ಮಹಾಲಿಂಗಪುರ: ಹೋಳಿ ಹಬ್ಬವನ್ನು ಪರಸ್ಪರ ಪ್ರೀತಿ-ವಿಶ್ವಾಸದಿಂದ ಆಚರಿಸಿ ಸೌಹಾರ್ದತೆ ಮೆರೆಯಬೇಕು ಎಂದು ರಬಕವಿ-ಬನಹಟ್ಟಿ ತಾಲೂಕು ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ಹೇಳಿದರು. ಮಹಾಲಿಂಗಪುರ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಾರ್ನಿಸ್ ಹಾಗೂ ಇನ್ನಿತರ ರಾಸಾಯನಿಕ ಬಣ್ಣ ಉಪಯೋಗಿಸದೇ ನೈಸರ್ಗಿಕ ಬಣ್ಣಗಳನ್ನೇ ಬಳಸುವ ಮೂಲಕ ನೀರು ಕಲುಷಿತವಾಗುವುದನ್ನು ತಪ್ಪಿಸಬೇಕು. ಅಲ್ಲದೇ ಚರ್ಮ ರೋಗದಿಂದಲೂ ದೂರವಿರಬೇಕು ಎಂದರು.
ಮಕ್ಕಳ ವಿದ್ಯಾಭ್ಯಾಸ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಹಿತ, ಮಿತವಾಗಿ ಹಲಗೆ ಬಾರಿಸಿ. ಬೈಕ್‌ಗಳ ಸೈಲೆನ್ಸರ್ ತೆಗೆದು ಕರ್ಕಶ ಶಬ್ದದೊಂದಿಗೆ ಚಾಲನೆ ಮಾಡಬೇಡಿ. ಇದಕ್ಕೆ ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎರಡು ವರ್ಷಗಳಿಂದ ಕೊರೊನಾದಿಂದ ಎಲ್ಲ ಹಬ್ಬ-ಹರಿದಿನಗಳಿಗೆ ನಿಗದಿತ ಕಡಿವಾಣ ಹಾಕಲಾಗಿತ್ತು. ಈ ವರ್ಷ ಕಾಮದಹನದ ನಂತರ ಮಲ್ಲಯ್ಯನ ಕಂಬಿ ಜೊತೆ ಶ್ರೀಶೈಲಕ್ಕೆ ಪಾದಯಾತ್ರೆಗೆ ಹೋಗುವ ಭಕ್ತರಿಗೆ ಅನುವು ಮಾಡಿಕೊಡಬೇಕು. ಅಲ್ಲಲ್ಲಿ ಆಗುವ ಅಹಿತಕರ ಘಟನೆಗಳಿಗೆ ಆ ಪ್ರದೇಶದ ಜವಾಬ್ದಾರಿ ಹೊತ್ತ ವ್ಯಕ್ತಿಗಳೇ ಕಾರಣರಾಗುತ್ತಾರೆ. ಇದಕ್ಕೆ ಆಸ್ಪದ ಕೊಡದೇ ಸೌಹಾರ್ದತೆಯಿಂದ ಹಬ್ಬ ಆಚರಿಸಿ ಎಂದು ಸಲಹೆ ನೀಡಿದರು.
ಸಮುದಾಯ ಅಧಿಕಾರಿ ಸಿ.ಎಸ್. ಮಠಪತಿ ಪುರಸಭೆಯಿಂದ ಸ್ವತ್ಛತೆ ಹಾಗೂ ನೀರಿನ ವ್ಯವಸ್ಥೆ ಕುರಿತು ಮಾತನಾಡಿದರೆ, ಪಟ್ಟಣದ ಠಾಣಾಧಿಕಾರಿ ವಿಜಯ ಕಾಂಬ್ಳೆ ಪಟ್ಟಣದ ಭಾವೈಕ್ಯತೆಗೆ ಧಕ್ಕೆ ಬಾರದ ಹಾಗೆ ಹೋಳಿ ಆಚರಿಸುವಂತೆ ಸೂಚಿಸಿದರು.
ಈ ವೇಳೆ ಸ್ಥಾಯಿ ಸಮಿತಿ ಚೇರ್‌ಮನ್ ಸಜನಸಾಬ ಪೆಂಡಾರಿ, ಅಶೋಕ ಅಂಗಡಿ, ಚನಬಸು ಯರಗಟ್ಟಿ, ಶಿವು ಅಂಗಡಿ, ಉಸ್ಮಾನ್ ಪೆಂಡಾರಿ, ಸಿರಾಜ ಪಾಂಡು, ಭೀಮಶಿ ಗೌಂಡಿ, ಅರ್ಜುನ ದೊಡಮನಿ, ನಬೀಸಾಬ ಯಕ್ಸಂಬಿ, ಲಕ್ಷ್ಮಣ ಮಾಂಗ, ಸೈಯದ್ ನದಾಫ, ಈರಪ್ಪ ಚುನುಮುರಿ, ಪರಶುರಾಮ ಮೇತ್ರಿ, ಪಿಯೂಸ್ ಓಸವಾಲ್, ಸಿದ್ದಪ್ಪ ಭೂಸಣ್ಣವರ, ಹುಮಾಯೂನ್ ಸುತಾರ, ಜಯರಾಜ ಗಸ್ತಿ, ಮಹಾಲಿಂಗಪ್ಪ ಭಜಂತ್ರಿ, ಪುಂಡಲೀಕ ಗಡಿಕಾರ, ಯಾಸೀನ್ ಐನಾಪುರ, ಭೀಮಶಿ ಕಾಳವ್ವಗೋಳ, ಮಲ್ಲಪ್ಪ ನಾವಿ, ತಲಾಟಿ ಸಿ.ಎನ್. ಹೊಸಮನಿ, ಪರಶುರಾಮ ಲಾತೂರ, ಪೊಲೀಸ್ ಇಲಾಖೆಯ ಎಸ್.ಎಸ್. ಘಾಟಗೆ, ಪ್ರೊಬೇಷನರಿ ಪಿಎಸೈ ಬಸವರಾಜ ಎದ್ದಲಗುಡ್ಡ, ಜಗದೀಶ ಪಾಟೀಲ್, ವೈ.ವೈ. ಗಚ್ಚನ್ನವರ್ ಇದ್ದರು.