ಹುಬ್ಬಳ್ಳಿ: ಕೇಂದ್ರ ರಸ್ತೆ ನಿಧಿಯಡಿ ಅಂದಾಜು 20 ಕೋಟಿ ರೂ. ವೆಚ್ಚದಲ್ಲಿ ನೀಲಿಜನ್ ರಸ್ತೆ ಸೇರಿದಂತೆ ನ್ಯೂ ಕಾಟನ್ ಮಾರ್ಕೆಟ್‌ನ ಎಲ್ಲಾ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಿಳಿಸಿದರು.
ನ್ಯೂ ಕಾಟನ್ ಮಾರುಕಟ್ಟೆಯ ಮಾರುತಿ ಪಾರ್ಸಲ್ ಕೊರಿಯರ್ಸ್ ಕಚೇರಿ ಬಳಿ ಭೂಮಿಪೂಜೆ ನೆರವೇರಿಸಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕೋವಿಡ್ ವೈರಸ್ ಇನ್ನಿತರ ಕಾರಣದಿಂದ ರಸ್ತೆ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರ ಗಮನಕ್ಕೆ ತಂದಿದ್ದು, ಬಾಕಿ ಬಿಲ್ ಪಾವತಿಸುವಂತೆ ಕೋರಲಾಗಿದೆ. ಮಾರುಕಟ್ಟೆಯ ಉಳಿದ 455 ಮೀಟರ್ ಪ್ರಮುಖ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 1.83 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಕಳೆದ ವರ್ಷ ಉಂಟಾದ ಪ್ರವಾಹದಲ್ಲಿ ವಿದ್ಯಾನಗರ ಸೇರಿದಂತೆ ಹಲವು ಕಡೆ ನಾಲ್ಕು ಸೇತುವೆಗಳು ಹಾಳಾಗಿದ್ದವು. ಇವುಗಳ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ 15 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಉಳಿದ 1.83 ಕೋಟಿ ಹಣದಲ್ಲಿ ನ್ಯೂ ಕಾಟನ್ ಮಾರುಕಟ್ಟೆಯ ಭಗತ್ ಸಿಂಗ್ ಸರ್ಕಲ್ ನಿಂದ ಮಾರುತಿ ಪಾರ್ಸಲ್ ಕೊರಿಯರ್ಸ್ ಕಚೇರಿವರೆಗೆ 325 ಮೀಟರ್ ಹಾಗೂ 130 ಮೀಟರ್ ಅಡ್ಡ ರಸ್ತೆಯಲ್ಲಿ ಸುಸಜ್ಜಿತ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ ಎಂದರು.
ಕೋವಿಡ್ ನಿರ್ವಹಣೆಗಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಬೇರೆ ದೇಶಗಳಿಗಿಂತ ಹಾಗೂ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೋವಿಡ್ ಮರಣ ಪ್ರಮಾಣ ಕಡಿಮೆ ಇದೆ. ಶೇ.64 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಮುಖ್ಯಮಂತ್ರಿಗಳಿಗೆ ಸೋಂಕು ದೃಢಪಟ್ಟಿರುವುದರಿಂದ ಆಡಳಿತದ ಮೇಲೆ ಯಾವುದೇ ಪರಿಣಾಮ ಆಗಲ್ಲ. ರಾಜ್ಯದ ಪ್ರಧಾನ ಕಾರ್ಯದರ್ಶಿ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಅವರು ಮುಖ್ಯಮಂತ್ರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಎಲ್ಲ ಸಚಿವರು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆಂದು ತಿಳಿಸಿದರು.
ಜಿಲ್ಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆ ಇಲ್ಲ. ಐಸಿಯುಗಳ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಮಾಜಿ ಸದಸ್ಯ ಮಹೇಶ್ ಬುರ್ಲಿ ಇನ್ನಿತರರಿದ್ದರು.