ಹೊಸದಿಲ್ಲಿ: ಯಾವುದೇ ರೋಗ ಲಕ್ಷಣಗಳಿಲ್ಲದೇ ಕೋವಿಡ್ 19 ಪಾಸಿಟಿವ್ ಬರುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ಹೋಂ ಐಸೋಲೇಷನ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ.
ಅಲ್ಪ ಪ್ರಮಾಣದ ರೋಗಲಕ್ಷಣ ಇರುವವರು ಅಥವಾ ರೋಗಲಕ್ಷಣ ಕಂಡುಬರುವ ಮುನ್ನವೇ ದಾಖಲಾದ ರೋಗಿಗಳ ಪಟ್ಟಿಗೆ ರೋಗಲಕ್ಷಣ ಇಲ್ಲದಂಥವರನ್ನೂ ಸೇರಿಸಿ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗಿದೆ.
ಮನೆಯ ಇತರೆ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಾರದಂತೆ ಪ್ರತ್ಯೇಕವಾಗಿರಲು ಸೂಕ್ತ ವ್ಯವಸ್ಥೆ ಮನೆಯಲ್ಲಿದ್ದರೆ ಮಾತ್ರವೇ, ರೋಗ ಲಕ್ಷಣ ಇಲ್ಲದವರಿಗೆ ಹೋಂ ಐಸೋಲೇಷನ್‌ಗೆ ಅನುಮತಿ ನೀಡಲಾಗುತ್ತದೆ.
ಆದರೆ, ರೋಗನಿರೋಧಕ ಶಕ್ತಿ ಕಡಿಮೆಯಿರುವಂಥ ರೋಗಿಗಳು (ಎಚ್‌ಐವಿ ಸೋಂಕಿತರು, ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದವರು, ಕ್ಯಾನ್ಸರ್ ರೋಗಿಗಳು ಇತ್ಯಾದಿ) ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಲು ಅರ್ಹರಾಗಿರುವುದಿಲ್ಲ.
ಜತೆಗೆ, 60 ವರ್ಷ ದಾಟಿದವರು, ಹೈಪರ್‌ಟೆನ್ಶನ್, ಮಧುಮೇಹ, ಹೃದ್ರೋಗ, ಶ್ವಾಸಕೋಶ/ ಯಕೃತ್ತು/ ಮೂತ್ರಕೋಶದ ಸಮಸ್ಯೆ ಹೊಂದಿರುವವರು ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಬೇಕೆಂದರೆ ವೈದ್ಯಕೀಯ ಅಧಿಕಾರಿಯಿಂದ ಸಮರ್ಪಕ ಪರಿಶೀಲನೆಗೆ ಒಳಪಡಬೇಕು ಎಂದು ಸೂಚಿಸಲಾಗಿದೆ.
ಒಂದೇ ದಿನ 20 ಸಾವಿರ ಕೇಸು
ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ 20,903 ಮಂದಿಗೆ ಸೋಂಕು ದೃಢಪಟ್ಟಿದ್ದು, ದೈನಂದಿನ ಸೋಂಕಿತರ ಸಂಖ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಗುರುವಾರ ಬೆಳಗ್ಗೆ 8ರಿಂದ ಶುಕ್ರವಾರ ಬೆಳಗ್ಗೆ 8ರವರೆಗೆ 379 ಮಂದಿ ಮೃತಪಟ್ಟು, 20,903 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಇದೇ ವೇಳೆ, 3.79 ಲಕ್ಷಕ್ಕೂ ಹೆಚ್ಚು ಮಂದಿ ಈವರೆಗೆ ಗುಣಮುಖರಾಗಿದ್ದಾರೆ.