರಿ ಆವರಣದಲ್ಲಿ ನಡೆದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯುತ್ ಕಂಬಗಳ ಮೂಲಕ ಅಕ್ರಮವಾಗಿ ಕೇಬಲ್ ಸಂಪರ್ಕ ಪಡೆದಿರುವ ಕೇಬಲ್ ಆಪರೇಟರ್ ಗಳು ಸರ್ಕಾರಕ್ಕೆ ಸೂಕ್ತ ಹಣ ಪಾವತಿ ಮಾಡದೇ ಸೆಸ್ಕಾಂ ಇಲಾಖೆ ಅಧಿಕಾರಿಗಳ ಸಹಕಾರವೇ ಕಾರಣ ಎಂಬ ಆರೋಪ ಕೇಳಿಬಂದಾಗ ಅಧಿಕಾರಿಗಳು ಕಕ್ಕಾ ಬಿಕ್ಕಿಯಾದರು.
ಸಾವಿರಾರು ವಿದೂÂತ್ ಕಂಬಗಳಿಂದ ಹಾದು ಹೋಗಿರುವ ಕೇಬಲ್ ಗಳಿಂದ ಕೇವಲ 22 ಸಾವಿರ ರೂ. ವಸೂಲಿ ಮಾಡಲಾಗಿದೆ ಎಂಬ ಉತ್ತರ ಬಂದಾಗ, ಕೋಪಗೊಂಡ ವಿಜಯ ಕುಮಾರ ಒಂದು ಕಂಬಕ್ಕೆ ಎಷ್ಟು ಫೀಜು ಎಂದರು. ಅಲ್ಲದೆ, ಮನೆ ವಿದ್ಯುತ್ ಬಿಲ್ ಪಾವತಿಸದಿದ್ದರೆ ಮುಲಾಜಿಲ್ಲದೆ ಸಂಪರ್ಕವನ್ನೇ ಕಡಿತಗೊಳಿಸುವ ಅಧಿಕಾರಿಗಳಿಗೆ ಬಾಕಿ ಹಣ ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧೀಕ್ಷಕ ಎಂಜಿನಿಯರ್ ನರಸಿಂಹೇಗೌಡ, ಕೇಬಲ್ ಆಪರೇಟರ್‌ಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಹಣ ಸಂದಾಯ ಮಾಡದಿದ್ದಲ್ಲಿ ಕೆಲವೇ ದಿನಗಳಲ್ಲಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಹೆಡಿಯಾಲ ಭಾಗದಲ್ಲಿ ಭಾಗ್ಯಜ್ಯೋತಿ ಫಲಾನುಭವಿಗಳಿಗೆ 20 ಸಾವಿರಕ್ಕೂ ಹೆಚ್ಚು ಬಿಲ್ ನೀಡಿದ್ದಾರೆ. ಜೊತೆಗೆ ಸಂಪರ್ಕಗಳನ್ನು ಕಡಿತಗೊಳಿಸುವ ಮೂಲಕ ಸಿಬ್ಬಂದಿಗಳು ಉದ್ಧಟತನ ಪ್ರದರ್ಶಿಸಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವಿದ್ಯಾಸಾಗರ್ ಆರೋಪಿಸಿದರು.
ಭಾಗ್ಯಜ್ಯೋತಿ ಫಲಾನುಭವಿಗಳ ಉಚಿತ ಯುನಿಟ್ ಮಿತಿಯನ್ನು 40 ಯುನಿಟ್‌ಗೆ ಏರಿಸಲಾಗಿದ್ದು, ಸಂಪರ್ಕ ಕಡಿತಗೊಳಿಸುವಂತೆ ಎಲ್ಲೂ ಹೇಳಿಲ್ಲ. ಈ ಬಗ್ಗೆ ಪರಿಶೀಲಿಸುವುದಾಗಿ ಎಇಇ ಆನಂದ್ ತಿಳಿಸಿದರು. ಸೆಸ್ಕ್ ಕಾರ್ಯಪಾಲಕ ಅಭಿಯಂತರ ಎ.ಎ.ಸುನೀಲ್‌ಕುಮಾರ್, ಎಇಇಗಳಾದ ಸಿ.ಎಸ್.ಆನಂದ್, ಶ್ರೀಧರ್, ಗ್ರಾಹಕರ ಸಲಹಾ ಸಮಿತಿ ಅಧ್ಯಕ್ಷ ಕೆ.ಪಿ.ಮಲ್ಲಿಕಾರ್ಜುನಪ್ಪ, ಸದಸ್ಯರಾದ ಸುಂದರ್‌ರಾಜ್, ಸೂರ್ಯಕುಮಾರ್ ಮತ್ತಿತರರಿದ್ದರು.