ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ತೆರೆದಿದ್ದ 22 ಕಡಲೆ ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಮೇ 14ಕ್ಕೆ ಮುಕ್ತಾಯಗೊಂಡಿದ್ದು, ಈ ವರ್ಷ ರೈತರಿಂದ ಉತ್ತಮ ಸ್ಪಂದನೆ ಲಭಿಸಿದೆ.
ಕಳೆದ ವರ್ಷ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬದ ಜತೆಗೆ ಹೊರಗಡೆಯೇ ಅಧಿಕ ಬೆಲೆ ಲಭಿಸಿದ ಕಾರಣ ರೈತರು ಬೆಂಬೆಲೆಯ ಕೇಂದ್ರಗಳಲ್ಲಿ ಕಾಳು ಮಾರಾಟಕ್ಕೆ ಹಿಂದೇಟು ಹಾಕಿದ್ದರು. ಆದರೆ ಈ ವರ್ಷ ನಿಗದಿತ ಸಮಯಕ್ಕೆ ನೋಂದಣಿ ಪ್ರಕ್ರಿಯೆ ಆರಂಭದ ಜತೆ ಜತೆಗೆ ಖರೀದಿ ಪ್ರಕ್ರಿಯೆಗೂ ಚಾಲನೆ ನೀಡಿದ್ದರಿಂದ ಮಾರಾಟಕ್ಕೆ ಹೆಸರು ನೋಂದಣಿ ಮಾಡಿದ್ದ ರೈತರ ಪೈಕಿ ಶೇ.88 ರೈತರು ಬೆಳೆ ಮಾರಾಟ ಮಾಡಿದ್ದಾರೆ. ಹೀಗಾಗಿ ಪ್ರಸಕ್ತ 2021-22ನೇ ಸಾಲಿನಲ್ಲಿ 2,08,700 ಕ್ವಿಂಟಲ್‌ನಷ್ಟು ಕಡಲೆ ಖರೀದಿಯಾಗಿದೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆ ಕಾಳನ್ನು ಪ್ರತಿ ಕ್ವಿಂಟಲ್ ಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ 5,230 ರೂ.ಗಳಂತೆ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಕೇಂದ್ರಗಳನ್ನು ತೆರೆಯಲಾಗಿತ್ತು. ಫೆ.14ರಿಂದ ಆರಂಭಗೊಂಡಿದ್ದ ಖರೀದಿ ಕೇಂದ್ರಗಳಲ್ಲಿ ಮಾರ್ಚ್ ತಿಂಗಳ ಅಂತ್ಯದವರೆಗೆ ನೋಂದಣಿಗೆ ಅವಕಾಶ ನೀಡಲಾಗಿತ್ತು. ಆರಂಭದಲ್ಲಿ 19 ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಬಳಿಕ ರೈತರ ಬೇಡಿಕೆ ಅನುಸಾರ ಬರೋಬ್ಬರಿ 22 ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಲ್ ಹಾಗೂ ಗರಿಷ್ಠ 15 ಕ್ವಿಂಟಲ್ ಪ್ರಮಾಣದ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳನ್ನು ಖರೀದಿಸಲಾಗಿದೆ. ಅದರಲ್ಲೂ ಈ ಸಲ ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚಳಗೊಂಡ ಪರಿಣಾಮ ಖರೀದಿ ಪ್ರಮಾಣ ಹೆಚ್ಚಳವಾಗಿದೆ.
2019-20 ನೇ ಸಾಲಿನಲ್ಲಿ ತೆರೆದಿದ್ದ 13 ಕೇಂದ್ರಗಳಲ್ಲಿ 2,08,478 ಕ್ವಿಂಟಲ್, 2020-21ನೇ ಸಾಲಿನಲ್ಲಿ ತೆರೆದಿದ್ದ 16 ಕೇಂದ್ರಗಳಲ್ಲಿ ಕೇವಲ 76,148 ಕ್ವಿಂಟಲ್‌ನಷ್ಟು ಖರೀದಿಯಾಗಿತ್ತು. ಆದರೆ ಈ ವರ್ಷದ 2021-22ನೇ ಸಾಲಿನಲ್ಲಿ 22 ಕೇಂದ್ರಗಳಲ್ಲಿ 2,08,700 ಕ್ವಿಂಟಲ್‌ನಷ್ಟು ಕಡಲೆ ಖರೀದಿಯಾಗಿದೆ. ಕಡಲೆ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದ 19,274 ರೈತರ ಪೈಕಿ 16,907 ರೈತರು ತಮ್ಮ ಕಡಲೆ ಬೆಳೆ ಮಾರಾಟ ಮಾಡಿದ್ದು, ಈ ಮೂಲಕ 2,08,700 ಕ್ವಿಂಟಲ್‌ನಷ್ಟು ಕಡಲೆ ಖರೀದಿಯಾಗುವ ಉತ್ತಮ ಸ್ಪಂದನೆ ಲಭಿಸಿದಂತಾಗಿದೆ. ಇದಲ್ಲದೇ ಕಳೆದ ಬಾರಿ ಕಡಲೆ ಮಾರಾಟ ಮಾಡಿದ ರೈತರ ಖಾತೆಗೆ ಹಣ ಜಮೆ ಆಗಲು ವಿಳಂಬಗೊಂಡು ರೈತರು ತೊಂದರೆ ಅನುಭವಿಸಿದ್ದರು. ಈ ಸಲ ಇದು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಂಡ ಕಾರಣ ಈಗಾಗಲೇ 5800 ರೈತರ ಖಾತೆಗೆ ಹಣ ಜಮೆಯಾಗಿದ್ದು, ಮೇ ತಿಂಗಳಾಂತ್ಯಕ್ಕೆ ಕಡಲೆ ಮಾರಾಟ ಮಾಡಿದ ಎಲ್ಲ ರೈತರ ಖಾತೆಗೂ ಹಣ ಜಮೆ ಆಗಲಿದೆ.
ಭತ್ತ-ಬಿಳಿ ಜೋಳ ಖರೀದಿಯೇ ಆಗಿಲ್ಲ: ಜಿಲ್ಲೆಯಲ್ಲಿ ಭತ್ತ-ಬಿಳಿಜೋಳ ಖರೀದಿಗಾಗಿ ಬೆಂಬೆಲೆಯಡಿ ತೆರೆದ ಖರೀದಿ ಕೇಂದ್ರಗಳಲ್ಲಿ ಖರೀದಿಯೇ ಆಗಿಲ್ಲ. ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟಕ್ಕೆ ರೈತರು ಹಿಂದೇಟು ಹಾಕುತ್ತಿರುವ ಕಾರಣ ಕಳೆದ ಎರಡು ವರ್ಷಗಳಿಂದ ಕೇಂದ್ರಗಳಲ್ಲಿ ಭತ್ತ ಖರೀದಿಯೇ ಆಗಿಲ್ಲ. ಕಳೆದ ವರ್ಷ 5187.5 ಕ್ವಿಂಟಲ್‌ನಷ್ಟು ಬಿಳಿಜೋಳ ಖರೀದಿಯಾಗಿತ್ತು. ಈ ವರ್ಷವೂ ಖರೀದಿಗಾಗಿ ಕೇಂದ್ರ ತೆರೆದರೂ ರಾಜ್ಯಕ್ಕೆ ನಿಗದಿ ಮಾಡಿದ್ದ 1.1 ಮೆಟ್ರಿಕ್ ಟನ್ ಖರೀದಿಯ ಗುರಿ ಬೇಗ ತಲುಪಿದ ಕಾರಣ ರೈತರು ಬಿಳಿಜೋಳ ಮಾರಾಟದಿಂದ ವಂಚಿತರಾಗುವಂತಾಗಿದೆ.
ಜಿಲ್ಲೆಯಲ್ಲಿ ತೆರೆದಿದ್ದ 22 ಕೇಂದ್ರಗಳಲ್ಲಿ ಆರಂಭಿಸಿದ್ದ ಖರೀದಿ ಪ್ರಕ್ರಿಯೆ ಮೇ 14ಕ್ಕೆ ಮುಕ್ತಾಯಗೊಂಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಸ್ಪಂದನೆ ಸಿಕ್ಕಿದೆ. ಕಡಲೆ ಮಾರಾಟಕ್ಕೆ ನೋಂದಣಿ ಮಾಡಿದ್ದ 19,274 ರೈತರ ಪೈಕಿ 16,907 ರೈತರು ತಮ್ಮ ಕಡಲೆ ಬೆಳೆ ಮಾರಾಟ ಮಾಡಿದ್ದು, ಈ ಮೂಲಕ 2,08,700 ಕ್ವಿಂಟಲ್‌ನಷ್ಟು ಕಡಲೆ ಖರೀದಿಯಾಗಿದೆ. ಈಗಾಗಲೇ 5800 ರೈತರ ಖಾತೆಗೆ ಹಣ ಜಮೆ ಆಗಿದ್ದು, ಮೇ ಅಂತ್ಯದೊಳಗೆ ಉಳಿದ ರೈತರಿಗೂ ಹಣ ಜಮೆ ಆಗಲಿದೆ
. –ವಿನಯ್ ಪಾಟೀಲ, ಹುಬ್ಬಳ್ಳಿ ಶಾಖಾ ವ್ಯವಸ್ಥಾಪಕ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ
-ಶಶಿಧರ್ ಬುದ್ನಿ