Advertisement

ಕರಾವಳಿಯಾದ್ಯಂತ ಶ್ರದ್ಧಾ ಭಕ್ತಿ, ಸಂಭ್ರಮದಿಂದ ಕ್ರಿಸ್ಮಸ್‌ ಆಚರಣೆ

01:16 AM Dec 25, 2022 | Team Udayavani |

ಮಂಗಳೂರು: ಏಸು ಕ್ರಿಸ್ತರ ಜನ್ಮ ಸ್ಮರಣೆಗಾಗಿ ಆಚರಿಸುವ ಕ್ರಿಸ್ಮಸ್‌ ಹಬ್ಬವನ್ನು ಕ್ರೈಸ್ತ ಬಾಂಧವರು ಕರಾವಳಿಯಾದ್ಯಂತ ಶನಿವಾರ ರಾತ್ರಿ ಭಕ್ತಿ, ಶ್ರದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು.

Advertisement

ದ.ಕ. ಜಿಲ್ಲೆಯ ವಿವಿಧ ಚರ್ಚ್‌ಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರೈಸ್ತರ ಮನೆಗಳಲ್ಲಿ, ವಿವಿಧ ಚರ್ಚ್‌ಗಳ ಆವರಣದಲ್ಲಿ ಗೋದಲಿ ನಿರ್ಮಾಣ ಮಾಡಲಾಗಿತ್ತು. ರಾತ್ರಿ ವೇಳೆ ಚರ್ಚ್‌ಗಳಲ್ಲಿ ಪ್ರಾರ್ಥನೆ ನಡೆದಿದ್ದು, ಅಧಿಕ ಸಂಖ್ಯೆಯಲ್ಲಿ ಕ್ರೆçಸ್ತರು ಭಾಗವಹಿಸಿದ್ದರು. ಕ್ಯಾರಲ್ಸ್‌ ಹಾಡಿ ಏಸು ಕ್ರಿಸ್ತರ ಜನನ ಸ್ಮರಿಸಲಾಯಿತು.

ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೊ ಕೆಥೆಡ್ರಲ್‌ನಲ್ಲಿ ಕ್ರಿಸ್ಮಸ್‌ ಹಬ್ಬದ ಬಲಿ ಪೂಜೆ ಅರ್ಪಿಸಿ ಸಂದೇಶ ನೀಡಿದರು.

ಶನಿವಾರ ರಾತ್ರಿ ಜಿಲ್ಲೆಯಾದ್ಯಂತ ಕ್ರಿಸ್ಮಸ್‌ ಹಬ್ಬದ ಆಚರಣೆ ನಡೆದಿದೆ. ನಗರದ ಪ್ರಮುಖ ಚರ್ಚ್‌ಗಳಾದ ರೊಸಾರಿಯೋ ಕೆಥೆಡ್ರಲ್‌, ಮಿಲಾಗ್ರಿಸ್‌, ಉರ್ವ, ಬಿಜೈ, ಬೆಂದೂರ್‌ವೆಲ್‌, ಕುಲಶೇಖರ, ಬಿಕರ್ನಕಟ್ಟೆ, ಕೂಳೂರು, ಅಶೋಕನಗರ, ವಾಮಂಜೂರು ಚರ್ಚ್‌ಗಳು ಸೇರಿದಂತೆ ನಗರದ ಪ್ರಮುಖ ಚರ್ಚ್‌ಗಳಲ್ಲಿ ಭಕ್ತರು ಬಲಿಪೂಜೆಯಲ್ಲಿ ಭಾಗವಹಿಸಿದರು. ರವಿವಾರ ಬೆಳಗ್ಗಿನಿಂದಲೇ ಚರ್ಚ್‌ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯುವುದು. ಮನೆಗಳಲ್ಲಿ ಕ್ರಿಸ್ಮಸ್‌ ವಿಶೇಷ ತಿಂಡಿ ತಿನಿಸು “ಕುಸ್ವಾರ್‌’ ವಿನಿಮಯ ಮತ್ತು ಹಬ್ಬದ ಭೋಜನದೊಂದಿಗೆ ಹಬ್ಬದ ಸಂಭ್ರಮ ನೆರವೇರಲಿದೆ.

“ಮಾನವೀಯತೆ, ಶಾಂತಿಯಿಂದ ಭೂಲೋಕ ಸ್ವರ್ಗ’
ಉಡುಪಿ: ಗೌರವ, ಮಾನವೀಯತೆ, ಶಾಂತಿಯ ಕಂಪನ್ನು ಎಲ್ಲೆಡೆ ಪಸರಿಸಿದಾಗ ಜಗತ್ತಿನಲ್ಲಿ ವಿಜೃಂಭಿಸುತ್ತಿರುವ ದುಷ್ಟತನವನ್ನು ಬುಡಸಮೇತ ಕಿತ್ತೂಗೆಯಲು ಸಾಧ್ಯ. ಈ ಮೂರು ಶ್ರೇಷ್ಠ ಕಾಣಿಕೆಗಳಿಗೆ ಈ ಭೂಲೋಕವನ್ನು ಸ್ವರ್ಗಲೋಕವನ್ನಾಗಿಸುವ ಶಕ್ತಿಯಿದೆ ಎಂದು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೋ ಹೇಳಿದರು.

Advertisement

ಶನಿವಾರ ಕ್ರಿಸ್ಮಸ್‌ ಹಬ್ಬದ ವಿಶೇಷ ಬಲಿಪೂಜೆಯನ್ನು ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆ ಡ್ರ ಲ್‌ನಲ್ಲಿ ಅರ್ಪಿಸಿ ಅವರು ಹಬ್ಬದ ಸಂದೇಶವನ್ನು ನೀಡಿದರು.

ಯೇಸು ಜನಿಸಿದ ಗೋದಲಿಯೊಳಗೆ ಒಮ್ಮೆ ಇಣುಕಿ ನೋಡೋಣ. ಅಲ್ಲಿ ಒಂದು ಕುಟುಂಬವಿದೆ. ನವ ಸಮಾಜದ ನೈಜ ಚಿತ್ರಣವಿದೆ. ದೇವರು-ಮಾನವರ ನಡುವೆ ಸಂಧಾನವಿದೆ. ಗೋದಲಿಯಲ್ಲಿ ಪ್ರೀತಿ-ನೆಮ್ಮದಿಯಿದೆ, ಶಾಂತಿ-ಸಮಾಧಾನ, ಎಲ್ಲರ ನಡುವೆ ಸಹಬಾಳ್ವೆ ಇದೆ. ನಮ್ಮೆಲ್ಲರ ಹೃದಯವೆಂಬ ಗೋದಲಿಯಲ್ಲಿ ಸ್ವಾರ್ಥ, ದುರಹಂಕಾರ, ವಿಭಜನೆ, ದ್ವೇಷ, ಅಸತ್ಯ, ಅಪ್ರಾಮಾಣಿಕತೆ, ಕಲಹ ದೂರವಾಗಿ ಶಾಂತಿ, ಪ್ರೀತಿ, ಸಮಾನತೆ, ಅನುಕಂಪ, ದಯೆ, ನೆಲೆಸಿದಾಗ, ಅಲ್ಲಿ ದೇವರು ನೆಲೆನಿಲ್ಲುತ್ತಾರೆ. ಅದೇ ನಿಜವಾದ ಕ್ರಿಸ್ತಜಯಂತಿ ಎಂದರು.

ಸಂಭ್ರಮದ ಆಚರಣೆ
ಏಸುಕ್ರಿಸ್ತರ ಜನ್ಮದಿನ ಕ್ರಿಸ್ಮಸ್‌ ಹಬ್ಬವನ್ನು ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಭಕ್ತಿ, ಶ್ರದ್ಧೆ, ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ಯೇಸುವಿನ ಜನನದ ವೃತ್ತಾಂತವನ್ನು ಪರಿಚಯಿಸುವ ಗೀತ ಗಾಯನ ನಟನೆಯ ಮೂಲಕ ಪ್ರದರ್ಶಿಸಲಾಯಿತು.

ಚರ್ಚ್‌ನ ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ| ಜೋಯ್‌ ಅಂದ್ರಾದೆ, ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು.

ಶಿರ್ವ ಆರೋಗ್ಯ ಮಾತೆ ಚರ್ಚ್‌ ನಲ್ಲಿ ಧರ್ಮಗುರು ವಂ| ಲೆಸ್ಲಿ ಡಿ’ಸೋಜಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ವಂ| ಚಾಲ್ಸ್ ಮಿನೇಜಸ್‌, ಕುಂದಾಪುರ ಹೊಲಿ ರೋಸರಿ ಚರ್ಚಿನಲ್ಲಿ ವಂ| ಸ್ಟ್ಯಾನಿ ತಾವ್ರೋ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ ವಂ| ಆಲ್ಬನ್‌ ಡಿ’ಸೋಜಾ, ತೊಟ್ಟಂ ಅನ್ನಮ್ಮ ದೇವಾಲಯದಲ್ಲಿ ವಂ| ಡೆನಿಸ್‌ ಡೆಸಾ, ಕಲ್ಮಾಡಿ ಸ್ಟೆಲ್ಲಾ ಮಾರಿಸ್‌ ಚರ್ಚಿನಲ್ಲಿ ವಂ| ಬ್ಯಾಪ್ಪಿಸ್ಟ್‌ ಮಿನೇಜಸ್‌ ನೇತೃತ್ವದಲ್ಲಿ ಬಲಿಪೂಜೆಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next