ನವದೆಹಲಿ: ಲೋಕಸಭೆ ಚುನಾವಣೆ ಮುಕ್ತಾಯವಾದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶಾದ್ಯಂತ ಸುಮಾರು 150 ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿರುವುದಾಗಿ ಆರೋಪಿಸಿದ್ದ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಗೆ ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದು, ಪ್ರತಿಯೊಬ್ಬರ ಬಗ್ಗೆಯೂ ಇಂತಹ ಊಹಾಪೋಹಗಳನ್ನು ಹಬ್ಬಿಸುವುದು ಒಳ್ಳೆಯದಲ್ಲ ಎಂದು ಹೇಳಿದರು.
ಇದನ್ನೂ ಓದಿ:Election: ಮುಂದಿನ ಲೋಕಸಭೆ ಚುನಾವಣೆ ಎಪ್ರಿಲ್ ಅಂತ್ಯದೊಳಗೆ ಮುಗಿಸುತ್ತೇವೆ: ಚುನಾವಣಾ ಆಯೋಗ
ಸೋಮವಾರ (ಜೂನ್ 03) ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಯಾರಾದರೂ ಜಿಲ್ಲಾಧಿಕಾರಿಗಳಿಗೆ, ರಿಟರ್ನ್ ಆಫೀಸರ್ ಗಳ ಮೇಲೆ ಪ್ರಭಾವ ಬೀರಿದ್ದಾರೆಯೇ? ಆ ರೀತಿ ಮಾಡಿದ್ದರೆ, ಅವರು ಯಾರು ಅಂತ ಹೇಳಿ, ನಾವು ಅವರಿಗೆ ಶಿಕ್ಷೆ ಕೊಡುತ್ತೇವೆ. ನೀವು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಜೈರಾಂ ರಮೇಶ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಜೂನ್ 2 ಸಂಜೆಯೊಳಗೆ ಉತ್ತರ ನೀಡುವಂತೆ ಚುನಾವಣ ಆಯೋಗ ನೋಟಿಸ್ ನೀಡಿತ್ತು.
ಮತ ಎಣಿಕೆ ಕಾರ್ಯದ ಪ್ರಕ್ರಿಯೆ ಪ್ರತಿಯೊಬ್ಬ ರಿಟರ್ನಿಂಗ್ ಆಫೀಸರ್ ಅವರ ಪವಿತ್ರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಹಿರಿಯ ವ್ಯಕ್ತಿಯಾಗಿ ಇಂತಹ ಹೇಳಿಕೆಯನ್ನು ಬಹಿರಂಗವಾಗಿ ಹೇಳುವುದು ಎಷ್ಟು ಸರಿ? ಹೀಗಾಗಿ ಅಮಿತ್ ಶಾ ಅವರು ಪ್ರಭಾವ ಬೀರಿರುವ 150 ಜಿಲ್ಲಾಧಿಕಾರಿಗಳ ವಿವರ ನೀಡಬೇಕೆಂದು ಜೈರಾಂ ರಮೇಶ್ ಗೆ ಆಯೋಗ ಬರೆದ ಪತ್ರದಲ್ಲಿ ತಿಳಿಸಿತ್ತು.
ಈವರೆಗೆ ಅಮಿತ್ ಶಾ ಅವರು ಸುಮಾರು 150 ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದಾರೆ. ಇದರಿಂದ ಬಿಜೆಪಿ ಎಷ್ಟು ಹತಾಶವಾಗಿದೆ ಎಂಬುದನ್ನು ತೋರಿಸುತ್ತದೆ. ಜೂನ್ 4ರ ಫಲಿತಾಂಶದಲ್ಲಿ ಮೋದಿ, ಶಾ, ಬಿಜೆಪಿಗೆ ಸೋಲಾಗಲಿದ್ದು, ಇಂಡಿಯಾ ಮೈತ್ರಿಕೂಟ ಜಯ ಗಳಿಸಲಿದೆ. ಚುನಾವಣ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಜೈರಾಂ ರಮೇಶ್ ದೂರಿದ್ದರು.
ಹೆಚ್ಚಿನ ಕಾಲಾವಕಾಶ ಕೊಡಲು ಆಯೋಗ ನಕಾರ:
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪುರಾವೆ ನೀಡಲು ಒಂದು ವಾರಗಳ ಕಾಲಾವಕಾಶ ಕೊಡಬೇಕೆಂಬ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಅವರ ಮನವಿಯನ್ನು ಚುನಾವಣ ಆಯೋಗ ತಿರಸ್ಕರಿಸಿದೆ. ಸೋಮವಾರ 7ಗಂಟೆಯೊಳಗೆ ಉತ್ತರ ನೀಡುವಂತೆ ಗಡುವು ನೀಡಿದೆ.