Advertisement

ನಕಲಿ ನಿರ್ದೇಶಕರಿಗೆ ಕೆವೈಸಿ ಕಪಿಮುಷ್ಟಿ

06:00 AM Jun 09, 2018 | |

ಹೊಸದಿಲ್ಲಿ: ವಿಜಯ್‌ ಮಲ್ಯ ಹಾಗೂ ನೀರವ್‌ ಮೋದಿಯಂಥ ಉದ್ಯಮಿಗಳು ಬ್ಯಾಂಕ್‌ಗಳಿಗೆ ಮೋಸ ಮಾಡಿ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪರಾರಿಯಾದಂತಹ ಪ್ರಕರಣಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಲು ಕೇಂದ್ರ ಸರಕಾರ ಈಗ ಮಹತ್ವದ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲ, ಇದು ನಕಲಿ ಕಂಪೆನಿಗಳನ್ನು ನಿಯಂತ್ರಿಸಲೂ ನೆರವಾಗಲಿದೆ. ಕಂಪೆನಿ ನಿರ್ದೇಶಕರ  ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ದಾಖಲೆಗಳನ್ನು ಸಂಗ್ರಹಿಸುವ ಬೃಹತ್‌ ಅಭಿಯಾನವನ್ನು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಆರಂಭಿಸಲಿದೆ. 

Advertisement

ಇದರ ಅಡಿಯಲ್ಲಿ ಕಂಪೆನಿ ನಿರ್ದೇಶಕರ ಪಾಸ್‌ಪೋರ್ಟ್‌, ಪಾನ್‌ ಸಂಖ್ಯೆ ಮತ್ತು ಸಂಪರ್ಕ ವಿವರಗಳನ್ನು ದಾಖಲಿಸಲಾಗುತ್ತದೆ. ಪ್ರತಿ ವರ್ಷವೂ ವಾರ್ಷಿಕ ವಿತ್ತ ವರದಿಯನ್ನು ಸಲ್ಲಿಸುವಾಗ ಕಂಪೆನಿ ಕಾರ್ಯದರ್ಶಿ ಅಥವಾ ಚಾರ್ಟರ್ಡ್‌ ಅಕೌಂಟಂಟ್‌ಗಳು ಇದನ್ನು ಸಲ್ಲಿಸಬೇಕಿರುತ್ತದೆ.
ಇದರ ಜತೆಗೆ ಕಂಪೆನಿಯ ವಿಳಾಸವನ್ನೂ ಇನ್ನೊಂದು ನಮೂನೆಯಲ್ಲಿ ಸಲ್ಲಿಸಬೇಕಿರುತ್ತದೆ. ಇದನ್ನು ಕೂಡ ಪ್ರತಿ ವರ್ಷ ಅಪ್‌ಡೇಟ್‌ ಮಾಡಬೇಕು. ಈ ಮೂಲಕ ನಕಲಿ ಕಂಪೆನಿ ಸ್ಥಾಪಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ಕಾರ್ಪೊರೇಟ್‌ ವಹಿವಾಟುಗಳ ಸಚಿವಾಲಯದ ಕಾರ್ಯದರ್ಶಿ ಇಂಜೆತಿ ಶ್ರೀನಿವಾಸ್‌ ಈ ಬಗ್ಗೆ ವಿವರಣೆ ನೀಡಿದ್ದು, ಈ ಕೆವೈಸಿ ಅಭಿಯಾನದಲ್ಲಿ ಸುಮಾರು 33 ಲಕ್ಷ ಕಂಪೆನಿ ನಿರ್ದೇಶಕರ ವಿವರಗಳನ್ನು ನವೀಕರಿಸಲಾಗುತ್ತದೆ ಎಂದಿದ್ದಾರೆ.

ಶೀಘ್ರದಲ್ಲೇ ಈ ಅಭಿಯಾನವನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ವಿದೇಶಿಯರಿಗೂ ಪ್ರತ್ಯೇಕ ನಮೂನೆಯಿದ್ದು, ಅವರೂ ಕೂಡ ಸಚಿವಾಲಯದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಿರುತ್ತದೆ. ಭೌತಿಕ ವಿಳಾಸದ ವಿವರಗಳು ಮತ್ತು ನಿರ್ದೇಶಕರಿಗೆ ಸಂಬಂಧಿಸಿದ ವಿವರಗಳನ್ನು ಕಂಪೆನಿ ಕಾರ್ಯದರ್ಶಿ ಅಥವಾ ಚಾರ್ಟರ್ಡ್‌ ಅಕೌಂಟೆಂಟ್‌ ಕಡ್ಡಾಯವಾಗಿ ಭರ್ತಿ ಮಾಡಬೇಕಿದೆ.

ಈಗಾಗಲೇ ನೋಟು ಅಮಾನ್ಯದ ಅನಂತರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಣ ಜಮೆ ಮಾಡಿದ ಹಲವು ಕಂಪೆನಿಗಳ ಮೇಲೆ ನಿಗಾ ಇಟ್ಟಿರುವ ವಿವಿಧ ತನಿಖಾ ಸಂಸ್ಥೆಗಳು, ನಕಲಿ ಕಂಪೆನಿಗಳನ್ನು ರದ್ದುಗೊಳಿಸಿದ್ದವು. ಕೆವೈಸಿ ಅಭಿಯಾನದ ಮೂಲಕ ಮತ್ತೂಂದು ಸುತ್ತಿನಲ್ಲಿ ನಕಲಿ ಕಂಪೆನಿಗಳ ಮೇಲೆ ಕೇಂದ್ರ ಸರಕಾರ ಕಡಿವಾಣ ಹಾಕಲಿದೆ.

Advertisement

Udayavani is now on Telegram. Click here to join our channel and stay updated with the latest news.

Next