ಹೊಸದಿಲ್ಲಿ: ಕೇಂದ್ರ ಸಶಸ್ತ್ರ ಪಡೆಗಳು (ಸಿಎಪಿಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್‌ಡಿಆರ್‌ಎಫ್)ಗಳಿಗೆ ಸಿರಿಧಾನ್ಯದಿಂದ ಮಾಡಲಾದ ಆಹಾರವನ್ನು ಬಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಎಲ್ಲ ಭದ್ರತಾ ಪಡೆಗಳೊಂದಿಗೆ ಸಮಗ್ರ ಮಾತುಕತೆಯ ಅನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಸಿಎಪಿಎಫ್ ಮತ್ತು ಎನ್‌ಡಿಆರ್‌ಎಫ್ನ ಊಟದ ಮೆನುನಲ್ಲಿ ಶೇ.30ರಷ್ಟು ಸಿರಿಧಾನ್ಯ ಆಹಾರವನ್ನು ಸೇರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ “ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023′ ಆಚರಿಸಲಾಗುತ್ತಿದೆ. ಸಿರಿಧಾನ್ಯಗಳು ಆರೋಗ್ಯಕ್ಕೆ ಒಳ್ಳೆಯದು. ಇದರ ಬಳಕೆಯಿಂದ ರೈತರಿಗೆ ಸಹಕಾರಿಯಾಗುವ ಜತೆಗೆ ಇದು ಪರಿಸರ ಪೂರಕವಾಗಿದೆ. ಪೌಷ್ಟಿಕ ಆಹಾರವನ್ನು ಒದಗಿಸುವುದ ರೊಂದಿಗೆ ಅದಕ್ಕೆ ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಸೃಷ್ಟಿಸಲು ವಿಶ್ವಸಂಸ್ಥೆಯು 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ.