ನವದೆಹಲಿ: ರಾಜ್ಯದ ತೊಗರಿ ಬೆಳೆಗಾರರ ಭಾಗ್ಯದ ಬಾಗಿಲು ತೆರೆಯುವಂಥ ನಿರ್ಧಾರವೊಂದನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಸರ್ಕಾರದ ದಾಸ್ತಾನಿನಲ್ಲಿರುವ 18 ಲಕ್ಷ ಟನ್ ತೊಗರಿಯನ್ನು ಕೇಂದ್ರದ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ ಆಹಾರ ಸಂಬಂಧಿ ಯೋಜನೆಗಳಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಕೇಂದ್ರ ಸೂಚನೆ ನೀಡಿದೆ.
ಶುಕ್ರವಾರ ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಳೆದ ವರ್ಷ ಗಗನಮುಖೀಯಾಗಿದ್ದ ತೊಗರಿ ಬೇಳೆಯ ಬೆಲೆ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಆಹಾರ ಇಲಾಖೆಯು ತೊಗರಿ ಬೇಳೆಯನ್ನು ದಾಸ್ತಾನು ಮಾಡಲಾರಂಭಿಸಿತ್ತು. ಈ ದಾಸ್ತಾನನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿ ತೊಗರಿ ಬೆಲೆ ಇಳಿಕೆ ಮಾಡಲಾಗಿದೆ. ಆದರೂ, ಕೇಂದ್ರದ ಗೋದಾಮುಗಳಲ್ಲಿ ಇನ್ನೂ 18 ಲಕ್ಷ ಟನ್ ತೊಗರಿ ಸಂಗ್ರಹವಿದೆ. ಹೀಗಾಗಿ, ಇದನ್ನು ವಿಲೇವಾರಿ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಬೆಳೆಗಾರರಿಗೆ ಲಾಭ ಹೇಗೆ?: ರಾಷ್ಟ್ರದೆಲ್ಲೆಡೆ ಚಾಲ್ತಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟ, ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವ ಊಟ ಸೇರಿದಂತೆ ಸರ್ಕಾರಗಳು, ಸಚಿವಾಲಯಗಳ ಮಟ್ಟದಲ್ಲಿ ಯಾವುದೇ ಆಹಾರ ಸಂಬಂಧಿ ಯೋಜನೆಗಳಲ್ಲಿ ಈ ತೊಗರಿಯನ್ನೇ ಬಳಸಬೇಕೆಂದು ಕೇಂದ್ರ ಸೂಚಿಸಿದೆ.
ಸಂಬಂಧಪಟ್ಟ ಇಲಾಖೆಗಳು, ಸಚಿವಾಲಯಗಳು ಮಾರುಕಟ್ಟೆಯ ದರದಲ್ಲೇ ತೊಗರಿಯನ್ನು ಕೇಂದ್ರದಿಂದ ಖರೀದಿಸಬೇಕಾಗುತ್ತದೆ. ಒಮ್ಮೆ ಕೇಂದ್ರದ ದಾಸ್ತಾನುಗಳಿಂದ ಬೇಳೆ ಪೂರೈಕೆಯ ಪದ್ಧತಿ ಆರಂಭಗೊಂಡರೆ ಅದೊಂದು ಪದ್ಧತಿಯಾಗಿ ಮುಂದುವರಿಯುವ ನಿರೀಕ್ಷೆಯಿದೆ. ಸದ್ಯಕ್ಕೆ ಕೇಂದ್ರದ ಗೋದಾಮುಗಳಲ್ಲಿನ ದಾಸ್ತಾನು ಮುಗಿದ ಕೂಡಲೇ ದೇಶಾದ್ಯಂತ ತೊಗರಿ ಬೇಳೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಡೆಯಿಂದ ಸಹಜವಾಗಿಯೇ ಬೇಡಿಕೆ ಬರಲಿದೆ.
ನ್ಯಾಯಾಧೀಶರ ವೇತನ ಹೆಚ್ಚಳಕ್ಕೆ ಶ್ರೀಕಾರ: ದೇಶದ ಕೆಳ ಹಂತದ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 21 ಸಾವಿರ ನ್ಯಾಯಾಧೀಶರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಆಯೋಗವೊಂದನ್ನು ರಚಿಸಲು ಕೇಂದ್ರ ಸರ್ಕಾರ ಶುಕ್ರವಾರದ ತನ್ನ ಸಂಪುಟ ಸಭೆಯಲ್ಲಿ ಸಮ್ಮತಿಸಿದೆ. ಇದರಿಂದಾಗಿ, ಶೀಘ್ರದಲ್ಲೇ ಕೇಂದ್ರ ಕಾನೂನು ಸಚಿವಾಲಯ 2ನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗವನ್ನು ರಚಿಸುವ ಬಗ್ಗೆ ಅಧಿಸೂಚನೆ ಹೊರಡಿಸಲಿದೆ.