Advertisement

ಶೂ-ಸಮವವಸ್ತ್ರಕ್ಕೆ ಪ್ರಮಾಣಪತ್ರ ಕಡ್ದಾಯ

04:57 PM Nov 03, 2018 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಶಾಲಾ ಸಮವಸ್ತ್ರ ಹಾಗೂ ಶೂ ಖರೀದಿಯಲ್ಲಿ ಭರ್ಜರಿ ಆಟವಾಡುತ್ತಿದ್ದ ಏಜೆನ್ಸಿಗಳಿಗೆ ಜಿಲ್ಲಾ ಪಂಚಾಯಿತಿ ಈ ಬಾರಿ ಶಾಕ್‌ ನೀಡಿದೆ. ಯಾವುದೇ ಏಜೆನ್ಸಿ ಶಾಲೆಗಳಿಗೆ ಬಟ್ಟೆ ಪೂರೈಕೆ ಮಾಡುವ ಮುನ್ನ ಗುಣಮಟ್ಟದ ಪ್ರಮಾಣ ಪತ್ರವನ್ನು ತೋರಿಸುವುದು ಕಡ್ಡಾಯ ಮಾಡಿದೆ. ಇದು ಏಜೆನ್ಸಿಗಳಿಗೆ ನುಂಗಲಾರದ ತುಪ್ಪದಂತಾಗಿದೆ.

Advertisement

ಹೌದು. ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ವಿತರಣೆ ಮಾಡುವ ಸಮವಸ್ತ್ರ ಪೂರೈಕೆಗೆ ಪ್ರಭಾವಿಗಳ ಆಟ ಭರ್ಜರಿಯಾಗಿ ನಡೆಯುತ್ತಿತ್ತು. ವಿಶೇಷವೆಂದರೆ, ರಾಜ್ಯ ಶಿಕ್ಷಣ ಇಲಾಖೆಯಿಂದ ಆಯಾ ಶಾಲೆ- ಎಸ್‌ ಡಿಎಂಸಿ ಖಾತೆಗೆ ಅನುದಾನ ನೇರವಾಗಿ ಜಮಾ ಮಾಡುವ ವ್ಯವಸ್ಥೆಯಿದ್ದರೂ ಸಮವಸ್ತ್ರ, ಶೂ ಖರೀದಿಯಲ್ಲಿ ಆಂತರಿಕ ರಾಜಕಾರಣವೇ ಜೋರಾಗಿ ನಡೆಯುತ್ತಿತ್ತು. ಮೇಲ್ನೋಟಕ್ಕೆ ಬಿಇಒ, ಡಿಡಿಪಿಐ ಹಸ್ತಕ್ಷೇಪ ಇಲ್ಲ ಎಂದರೂ ಪರೋಕ್ಷವಾಗಿ ಸೂಚನೆ ನೀಡುವ ಮಾತುಗಳು ಕೇಳಿ ಬರುತ್ತಿದ್ದವು.

ಇನ್ನೂ ಜಿಲ್ಲಾದ್ಯಂತ ಎಲ್ಲೆಂದರಲ್ಲಿ ತಲೆ ಎತ್ತಿದ್ದ ಏಜೆನ್ಸಿಗಳು ಆಯಾ ಶಾಲೆಗೆ ಭೇಟಿ ನೀಡಿ ಶಾಲಾ ಸಮವಸ್ತ್ರ ನಾವು ಪೂರೈಸುತ್ತೇವೆ ಎಂದು ದುಂಬಾಲು ಬೀಳುತ್ತಿದ್ದವು. ಇದರಿಂದ ಎಸ್‌ಡಿಎಂಸಿ ಆಟವೂ ಜೋರಾಗಿ ನಡೆಯುತ್ತಿತ್ತು. ಶಾಲಾ ಮುಖ್ಯ ಶಿಕ್ಷಕರು ಏಜೆನ್ಸಿಗಳ ಜೊತೆ ಒಪ್ಪಂದ ಮಾಡಿಕೊಂಡು ಸಮವಸ್ತ್ರ ಪಡೆಯುತ್ತಿದ್ದರು. ಆದರೆ, ಆ ಸಮವಸ್ತ್ರಗಳು ಸಹ ಗುಣಮಟ್ಟ ಇಲ್ಲದಿರುವ ಕುರಿತು ಆಪಾದನೆಗಳು ಕೇಳಿ ಬರುತ್ತಿದ್ದವು. ಇದು ವ್ಯಾಪಕ ಚರ್ಚೆಗೆ ಎಡೆಮಾಡಿಕೊಡುತ್ತಿತ್ತು. ಏಜೆನ್ಸಿಗಳಿಗೆ ಬ್ರೆಕ್‌ ಹಾಕಬೇಕೆನ್ನುವ ಕೂಗು ಎಲ್ಲೆಡೆ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತಿರುವ ಜಿಪಂ ಗುಣಮಟ್ಟದ ಕುರಿತು ಮಾತನ್ನಾಡಿದೆ.

ಪ್ರಮಾಣಪತ್ರ ಅವಶ್ಯ: ಇನ್ಮುಂದೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಸಮವಸ್ತ್ರ ಹಾಗೂ ಶೂ ವಿತರಣೆ ಮಾಡುವೆವು ಎನ್ನುವ ಏಜೆನ್ಸಿಗಳು ಸಮವಸ್ತ್ರಗಳ ಪೂರೈಕೆಯ ಕುರಿತು ಬೆಂಗಳೂರಿನಿಂದ ಗುಣಮಟ್ಟದ ಪ್ರಮಾಣಪತ್ರ ತರುವುದು ಅವಶ್ಯವಾಗಿದೆ. ಅದನ್ನು ಶಾಲೆಗಳಲ್ಲಿ ತೋರಿಸಿ ಸಮವಸ್ತ್ರ ಶೂಗಳನ್ನು ಪೂರೈಕೆ ಮಾಡಬಹುದಾಗಿದೆ. ಒಂದು ವೇಳೆ ಗುಣಮಟ್ಟದ ಪ್ರಮಾಣಪತ್ರವನ್ನು ಶಾಲಾ ಮುಖ್ಯ ಶಿಕ್ಷಕರು ನೋಡದೇ ಬಟ್ಟೆಗಳನ್ನು ಖರೀದಿ ಮಾಡಿದರೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರೇ ಇದಕ್ಕೆ ಹೊಣೆಯಾಗಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಖಡಕ್ಕಾಗಿ ಸೂಚನೆ ನೀಡಿದೆ.

ಇನ್ನೂ ಜಿಲ್ಲೆಯಲ್ಲಿನ ಹಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರದಿಂದ ಲಕ್ಷಾಂತರ ಮೊತ್ತದ ಅನುದಾನ ಎಸ್‌ಡಿಎಂಸಿ ಖಾತೆಗೆ ಜಮೆಯಾಗಲಿದೆ. ಈ ಅನುದಾನದ ಮೊತ್ತ ಲಕ್ಷ ರೂ. ದಾಟಿದರೆ ಶಾಲೆ ಮುಖ್ಯ ಶಿಕ್ಷಕರು ಟೆಂಡರ್‌ ಕರೆದು ಸಮವಸ್ತ್ರಗಳ ಖರೀದಿ ಮಾಡಬೇಕು. ದೊಡ್ಡ ಮೊತ್ತದ ಹಣವನ್ನು ಟೆಂಡರ್‌ ಕರೆಯದೇ ಬಟ್ಟೆಗಳ ಖರೀದಿಸುವಂತಿಲ್ಲ.

Advertisement

ಇದರಲ್ಲೂ ಶೂ-ಸಮವಸ್ತ್ರಗಳ ಗುಣಮಟ್ಟದ ಪರಿಶೀಲನೆ ಅವಶ್ಯವಾಗಿ ನಡೆಯಲಿದೆ. ಇಲ್ಲಿ ದೂರುಗಳು ಕೇಳಿ ಬಂದರೆ ಜಿಲ್ಲಾ, ತಾಲೂಕು ಹಂತದ ಸಮಿತಿ ತನಿಖೆ ನಡೆಸಲಿವೆ ಎನ್ನುವ ಸಂದೇಶವನ್ನು ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೀಡಿದೆ. ಒಟ್ಟಾರೆ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ದರಕ್ಕೆ ಬಟ್ಟೆ ಖರೀದಿಸಿ ಮಕ್ಕಳಿಗೆ ಪೂರೈಕೆ ಮಾಡುತ್ತಿರುವುದಕ್ಕೆ ಜಿಪಂ ಈ ಬಾರಿ ಮೊದಲೇ ಖಡಕ್‌ ಸೂಚನೆ ನೀಡಿದೆ. ಗುಣಮಟ್ಟದ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಏಜೆನ್ಸಿಗಳು ಸಮವಸ್ತ್ರ-ಶೂ ಪೂರೈಕೆ ಮಾಡುವ ಮುನ್ನ ಶಾಲಾ ಮುಖ್ಯ ಶಿಕ್ಷಕರಿಗೆ ಗುಣಮಟ್ಟದ ಪ್ರಮಾಣಪತ್ರ ತೋರಿಸಬೇಕು. ನಂತರ ಶಾಲೆಗಳಿಗೆ ಪೂರೈಕೆ ಮಾಡಬೇಕು. ಪ್ರಮಾಣಪತ್ರ ಇಲ್ಲದೇ ಸಮವಸ್ತ್ರ ಖರೀದಿ ಮಾಡುವಂತಿಲ್ಲ. ಖರೀದಿ ಮಾಡಿದರೆ ಅಂತಹ ಶಾಲೆಗಳ ಮುಖ್ಯ ಶಿಕ್ಷಕರೇ ಹೊಣೆಯಾಗಲಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದೇವೆ.
·ವೆಂಕಟರಾಜಾ, ಜಿಪಂ ಸಿಇಒ ಕೊಪ್ಪಳ

„ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next