Advertisement
ಗೃಹ ಕಚೇರಿ ಕೃಷ್ಣಾದಲ್ಲಿ ಗೋಪೂಜೆ ನೆರವೇರಿಸಿ, ಗೋಗ್ರಾಸ ನೀಡಿದ ಸಿದ್ದರಾಮಯ್ಯ, ಕುರಿಗಳನ್ನು ಕಂಡು ಖುಷಿ ವ್ಯಕ್ತಪಡಿಸಿದರು. ಮೊಬೈಲ್ ಆ್ಯಪ್ ಮೂಲಕ ಜಾನುವಾರು ಗಣತಿಗೆ ಚಾಲನೆ ನೀಡಿದರು. ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಅವರು ಇತ್ತೀಚೆಗಷ್ಟೇ ರಾಷ್ಟ್ರಮಟ್ಟದ 21ನೇ ಜಾನುವಾರು ಗಣತಿಗೆ ಚಾಲನೆ ನೀಡಿದ್ದು, ಅದರ ಅಂಗವಾಗಿ ರಾಜ್ಯದಲ್ಲಿಯೂ ಜಾನುವಾರು ಗಣತಿ ಪ್ರಕ್ರಿಯೆ ನಡೆಯಲಿದೆ. 1919ರಿಂದ ಪ್ರತೀ 5 ವರ್ಷಗಳಿ ಗೊಮ್ಮೆ ಜಾನುವಾರು ಗಣತಿ ನಡೆಸಿಕೊಂಡು ಬರಲಾಗುತ್ತಿದ್ದು, ವನ್ಯಜೀವಿಗಳನ್ನು ಹೊರತುಪಡಿಸಿ ಕೃಷಿ, ಹೈನುಗಾರಿಕೆ ಇತ್ಯಾದಿ ಜೀವನೋಪಾಯ ಕ್ಕಾಗಿ ಸಾಕುವ ಜಾನುವಾರು, ಸಾಕು ಪ್ರಾಣಿ, ಕುಕ್ಕುಟ ಸಂಕುಲಗಳ ಗಣತಿ ಕಾರ್ಯ ಇದರಡಿ ನಡೆಯಲಿದೆ.
ದೇಶದ ಜಿಡಿಪಿಗೆ ಶೇ. 4.41ರಷ್ಟು ಹಾಗೂ ರಾಜ್ಯದ ಜಿಎಸ್‌ಡಿಪಿಗೆ ಶೇ. 3.65ರಷ್ಟು ಕೊಡುಗೆಯನ್ನು ಜಾನುವಾರು, ಕುಕ್ಕುಟೋದ್ಯಮ ನೀಡುತ್ತಿದೆ. ಕಳೆದ ಬಾರಿ ಅಂದರೆ 2019ರಲ್ಲಿ ನಡೆದಿದ್ದ ಜಾನುವಾರು ಗಣತಿಯಲ್ಲಿ 1.73 ಕೋಟಿ ಕುರಿ, ಮೇಕೆ ಸೇರಿ ಒಟ್ಟು 3.03 ಕೋಟಿ ಜಾನುವಾರು ಹಾಗೂ 5.02 ಕೋಟಿ ಕುಕ್ಕುಟ ಸಂಕುಲಗಳನ್ನು ಗಣತಿ ಮಾಡಲಾಗಿತ್ತು. ಇದು ರಾಷ್ಟ್ರ ಮಟ್ಟದ 21ನೇ ಜಾನುವಾರು ಗಣತಿಯಾಗಿದ್ದು, ರಾಜ್ಯದ ಅಂಕಿ-ಅಂಶಗಳನ್ನೂ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಯಾವ್ಯಾವ ಪ್ರಾಣಿಗಳ ಗಣತಿ?
ಹಸು, ಎತ್ತು, ಎಮ್ಮೆ, ಕೋಣ, ಕುರಿ, ಮೇಕೆ, ಹಂದಿ, ಕುದುರೆ, ಕತ್ತೆ, ನಾಯಿ, ಮೊಲ, ಆನೆ ಸೇರಿ ಜಾನುವಾರುಗಳ ಗಣತಿ ನಡೆಯಲಿದ್ದು, ಕೋಳಿ, ಬಾತುಕೋಳಿ, ಕಾಡುಕೋಳಿ, ಹೆಬ್ಟಾತು, ಟರ್ಕಿ, ಆಸ್ಟ್ರಿಚ್, ಎಮು ಸೇರಿ ಕುಕ್ಕುಟಗಳ ಗಣತಿಯೂ ನಡೆಯಲಿದೆ. ಮನೆ ಅಥವಾ ಬೀದಿಯಲ್ಲಿ ಸಾಕಿರುವ ನಾಯಿಗಳ ಗಣತಿಯೂ ಈ ವೇಳೆ ನಡೆಯಲಿದೆ. ಇದಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್ ಇದ್ದು, ಆ್ಯಂಡ್ರಾಯ್ಡ್ ಮೊಬೈಲ್ ಅಥವಾ ಟ್ಯಾಬ್ ಮೂಲಕ ಗಣತಿದಾರರು ನಿಗದಿತ ನಮೂನೆಯಲ್ಲಿ ಗಣತಿ ಮಾಹಿತಿಯನ್ನು ನಮೂದಿಸಲಿದ್ದಾರೆ.
Related Articles
ರಾಜ್ಯದಲ್ಲಿ ಒಟ್ಟು 3,243 ಮಂದಿ ಗಣತಿದಾರರು ಜಾನುವಾರು ಗಣತಿಯಲ್ಲಿ ತೊಡಗಿಕೊಳ್ಳಲಿದ್ದು, 760 ಜನ ಮೇಲ್ವಿಚಾರಕರು ಇರಲಿದ್ದಾರೆ. ಪ್ರತೀ ಮನೆ, ವಸತಿ ಸಮುಚ್ಚಯ, ಕೊಟ್ಟಿಗೆ, ಗೋಶಾಲೆ, ದೊಡ್ಡಿ, ಗೂಡು, ಪಶುವೈದ್ಯ ಕಾಲೇಜುಗಳಿಗೆ ಭೇಟಿ ನೀಡಿ ಪ್ರತಿ ಪ್ರಾಣಿ, ಪಕ್ಷಿಗಳ ತಳಿ, ವಯಸ್ಸು, ಲಿಂಗ, ಮಾಲಕತ್ವ ಸೇರಿ ಎಲ್ಲ ರೀತಿಯ ಮಾಹಿತಿಗಳನ್ನೂ ಕಲೆ ಹಾಕಲಾಗುತ್ತದೆ. ಅರಣ್ಯ ಇಲಾಖೆ ಅನುಮತಿ ಮೇರೆಗೆ ಕೆಲ ಮಠ, ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುವುದರಿಂದ ಅಲ್ಲಿಗೂ ಭೇಟಿ ನೀಡಿ ಅವುಗಳ ವಿವರವನ್ನೂ ಪಡೆಯಲಾಗುತ್ತದೆ.
Advertisement