ಯಲಬುರ್ಗಾ: ಹೋಳಿ ಹಾಗೂ ಶಬೇಬರಾತ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವ ಮೂಲಕ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಸಿಪಿಐ ಎಂ. ನಾಗರೆಡ್ಡಿ ಎಚ್ಚರಿಕೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಯಲಬುರ್ಗಾ ಪಟ್ಟಣದ ಜನತೆ ಶಾಂತಿ ಪ್ರೀಯರು. ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಿಕೊಂಡು ಬಂದಿರುವ ಇತಿಹಾಸವಿದೆ. ಯಾವುದೇ ಹಬ್ಬಗಳಾಗಲಿ ಬಾಂಧವ್ಯ ಬೆಳೆಸುವ ಕೊಂಡಿಗಳಾಗಬೇಕು. ಹಬ್ಬದ ಹೆಸರಿನಲ್ಲಿ ವೈಯಕ್ತಿಕ ದ್ವೇಷ ಮನೋಭಾವನೆ ಯಾರಿಗೂ ಒಳ್ಳೆಯದಲ್ಲ. ಕಾಮದಹನ ಮಾಡುವುದಕ್ಕೆ ರೈತರ ಬೆಲೆ ಬಾಳುವ ಕೃಷಿ ಉಪಕರಣ ತಂದು ಹಾಕುವುದು, ಗುಡಿಸಲು ಮನೆಯ ಕಟ್ಟಿಗೆ ಕಿತ್ತುಕೊಂಡು ಬರುವುದು ಸರಿಯಲ್ಲ. ರಾಸಾಯನಿಕ ಮಿಶ್ರಿತ ಬಣ್ಣ ಎರಚುವುದು, ಟೊಮೊಟೋ ಹಾಗೂ ಮೊಟ್ಟೆಗಳನ್ನು ಮಿಶ್ರಣ ಮಾಡಿ ಎರಚುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಒತ್ತಾಯ ಪೂರ್ವಕವಾಗಿ ಬಣ್ಣ ಹಚ್ಚುವುದು ಹಾಗೂ ಹಣಕ್ಕೆ ಬೇಡಿಕೆ ಇಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಪಟ್ಟಣದ ಮುಖಂಡರು, ಪಟ್ಟಣದಲ್ಲಿರುವ ಸಿಸಿ ಟಿವಿ ಕೆಲಸ ಮಾಡುತ್ತಿಲ್ಲ. ತ್ವರಿತವಾಗಿ ಪಟ್ಟಣ ಪಂಚಾಯಿತಿಯಿಂದ ಸಿಸಿ ಟಿವಿ ದುರಸ್ತಿ ಮಾಡಿಸುವ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.
ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿ, ಶೀಘ್ರದಲ್ಲೇ ಪಟ್ಟಣದ ಎಲ್ಲ ಸಿಸಿ ಟಿವಿ ದುರಸ್ತಿ ಮಾಡಿಸುವ ಭರವಸೆ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ಬಾವಿಮನಿ, ಪಟ್ಟಣದ ಹಿರಿಯ ಮುಖಂಡ ಅಂದಾನಗೌಡ ಉಳ್ಳಾಗಡ್ಡಿ, ರವಿ ಕಲಬುರ್ಗಿ, ಪಪಂ ಸದಸ್ಯ ಅಂದಯ್ಯ ಕಳ್ಳಿಮಠ, ಅಕ್ತರಸಾಬ್ ಖಾಜಿ, ಪೊಲೀಸ್ ಸಿಬ್ಬಂದಿ ತಮ್ಮನಗೌಡ, ಗವಿಸಿದ್ಧರೆಡ್ಡಿ, ಮುಸ್ಲಿಂ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳು ಪ್ರಮುಖರಿದ್ದರು.