ಬಳ್ಳಾರಿ: ನಗರ ಸೇರಿ ಗಣಿನಾಡು ಬಳ್ಳಾರಿ ಜಿಲ್ಲೆಯಾದ್ಯಂತ ಮಹಿಳೆಯರ ಅಚ್ಚುಮೆಚ್ಚಿನ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಗುರುವಾರ ಆಚರಿಸಲಾಯಿತು. ಸಂಕ್ರಾಂತಿ ಹಬ್ಬದ ನಿಮಿತ್ತ ನಗರದ ಪ್ರತಿಷ್ಠಿತ ಸೇರಿ ಎಲ್ಲಾ ಬಡಾವಣೆಗಳಲ್ಲಿನ ಮನೆಗಳ ಮುಂದೆ ಬುಧವಾರ ರಾತ್ರಿಯೇ ಸಿದ್ಧತೆ ಮಾಡಿಕೊಂಡಿದ್ದ ಮಹಿಳೆಯರು, ಯುವತಿಯರು, ಗುರುವಾರ ಬೆಳಗಿನ ಜಾವ ಚಿತ್ತಚಿತ್ತಾರದ ರಂಗೋಲಿ ಹಾಕಿ ಬಣ್ಣ ತುಂಬುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು.
ಇದನ್ನೂ ಓದಿ:ಮೊಗವೀರ ವ್ಯವಸಾಪಕ ಮಂಡಳಿ: ಉಪಾಧ್ಯಕರಾಗಿ ಅಶೋಕ್ ಸುವರ್ಣ ಆಯ್ಕೆ
ನಗರದಎಲ್ಲಾ ಬಡಾವಣೆಗಳಲ್ಲೂ ಮನೆಗಳ ಮುಂದೆ ಚಿತ್ತಚಿತ್ತಾರದ ರಂಗೋಲಿಗಳು ಸಾಲು ಸಾಲು ಕಂಗೊಳಿಸಿದ್ದು, ಜನರನ್ನು ಆಕರ್ಷಿಸುತ್ತಿದ್ದವು. ಬಳಿಕ ರಂಗೋಲಿಯ ಮೇಲೆ ಕುಂಬಳಕಾಯಿ, ಕ್ಯಾರೆಟ್ ಸೇರಿ ಹಲವು ವಿಧಗಳನ್ನಿಟ್ಟು ಮಹಿಳೆಯರು ಸಂಕ್ರಮಣಕ್ಕೆ ಪೂಜೆ ಸಲ್ಲಿಸಿದರು. ನಂತರ ಮನೆಗಳಲ್ಲಿ ಹಬ್ಬದ ವಿಶೇಷ ಖಾದ್ಯವಾದ ಸಜ್ಜೆರೊಟ್ಟಿ, ಎಣ್ಣೆಬದನೆಕಾಯಿ ಪಲ್ಯ ಸವಿದರೆ, ಕೆಲವೊಂದು ಮನೆಗಳಲ್ಲಿ ಸಂಪ್ರದಾಯದಂತೆ ಚಿಕ್ಕ ಚಿಕ್ಕ ಮಕ್ಕಳು ಜಾಗಟೆ ಬಾರಿಸುತ್ತಾ ಗೋವಿಂದಾ ಗೋವಿಂದ ಎನ್ನುತ್ತಾ ಮನೆಮನೆಗೆ ತೆರಳಿ ದಾನ ನೀಡುವಂತೆ ತೆರಳುತ್ತಿದ್ದರು.
ಹೀಗೆ ಮನೆಗೆ ಬಂದವರಿಗೆ ನವಧಾನ್ಯಗಳನ್ನು ದಾನವಾಗಿ ನೀಡುತ್ತಿದ್ದ ದೃಶ್ಯ ಸಂಕ್ರಾಂತಿ ಹಬ್ಬದ ವಿಶೇಷತೆ ತೋರುತ್ತಿತ್ತು. ಪುಣ್ಯಸ್ನಾನ ಮಾಡಲು ಹಂಪಿ, ಮಂತ್ರಾಲಯ ಸೇರಿ ವಿವಿಧ ದೇವಸ್ಥಾನಗಳಿಗೆ ತೆರಳಿ, ಅಲ್ಲಿನ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುವ ಮೂಲಕ ಸಂಕ್ರಾಂತಿ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಿದರು.