Advertisement

Budget ಈ ವರ್ಷವೂ ಜನಗಣತಿ ಅನುಮಾನ? ಪೂರ್ಣ ಪ್ರಕ್ರಿಯೆಗೆ ಬೇಕು ಅಂದಾಜು 12,000 ಕೋಟಿ ರೂ.

08:56 PM Jul 23, 2024 | Team Udayavani |

ಹೊಸದಿಲ್ಲಿ: ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಪ್ರಕ್ರಿಯೆ ಈ ವರ್ಷವೂ ನಡೆಯುವುದು ಅನುಮಾನ. ಬಜೆಟ್‌ನಲ್ಲಿ ಗಣತಿಗೆಂದು ಮೀಸಲಿಟ್ಟ ಮೊತ್ತ ನೋಡಿದರೆ ಈ ಅನುಮಾನ ಮೂಡದೇ ಇರದು.

Advertisement

ನಿಯಮದಂತೆ, 2021ರಲ್ಲೇ ದೇಶಾದ್ಯಂತ ಜನಗಣತಿ ಪ್ರಕ್ರಿಯೆ ನಡೆಯಬೇಕಾಗಿತ್ತು. ಆದರೆ, ಕೊರೊನಾ ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ಇದು ವಿಳಂಬವಾಗುತ್ತಲೇ ಇದೆ. 2021-22ರ ಬಜೆಟ್‌ನಲ್ಲಿ ಗಣತಿಗೆಂದೇ 3,768 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಆದರೆ, ಅಚ್ಚರಿಯೆಂಬಂತೆ, ಈ ಬಾರಿ ಗಣತಿಗೆ ಕೇವಲ 1,309.46 ಕೋಟಿ ರೂ.ಗಳನ್ನಷ್ಟೇ ಮೀಸಲಿಡಲಾಗಿದೆ. ಹೀಗಾಗಿ ಪ್ರಸಕ್ತ ವರ್ಷವೂ ಸರ್ಕಾರ ಗಣತಿ ಪ್ರಕ್ರಿಯೆ ಕೈಗೊಳ್ಳುವ ಸಾಧ್ಯತೆ ಕ್ಷೀಣಿಸಿದೆ.

2019ರ ಡಿ.24ರಂದು ಕೇಂದ್ರ ಸಂಪುಟ ಸಭೆಯಲ್ಲಿ 2021ನೇ ಜನಗಣತಿಯನ್ನು 8,754.23 ಕೋಟಿ ರೂ. ವೆಚ್ಚದಲ್ಲಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್‌)ಯನ್ನು 3,941.35 ಕೋಟಿ ರೂ. ವೆಚ್ಚದಲ್ಲಿ ಪರಿಷ್ಕರಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿತ್ತು. ಅದರಂತೆ, 2020ರ ಏ.1ರಿಂದ ಸೆ.30ರವರೆಗೆ ಮನೆ ಮನೆ ಪಟ್ಟಿ ಮಾಡುವ, ಎನ್‌ಪಿಆರ್‌ ಅಪ್‌ಡೇಟ್‌ ಮಾಡುವ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಕೊರೊನಾ ಸೋಂಕಿನ ಕಾರಣಕ್ಕೆ ಈ ಪ್ರಕ್ರಿಯೆ ಮುಂದೂಡಿಕೆಯಾಗಿದ್ದು, ಇನ್ನೂ ಶುರುವಾಗಿಲ್ಲ.

ಸಂಪೂರ್ಣ ಗಣತಿ ಮತ್ತು ಎನ್‌ಪಿಆರ್‌ ಪ್ರಕ್ರಿಯೆಗೆ ಅಂದಾಜು 12,000 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಬಜೆಟ್‌ನಲ್ಲಿ ಮೀಸಲಿಡಲಾದ ಅನುದಾನವನ್ನು ನೋಡಿದರೆ, ಪ್ರಸಕ್ತ ವರ್ಷವೂ ಗಣತಿ ನಡೆಯುವ ಸಾಧ್ಯತೆ ಕ್ಷೀಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next