ಅಂತಾರಾಷ್ಟ್ರೀಯ ಖ್ಯಾತಿಯ ಹಾರ್ಮೋನಿಯಂ ವಾದಕ ಡಾ| ರವೀಂದ್ರ ಗುರುರಾಜ ಕಾಕೋಟಿ ಮತ್ತು ತಬಲಾವಾದಕ ಡಾ| ಉದಯ ರಾಜ್ ಅವರ ಜತೆ 60 ಮಂದಿ ಹಾರ್ಮೋನಿಯಂ ಕಲಾವಿದರು ಏಕಕಾಲದಲ್ಲಿ ಹಾರ್ಮೋನಿಯಂ ನುಡಿಸಿ ಆಕರ್ಷಿಸಿದರು. ಹಾರ್ಮೋನಿಯಂನ್ನು ಸಂವೇದಿನಿ ಎಂದು ಕರೆದರೆ ಇಲ್ಲಿ ಹಲವು ಉಪಕರಣಗಳ ಸಂಯೋಜನೆಯಾದ ಕಾರಣ ಬಹುಸಂವೇದಿನಿ ಎಂದು ಕರೆದರು. ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶದಿಂದ ಬಂದ ಕಲಾವಿದರಲ್ಲದೆ ಹುಬ್ಬಳ್ಳಿ, ಮಂಗಳೂರು, ಕಾರ್ಕಳ ಮೊದಲಾದೆಡೆಗಳಿಂದ ಬಂದವರೂ ಇದ್ದರು. ಭಾರ್ಗವಿ ಆರ್ಟ್ಸ್ ಆ್ಯಂಡ್ ಡ್ಯಾನ್ಸ್ ಅಕಾಡೆಮಿ ಮತ್ತು ಲಕ್ಷ್ಮೀ ಗುರುರಾಜ್ ನೇತೃತ್ವದ 40 ಮಂದಿ ಕಲಾವಿದರು ನೃತ್ಯಪ್ರದರ್ಶನ ನೀಡಿದರು. ಮೊದಲು ಮತ್ತು ಕೊನೆಯಲ್ಲಿ ಹಾರ್ಮೋನಿಯಂ ವಾದನವಿದ್ದರೆ ನಡುವಿನಲ್ಲಿ ನೃತ್ಯ ನಡೆಯಿತು. ಪ್ರಧಾನ ವಾದ್ಯ ಸ್ಥಾನದಿಂದ ವಂಚಿತವಾಗುತ್ತಿರುವ ಹಾರ್ಮೋನಿಯಂ ಉಪಕರಣವನ್ನು ಇಷ್ಟೊಂದು ಕಲಾವಿದರು ನುಡಿಸುತ್ತಿರುವುದು ಇದರ ಪ್ರಾಮುಖ್ಯವನ್ನು ತೋರಿಸುತ್ತದೆ. ಕೇವಲ ಹಾರ್ಮೋನಿಯಂ ವಾದನವಲ್ಲದೆ ರವೀಂದ್ರ ಕಾಕೋಟಿಯವರು ಸಂಗೀತ ರಸದೌತಣವನ್ನೂ ನೀಡಿದರು.
ನಾದನಮನ ಸಲ್ಲಿಸಿದ ಅನಂತರ ಕಲಾವಿದರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಗೌರವ ಸಲ್ಲಿಸಿದ ಸಂದರ್ಭ “ನಮಗೆ ನೂರು ದಿನಗಳ ಪೂಜೆ ಎನ್ನುವುದು ಮುಖ್ಯವಲ್ಲ. ನಾವು ಲೆಕ್ಕವನ್ನೂ ಹಾಕಿಲ್ಲ. ಆದರೆ ಇದೊಂದು ಅಪರೂಪದ ಗಾನ ಸಮ್ಮೇಳನ. 60 ಹಾರ್ಮೋನಿಯಂ ಉಪಕರಣಗಳು ಒಂದೆಡೆ ಸೇರಿಯೂ ಒಂದೇ ರೀತಿಯ ನಾದವನ್ನು ಹೊರಹೊಮ್ಮಿಸಿವೆ. ಇದು ಸಮಾಜಕ್ಕೂ ಏಕತೆಯ ಸಂದೇಶ ಸಾರುವಂತಿದೆ’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
Advertisement
ಮಟಪಾಡಿ ಕುಮಾರಸ್ವಾಮಿ