ಮಂಗಳೂರು: ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕಿನ ಕೊಳ್ನಾಡು ನಿವಾಸಿ ಅಬ್ದುಲ್ ರಹಿಮಾನ್( 42) ಹಾಗೂ ಬೆಳ್ತಂಗಡಿ ತಾಲೂಕಿನ ಜೋಗಿಬೆಟ್ಟು, ಅಡವಿನಬಾಗಿಲು ನಿವಾಸಿಯಾದ ಮೊಹಮ್ಮದ್ ಜಿಯಾದ್ (22) ಎನ್ನಲಾಗಿದೆ.
ಘಟನೆ ವಿವರ : ಇಂದು(ಶುಕ್ರವಾರ) ಮಂಗಳೂರು ನಗರದ ಉಳ್ಳಾಲ ತಾಲೂಕಿನ ಮುಡಿಪು ಮೂಳೂರು ಎಂಬಲ್ಲಿ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ ಈ ವೇಳೆ ಇಬ್ಬರು ಮಾದಕ ವಸ್ತುಗಳನ್ನು ಮಾರುತ್ತಿರುವುದು ಬೆಳಕಿಗೆ ಬಂದಿದ್ದು ದಸ್ತಗಿರಿ ಮಾಡಿದ ಪೊಲೀಸರು ಆರೋಪಿಗಳಿಂದ 1 ಲಕ್ಷ 75 ಸಾವಿರ ರೂ ಮೌಲ್ಯದ 35 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಆಲ್ಟೋ ಕಾರು ಹಾಗೂ ಮೊಬೈಲ್ ಫೋನ್ ಸೇರಿದಂತೆ ಒಟ್ಟು 4,95,000/- ರೂ ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಲ್ಲಿ ಅಬ್ದುಲ್ ರಹಿಮಾನ್ ಎಂಬಾತನ ಮೇಲೆ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಗ್ರಹ ಕಳುವು ಪ್ರಕರಣ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಗಲಾಟೆ ಪ್ರಕರಣ, ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ಹಾಗೂ ಉಪ್ಪಿನಂಗಡಿ ಠಾಣೆಯಲ್ಲಿ ಎಂಡಿಎಂಎ ಮಾರಾಟ ಪ್ರಕರಣಗಳು ದಾಖಲಾಗಿವೆ.
ಇನ್ನೋರ್ವ ಆರೋಪಿ ಮೊಹಮ್ಮದ್ ಜಿಯಾದ್ ಎಂಬಾತನ ಮೇಲೆ ಈ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಸೇವನೆ ಮಾಡಿದ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಶ್ರೀ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಶ್ರೀ ಪಿ.ಎ.ಹೆಗಡೆ ರವರ ನೇತೃತ್ವದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಪಾಲ್ಗೋಂಡಿದ್ದರು.
ಇದನ್ನೂ ಓದಿ: 6 ವರ್ಷದ ಬಳಿಕ ರಿಲೀಸ್ ಗೆ ರೆಡಿಯಾಗಿದ್ದ ವಿಕ್ರಮ್ ಚಿತ್ರ ಕೊನೆ ಕ್ಷಣದಲ್ಲಿ ಮುಂದೂಡಿಕೆ