Advertisement

ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

11:38 AM Dec 26, 2017 | |

ವಿಜಯಪುರ: ವಿಜಯಪುರದಲ್ಲಿ ಕ್ರಿಸ್‌ ಮಸ್‌ ಹಬ್ಬವನ್ನು ಸಂಭ್ರಮ-ಸಡಗರ ದಿಂದ ಆಚರಿಸಲಾಯಿತು. ಕ್ರೈಸ್ತ್ ಸಮುದಾಯದವರು ಶ್ರದ್ಧಾ-ಭಕ್ತಿಯಿಂದ ಪ್ರಭು ಏಸು ಕ್ರಿಸ್ತರಿಗೆ ಭಕ್ತಿಯ ನಮನ ಸಲ್ಲಿಸಿ ಕ್ಯಾಂಡಲ್‌ ಬೆಳಗಿ ಗೌರವ ಸೂಚಿಸಿದರು.

Advertisement

ಕ್ರಿಸ್‌ಮಸ್‌ ಹಬ್ಬದ ಹಿನ್ನೆಲೆಯಲ್ಲಿ ನಗರದ ಎಲ್ಲ ಚರ್ಚ್‌ಗಳು ವಿಶೇಷ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಝಗಮಗಿಸುವ ಲೈಟ್ಸ್‌ಗಳಿಂದ ಕಂಗೊಳಿಸುವ ಕ್ರಿಸ್‌ಮಸ್‌ ಟ್ರೀಗಳು ನಗರದ ಎಲ್ಲ ಚರ್ಚ್‌ಗಳಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದವು. ಏಸುಕ್ರಿಸ್ತ್ರ ಕುರಿತಾದ ಭಕ್ತಿಗೀತೆಗಳ ಅನುರುಣನ ಕೇಳಿ ಬಂದಿತು.

ನಗರದ ಮಹಾತ್ಮ ಗಾಂಧೀಜಿ ವೃತ್ತದ ಬಳಿ ಇರುವ ಸಂತ ಅನ್ನಮ್ಮ ದೇವಾಲಯ (ಚರ್ಚ್‌), ನಗರದ ಕೇಂದ್ರ ಬಸ್‌ ನಿಲ್ದಾಣ ಬಳಿ ಇರುವ ಸಿಎಸ್‌ಐ ಚರ್ಚ್‌, ಸಕಾಫರೋಜಾ ಬಳಿ ಇರುವ ಮ್ಯಾಥೂಸ್‌ ಚರ್ಚ್‌ ಸೇರಿದಂತೆ ಹಲವಾರು ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನಡೆಯಿತು. ಗಾಂಧಿವೃತ್ತ ಮುಂಭಾಗದಲ್ಲಿರುವ ಸಂತ ಅನ್ನಮ್ಮ ದೇವಾಲಯದಲ್ಲಿ ಫಾ| ಜೆರಾಲ್ಡ್‌ ಡಿಸೋಜಾ, ಫಾ| ಜಾನ್‌ ಡಿಸೋಜಾ ಹಾಗೂ ಫಾ| ರೋಹನ್‌ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಾವಿರಾರು ಕ್ರೈಸ್ತ್ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಕ್ರಿಸ್‌ಹಬ್ಬದ ಹಿಂದಿನ ದಿನವೇ ಸಂಭ್ರಮ ಮುಗಿಲು ಮುಟ್ಟಿತ್ತು. ಹಬ್ಬದ ಹಿಂದಿನ ದಿನ “ಕ್ರಿಸ್‌ಮಿಸ್‌ ಇವ್‌’ನಲ್ಲಿಯೂ ಕ್ರೈಸ್ತ್ ಬಾಂಧವರು ಸಡಗರದಿಂದ ಪಾಲ್ಗೊಂಡರು. “ಏಸು ಸ್ವಾಮಿ ಗುರುಗಳು…’, “ಏಸು ಬಂದರು, ಆನಂದ ತಂದರು…’ “ಏಸು ಸ್ವಾಮಿ…ಏಸು ಸ್ವಾಮಿ…’ ಎಂಬ ಹಲವಾರು ಏಸುಕ್ರಿಸ್ತರ ಕುರಿತಾದ ಗೀತೆಗಳು ಮೊಳಗಿದವು. ಪ್ರತಿಯೊಬ್ಬರು “ಮೇರಿ ಕ್ರಿಸ್‌ ಮಸ್‌…ಮೇರಿ ಕ್ರಿಸ್‌ಮಸ್‌’ ಎಂದು ಹಬ್ಬದ ಶುಭಾಷಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಕಂಡು ಬಂತು. ನಂತರ ಮನೆಗೆ ತೆರಳಿದ ಕ್ರೈಸ್ತ್ ಬಾಂಧವರು ಹಬ್ಬಕ್ಕಾಗಿ ಸಿದ್ಧಪಡಿಸಲಾದ “ಕ್ರಿಸ್‌ ಮಸ್‌ ಕೇಕ್‌’ ಕತ್ತರಿಸಿ ಬಂಧು-ಬಾಂಧವರಿಗೆ ಹಂಚಿದರು. ಚಿಕ್ಕಮಕ್ಕಳಿಗೆ ಚಾಕೋಲೆಟ್‌, ವಿಶೇಷ ಉಡುಗೊರೆ ನೀಡಿ ಖುಷಿಪಟ್ಟರು.

ಹಬ್ಬದ ಸಂದರ್ಭದಲ್ಲಿ ಸಾಂತಾಕ್ಲಾಸ್‌ ಎಂದರೆ ಮಕ್ಕಳಿಗೆ ಪಂಚಪ್ರಾಣ. ಮಕ್ಕಳಿಗೆ ಉಡುಗೊರೆ ನೀಡುವ ಸಾಂತಾಕ್ಲಾಸ್‌ ವೇಷ ಧರಿಸಿ ಮಕ್ಕಳಿಗೆ ಶುಭ ಕೋರುತ್ತಿರುವ ದೃಶ್ಯ ಚರ್ಚ್‌ಗಳಲ್ಲಿ ಕಂಡು ಬಂತು. ನಗರದ ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಚರ್ಚ್‌ನಲ್ಲಿ ಹಲವಾರು ವಾದ್ಯಗಳನ್ನು ನುಡಿಸುತ್ತಿರುವ ಸಾಂತಾಕ್ಲಾಸ್‌ ರೂಪದ ಗೊಂಬೆಗಳ ಮುಂದೆ ನಿಂತು ಚಿಣ್ಣರು ಕುಣಿದು ಕುಪ್ಪಳಿಸಿದರು. ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತೋಷ ಅನುಭವಿಸಿದರು.

Advertisement

ಹಬ್ಬದ ಸಂದರ್ಭದಲ್ಲಿಯೇ ಶುಭ ಕೋರುವ ಗೀತೆಗಳಾದ ಕ್ಯಾರಲ್‌ ಸಾಂಗ್ಸ್‌ಗಳನ್ನು ಹಾಡಿ ಹಬ್ಬದ ಶುಭಾಷಯ ಕೋರುತ್ತಿರುವ ದೃಶ್ಯ ಕಂಡು ಬಂತು. ಸರ್ವಧರ್ಮಿಯರು ಸಹ ಹಬ್ಬದ ಸಂದರ್ಭದಲ್ಲಿ ಪಾಲ್ಗೊಂಡು ಹಬ್ಬದ ಶುಭಾಷಯ ಕೋರಿದರು.

ವಿಜಯಪುರದ ಸಂತ ಅನ್ನಮ್ಮ ದೇವಾಲಯದಲ್ಲಿ ಈ ಬಾರಿ ಜಲವೈಭವ ದರ್ಶನ ಹಾಗೂ ಜಲಜಾಗೃತಿ ಮೂಡಿಸುವ ವಿಶೇಷ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ಜಲಬಿರಾದಾರಿ ಸಂಚಾಲಕ ಪೀಟರ್‌ ಅಲೆಕ್ಸಾಂಡರ್‌ ನೇತೃತ್ವದಲ್ಲಿ ಪ್ರಾತ್ಯಕ್ಷಿತೆ ಸಿದ್ಧಪಡಿಸಲಾಗಿತ್ತು.

ಆದಿಲ್‌ಷಾಹಿ ಕಾಲದಲ್ಲಿನ ವಿಜಯಪುರದಲ್ಲಿ ಅಷ್ಟ ದಿಕ್ಕುಗಳಲ್ಲಿಯೂ ನೀರು ಹರಿಯುತ್ತಿತ್ತು, ಎತ್ತ ಕಣ್ಣು ಹಾಯಿಸಿದರೂ ಕೆರೆ, ಹಳ್ಳಗಳಲ್ಲಿ ನೀರು ಕಂಡುಬರುತ್ತಿತ್ತು. ಆಗಿನ ಜಲ ವೈಭವದ ದಿನಗಳನ್ನು ಪ್ರಾತ್ಯಕ್ಷಿಕೆ ನೆನಪಿಸುವ ಜೊತೆಗೆ ಜಲಸಂರಕ್ಷಣೆ ಸಂದೇಶ ಭೋದಿಸಿತು.

ಕುಂಟೋಜಿಯಲ್ಲಿ ಸಾಮೂಹಿಕ ಪ್ರಾರ್ಥನೆ
ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮದ ಬಳಿ ಇರುವ ಇಂಡಿಯನ್‌ ಮಿಶನರಿ ಸೊಸೈಟಿ ಚರ್ಚ್‌ನಲ್ಲಿ ಸೋಮವಾರ ಕ್ರಿಸ್‌ಮಸ್‌ ಹಬ್ಬ ಆಚರಿಸಲಾಯಿತು. ಪಾದ್ರಿ ಬಾಲಕೃಷ್ಣನ್‌, ಸೇವಕ ಐಸಾಕ್‌, ತಂಗಡಗಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಮಂಜುಳಾ, ಮುದ್ದೇಬಿಹಾಳ ಭಾಗದ ಬಿಆರ್‌ಪಿ ಎಸ್‌.ಎಸ್‌. ನವಲಿ ಜೀಸಸ್‌ ಕ್ರಿಸ್ತನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸೊಸೈಟಿಯಲ್ಲಿ ನಡೆಸಲಾಗುತ್ತಿರುವ ಹಾಸ್ಟೇಲ್‌ನಲ್ಲಿ ಇರುವ ವಿವಿಧ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳು,
ನಿಂಗಯ್ಯ ಹಿರೇಮಠ, ಅಮ್ಮನಿಗೊಂಡು ಉಡುಗೊರೆ ಕಿರುಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದ್ದ ಜಯಶ್ರೀ ಹಿರೇಮಠ ಸೇರಿದಂತೆ ಮುದ್ದೇಬಿಹಾಳ, ನಾಲತವಾಡ, ಕುಂಟೋಜಿ, ಇಂಗಳಗೇರಿ, ಕೆಸಾಪುರ, ಬಲದಿನ್ನಿ ಭಾಗದ 100ಕ್ಕೂ ಹೆಚ್ಚು ಭಕ್ತರು ವಿಶೇಷ ಪ್ರಾರ್ಥನೆಯಲ್ಲಿ ಸಾಮೂಹಿಕವಾಗಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next