ಹೊಸದಿಲ್ಲಿ: ವಿವಾದ ಸೃಷ್ಟಿಸಿರುವ ಪ್ರಧಾನಿ ನರೇಂದ್ರ ಮೋದಿ ಬಗೆಗಿನ ಬಿಬಿಸಿ ಡಾಕ್ಯುಂಟರಿಯ ಎಲ್ಲಾ ಲಿಂಕ್ ಗಳನ್ನು ತೆಗೆದುಹಾಕಲು ಯೂಟ್ಯೂಬ್ ಮತ್ತು ಟ್ವಿಟರ್ ಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ವರದಿಯಾಗಿದೆ.
ಬಿಬಿಸಿ ವಾಹಿನಿಯು 2002ರ ಗುಜರಾತ್ ದಂಗೆಯ ಕುರಿತಾದ ಸಾಕ್ಷ್ಯಚಿತ್ರವನ್ನು ರಚಿಸಿದೆ. “ಇಂಡಿಯಾ: ದಿ ಮೋದಿ ಕ್ವಶ್ಚನ್” ಶೀರ್ಷಿಕೆಯ ಸಾಕ್ಷ್ಯಚಿತ್ರದ ಟ್ವೀಟ್‌ಗಳು ಮತ್ತು ಯೂಟ್ಯೂಬ್ ವೀಡಿಯೊಗಳು ಇನ್ನು ಮುಂದೆ ಮೈಕ್ರೋಬ್ಲಾಗಿಂಗ್ ಮತ್ತು ವೀಡಿಯೋ ಹಂಚಿಕೆ ವೆಬ್ ಸೈಟ್ ಗಳಲ್ಲಿ ಕಾಣಿಸುವುದಿಲ್ಲ.
50 ಕ್ಕೂ ಹೆಚ್ಚು ಟ್ವೀಟ್‌ಗಳನ್ನು ತೆಗೆದುಹಾಕಲು ಸಚಿವಾಲಯ ಟ್ವಿಟರ್‌ಗೆ ತಿಳಿಸಿದೆ ಎಂದು ಮೂಲಗಳು ತಿಳಿಸಿದೆ.
ಇದನ್ನೂ ಓದಿ:2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆ ?
” ಬಿಬಿಸಿ ಸಾಕ್ಷ್ಯಚಿತ್ರದ ನನ್ನ ಟ್ವೀಟ್ ಅನ್ನು ಟ್ವಿಟರ್ ತೆಗೆದು ಹಾಕಿದೆ. ಇದು ಲಕ್ಷಗಟ್ಟಲೆ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಂದು ಗಂಟೆಯ ಬಿಬಿಸಿ ಸಾಕ್ಷ್ಯಚಿತ್ರವು ಪ್ರಧಾನಿ ಅಲ್ಪಸಂಖ್ಯಾತರನ್ನು ಹೇಗೆ ದ್ವೇಷಿಸುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತದೆ” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಆರೋಪಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಲಿಂಕ್ ಗಳನ್ನು ತೆಗೆದುಹಾಕಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶ ನೀಡಿದೆ. ಯೂಟ್ಯೂಬ್ ಮತ್ತು ಟ್ವಿಟ್ಟರ್ ಎರಡೂ ಆದೇಶವನ್ನು ಅನುಸರಿಸಲು ಒಪ್ಪಿಕೊಂಡಿವೆ ಎಂದು ಮೂಲಗಳು ತಿಳಿಸಿದೆ.