ನವದೆಹಲಿ: ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ವಾಯು ಯಾನವನ್ನು ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳಿಗೆ ಬದಲೀ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ವೆಬ್ ಸೈಟ್ ಒಂದನ್ನು ರಚಿಸಿದೆ.
ಸ್ಪೈಸ್ ಜೆಟ್ ಮತ್ತು ಇಂಡಿಗೋ ಸೇರಿದಂತೆ ಇತರೇ ಖಾಸಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಸಚಿವಾಲಯವು ಸಂಪರ್ಕದಲ್ಲಿದೆ. ಮತ್ತು ಆ ಸಂಸ್ಥೆಗಳಲ್ಲಿ ಉದ್ಯೋಗ ಕಳೆದುಕೊಂಡಿರುವ ಜೆಟ್ ಏರ್ ವೇಸ್ ಸಿಬ್ಬಂದಿಗಳ ನೇಮಕಕ್ಕೆ ಪ್ರಯತ್ನಿಸುವುದಾಗಿ ಸಚಿವಾಲಯ ಭರವಸೆ ನೀಡಿದೆ.
ಬಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2019ರ ಮೇಲೆ ಮಾತನಾಡುವ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಜ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ವಿಷಯವನ್ನು ತಿಳಿಸಿದ್ದಾರೆ.
ಸಚಿವಾಲಯವು ವೆಬ್ ಸೈಟ್ ಒಂದನ್ನು ರಚಿಸಿದ್ದು ಅದೀಗ ಕಾರ್ಯಾಚರಿಸಲು ಸಿದ್ಧವಾಗಿದೆ. ಮತ್ತು ಉದ್ಯೋಗ ಕಳೆದುಕೊಂಡಿರುವ ಜೆಟ್ ಏರ್ ವೇಸ್ ಸಿಬ್ಬಂದಿಗಳ ಪಟ್ಟಿಯೊಂದನ್ನು ತಯಾರಿಸಿ ಅದನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವುದಾಗಿ ಮತ್ತು ಆ ಮೂಲಕ ಅವರಿಗೆ ಅವರವರ ಅರ್ಹತೆಗೆ ಅನುಗುಣವಾಗಿ ಬೇರೆ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಸಚಿವ ಪುರಿ ಅವರು ಹೆಳಿದ್ದಾರೆ.
ಆದರೆ ಜೆಟ್ ಏರ್ ವೇಸ್ ಅನುಭವಿಸಿರುವ ವ್ಯಾವಹಾರಿಕ ನಷ್ಟಕ್ಕೆ ಸರಕಾರ ಉತ್ತರದಾಯಿಯಾಗಿರುವುದಿಲ್ಲ ಎಂದೂ ಸಚಿವರು ಇದೇ ಸಂದರ್ಭದಲ್ಲಿ ಮೇಲ್ಮನೆಗೆ ತಿಳಿಸಿದರು.