ಹೊಸದಿಲ್ಲಿ : ಕಾಂಗ್ರೆಸ್ ಆಕ್ಷೇಪದ ಹೊರತಾಗಿಯೂ ಕೇಂದ್ರ ಸರಕಾರ ಇಂದು ಹೊಸ ಸಿಬಿಐ ಮುಖ್ಯಸ್ಥರ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಹೊಸ ಸಿಬಿಐ ಮುಖ್ಯಸ್ಥನ ಹುದ್ದೆಗೆ ಸರಕಾರ ಪ್ರಸ್ತಾವಿಸಿದ ಮೂರೂ ಹೆಸರುಗಳಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ನಡೆದಿದ್ದ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಸಿಬಿಐ ಮುಖ್ಯಸ್ಥರನ್ನು ನೇಮಿಸುವ ಮೂವರು ಸದಸ್ಯರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಮಂಡಳಿಯಲ್ಲಿ ಖರ್ಗೆ ಓರ್ವ ಸದಸ್ಯರಾಗಿದ್ದಾರೆ.
ಈ ಸಮಿತಿಯು ನಿನ್ನೆ ಶುಕ್ರವಾರ ಸಭೆ ನಡೆಸಿತ್ತು. ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸಿಬಿಐ ಮುಖ್ಯಸ್ಥನ ಹುದ್ದೆಗೆ ಮೂರು ಸಂಭಾವ್ಯ ಹೆಸರುಗಳನ್ನು ಮುಂದಿಟ್ಟಿದ್ದರು. ಆದರೆ ಖರ್ಗೆ ಅವರು ಮೂರೂ ಹೆಸರುಗಳಿಗೆ ವಿರೋಧ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಪ್ರಸ್ತಾವಿಸಲ್ಪಟ್ಟಿದ್ದ ಹೆಸರುಗಳೆಂದರೆ ಜಾವೀದ್ ಅಹ್ಮದ್, ರಜನಿ ಕಾಂತ್ ಮಿಶ್ರಾ ಮತ್ತು ಎಸ್ ಎಸ್ ದೇಶವಾಲ್. ಇವರೆಲ್ಲರೂ 1984ರ ಬ್ಯಾಚಿನ ಹಿರಿಯ ಐಪಿಎಸ್ ಅಧಿಕಾರಿಗಳು.