Advertisement

ಆನ್‌ಲೈನ್‌ ಮೇಲೆ ಕೇಂದ್ರ ಸರಕಾರದ ನಿಗಾ

12:01 AM Nov 12, 2020 | mahesh |

ಹೊಸದಿಲ್ಲಿ: ಅಶ್ಲೀಲ ದೃಶ್ಯಾವಳಿ ಮತ್ತು ಸುಳ್ಳು ಸುದ್ದಿಗಳ ಹೆಚ್ಚಳದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಅವುಗಳ ಮೇಲೆ ನಿಗಾ ಇರಿಸಲು ನಿರ್ಧರಿಸಿದೆ. ಬುಧವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಅನ್ವಯ ಇನ್ನು ಮುಂದೆ ಒಟಿಟಿ ಪ್ಲಾಟ್‌ಫಾರ್ಮ್ಗಳಾದ ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌ಗಳು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಪರಿಧಿಯೊಳಗೆ ಬರಲಿವೆ. ಈ ಸಂಬಂಧ ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಹಿ ಹಾಕಿದ್ದಾರೆ.

Advertisement

ನ್ಯೂಸ್‌ ಪೋರ್ಟಲ್‌ಗಳ ಮೇಲೂ ನಿಗಾ
ಕೇವಲ ಒಟಿಟಿಗಳಷ್ಟೇ ಅಲ್ಲ, ನ್ಯೂಸ್‌ ಪೋರ್ಟಲ್‌ಗಳೂ ಕೇಂದ್ರ ಸರಕಾರದ ಅಧೀನದಡಿ ಬರಲಿವೆ. ಸರಕಾರ ರೂಪಿಸುವ ನಿಯಮಾವಳಿಗಳನ್ನು ಈ ಪೋರ್ಟಲ್‌ಗಳು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಫೇಸ್‌ಬುಕ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ಗೂ ಈ ನಿಯಮಾವಳಿಗಳು ಅನ್ವಯವಾಗಲಿವೆ.

ಏಕೆ ಈ ನಿರ್ಧಾರ?
ಒಟಿಟಿ: ಕೆಲವು ಒಟಿಟಿಗಳಲ್ಲಿ ಅಶ್ಲೀಲವನ್ನು ಬಿಂಬಿಸುವ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಸಿನೆಮಾದಂತೆಯೇ ಇವುಗಳನ್ನೂ ಸೆನ್ಸಾರ್‌ ಮಾಡಬೇಕು ಎಂಬ ಒತ್ತಾಯ ಬಹುದಿನಗಳಿಂದ ಇತ್ತು. ಅದರಲ್ಲೂ ಇತ್ತೀಚೆಗಷ್ಟೇ ಲೈಲಾ ಎಂಬ ಕಾರ್ಯಕ್ರಮ ತೀವ್ರ ವಿವಾದಕ್ಕೂ ಕಾರಣವಾಗಿತ್ತು.

ನ್ಯೂಸ್‌ ಪೋರ್ಟಲ್‌: ದೇಶದಲ್ಲಿ ಈಗ ಲೆಕ್ಕಕ್ಕೆ ಸಿಗದಷ್ಟು ಸುದ್ದಿ  ವೆಬ್‌ಸೈಟ್‌ಗಳು ಹುಟ್ಟಿಕೊಂಡಿವೆ. ಕೆಲವು ವೆಬ್‌ಸೈಟ್‌ಗಳು ಸುಳ್ಳು  ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಬಗ್ಗೆ ಆರೋಪವಿತ್ತು. ಇವುಗಳನ್ನು ನಿಯಂತ್ರಿಸಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು.

ಈಗ ನಿಗಾ ಇರಿಸಲಾಗುತ್ತಿದೆಯೇ?
ಸದ್ಯ ದೇಶದಲ್ಲಿ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಮತ್ತು ಆನ್‌ಲೈನ್‌ ಸುದ್ದಿ ವೆಬ್‌ಸೈಟ್‌ಗಳ ಮೇಲೆ ನಿಗಾ ಇರಿಸುವ ಯಾವುದೇ ವ್ಯವಸ್ಥೆ ಇಲ್ಲ. ಇವುಗಳ ನಿಯಂತ್ರಣಕ್ಕೆ ಒಂದು ವ್ಯವಸ್ಥೆ ಬೇಕು ಎಂಬ ಆಗ್ರಹವಿತ್ತು. ಈಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇದಕ್ಕೊಂದು ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಇದೆ.

Advertisement

ಇದು ಆತಂಕಕಾರಿಯೇ?
ನ್ಯೂಸ್‌ ವೆಬ್‌ಸೈಟ್‌ಗಳನ್ನು ನಡೆಸುವ ಮಂದಿ ಪ್ರಕಾರ ಇದು ವಾಕ್‌ ಸ್ವಾತಂತ್ರ್ಯದ ಮೇಲಿನ ಹಲ್ಲೆ. ಸರಕಾರ ವಿರೋಧಿ ಮಾಹಿತಿ ಪ್ರಕಟಿಸುವ ಸುದ್ದಿ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ಸಾಧ್ಯತೆ ಇದೆ. ವ್ಯಕ್ತಿ ಸ್ವಾತಂತ್ರ್ಯಕ್ಕೂ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next