Advertisement
ಇದು 1,32,000 ವೀಕ್ಷಕರ ಸಮ್ಮುಖದಲ್ಲಿ ನಡೆಯುವ ಮಹಾಕದನ. ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರ ವೇಳೆ ಈ ಸ್ಟೇಡಿಯಂ ಹೌಸ್‌ಫುಲ್ ಆಗಲಿದೆ. ಈ ನಡುವೆ ಮಳೆಯ ಭೀತಿಯೂ ಇದೆ.
ಈ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಆಡಿದ ಎರಡರಲ್ಲೂ ಜಯ ಸಾಧಿಸಿವೆ. ಈಗ ಹ್ಯಾಟ್ರಿಕ್ ಹಾದಿಯಲ್ಲಿವೆ. ಭಾರತ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾಗಿ ಆಸ್ಟ್ರೇಲಿಯವನ್ನು ಮಗುಚಿತ್ತು. ಬಳಿಕ ಅಫ್ಘಾನಿಸ್ಥಾನ ವಿರುದ್ಧ ಅಬ್ಬರದ ಗೆಲುವನ್ನು ಸಾಧಿಸಿತು. ಇನ್ನೊಂದೆಡೆ ಪಾಕಿಸ್ಥಾನ ಕ್ರಮವಾಗಿ ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾವನ್ನು ಮಣಿಸಿದೆ. ಇದರಲ್ಲಿ ಲಂಕಾ ಎದುರಿನ ಗೆಲುವು ಅಮೋಘವಾಗಿತ್ತು.
Related Articles
Advertisement
ಅಭ್ಯಾಸ ನಡೆಸಿದ ಗಿಲ್ಇನ್ಫಾರ್ಮ್ ಓಪನರ್ ಶುಭಮನ್ ಗಿಲ್ ಡೆಂಗ್ಯೂ ಕಾರಣ ಎರಡೂ ಪಂದ್ಯಗಳಲ್ಲಿ ಆಡಿರಲಿಲ್ಲ. ಪಾಕ್ ವಿರುದ್ಧ ಆಡುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಅವರು ಚೇತರಿಸಿಕೊಂಡಿದ್ದು, ಅಭ್ಯಾಸವನ್ನೂ ನಡೆಸಿ ದ್ದಾರೆ. ಆಗ, ಗಿಲ್ ಅವರಿಂದ ಪಾಕ್ ವಿರುದ್ಧ ಏಷ್ಯಾ ಕಪ್‌ನಲ್ಲಿ ತೋರ್ಪಡಿಸಿದ ಸಾಧನೆಯನ್ನು ನಿರೀಕ್ಷಿಸಬಹುದು. ಕೊಲಂಬೊ ಪಂದ್ಯದ ಪವರ್ ಪ್ಲೇಯಲ್ಲಿ ಗಿಲ್, ಶಾಹೀನ್ ಶಾ ಅಫ್ರಿದಿ ಮೇಲೆರಗಿ ಹೋಗಿದ್ದರು. ಶಾಹೀನ್ ಅಂದರೆ ಉರ್ದು ಭಾಷೆಯಲ್ಲಿ “ಹಕ್ಕಿಗಳ ರಾಜ’ ಎಂದರ್ಥ. ಈ ಸ್ಟ್ರೈಕ್ ಬೌಲರ್‌ನ ರೆಕ್ಕೆ-ಪುಕ್ಕವನ್ನು ಆರಂಭದಲ್ಲೇ ಕತ್ತರಿಸಿದರೆ ಭಾರತ ಯಶಸ್ಸಿನ ಮೊದಲ ಮೆಟ್ಟಿಲು ಏರಿದಂತೆ. ಅಫ್ಘಾನ್ ವಿರುದ್ಧ ಶತಕದ ಆರ್ಭಟ ತೋರಿದ ರೋಹಿತ್ ಶರ್ಮ ಪಾಕಿಸ್ಥಾನಕ್ಕೂ ಸಿಂಹಸ್ವಿಪ್ನರಾಗಬೇಕಿದೆ. ವಿರಾಟ್ ಕೊಹ್ಲಿ ಸತತ 2 ಅರ್ಧ ಶತಕ ಬಾರಿಸಿ ತಂಡದ ರಕ್ಷಣೆಗೆ ನಿಂತಿದ್ದಾರೆ. ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಮಧ್ಯಮ ಸರದಿಯನ್ನು ಆಧರಿಸುವ ಕಾಯಕ ದಲ್ಲಿ ಯಶಸ್ಸು ಕಾಣಬಲ್ಲರು. ಮುಂದೆ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ಇದ್ದಾರೆ. ಹೀಗೆ ಭಾರತದ ಬ್ಯಾಟಿಂಗ್ ಲೈನ್‌ಅಪ್ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ. ಪಾಕ್‌ಗೆ ಫಾರ್ಮ್ ನದೇ ಚಿಂತೆ
ಪಾಕಿಸ್ಥಾನ ಕೂಡ ಬಲಿಷ್ಠ ಬ್ಯಾಟಿಂಗ್ ಸರದಿಯನ್ನೇ ಹೊಂದಿದೆ. ಆದರೆ ಫಾರ್ಮ್ ನದೇ ದೊಡ್ಡ ಸಮಸ್ಯೆ. ಆರಂಭಿಕರಾದ ಇಮಾಮ್ ಉಲ್ ಹಕ್-ಫಖಾರ್ ಜಮಾನ್ ಲಯದಲ್ಲಿಲ್ಲ. ಆದರೆ ಫಖಾರ್ ಬದಲು ಬಂದ ಅಬ್ದುಲ್ಲ ಶಫೀಕ್ ಶ್ರೀಲಂಕಾ ವಿರುದ್ಧದ ಬಿಗ್ ಚೇಸಿಂಗ್ ವೇಳೆ ಸೆಂಚುರಿ ಬಾರಿಸಿ ಮಿಂಚಿದ್ದಾರೆ. ಭಾರತ ಈ ಆಟಗಾರನ ಮೇಲೆ ಒಂದು ಕಣ್ಣಿಡಬೇಕಿದೆ. ನಾಯಕ ಬಾಬರ್ ಆಜಂ ಅವರ ಫಾರ್ಮ್ ಕೂಡ ಕೈಕೊಟ್ಟಿದೆ. ಆದರೆ ಕೀಪರ್ ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕಾರ್ ಅಹ್ಮದ್ ಕ್ರೀಸ್ ಆಕ್ರಮಿಸಿಕೊಳ್ಳಬಲ್ಲರು. ಆದರೆ ಭಾರತವನ್ನು ಭಾರತದ ನೆಲದಲ್ಲೇ ಆಡುವ ಒತ್ತಡದಿಂದ ಪಾಕ್ ಬ್ಯಾಟಿಂಗ್ ಸರದಿ ಅದುರುವ ಎಲ್ಲ ಸಾಧ್ಯತೆ ಇದೆ. ಶಮಿ, ಅಶ್ವಿನ್ ಅಗತ್ಯವಿದೆ
ಪಾಕಿಸ್ಥಾನಕ್ಕೆ ಹೋಲಿಸಿದರೆ ಭಾರತದ ಬೌಲಿಂಗ್ ಸರದಿಯೂ ಬಲಿಷ್ಠ. ಮೊಹಮ್ಮದ್ ಶಮಿ, ಆರ್. ಅಶ್ವಿನ್ ಅವರನ್ನು ಆಡಿಸಿದರಂತೂ ಬೌಲಿಂಗ್ ಇನ್ನಷ್ಟು ಘಾತಕವಾಗುವುದರಲ್ಲಿ ಅನುಮಾನವಿಲ್ಲ. ಆದರೆ ಇಬ್ಬರಿಗೂ ಒಟ್ಟಿಗೇ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಬುಮ್ರಾ ಮತ್ತು ಸಿರಾಜ್ ಅವರ ಆರಂಭಿಕ ಸ್ಪೆಲ್, ಕುಲದೀಪ್ ಅವರ ಚೈನಾಮನ್ ಎದುರಿಸಿ ನಿಲ್ಲುವುದು ಖಂಡಿತ ಸುಲಭವಲ್ಲ. ಸದ್ಯಕ್ಕೆ ಶಾದೂìಲ್ ಠಾಕೂರ್ ಅಗತ್ಯ ಬೀಳದು. ಪಾಕ್ ಬೌಲಿಂಗ್ ಲಂಕಾ ವಿರುದ್ಧ ಚೆಲ್ಲಾಪಿಲ್ಲಿಗೊಂಡಿತ್ತು. ಅಫ್ರಿದಿ, ಹಸನ್ ಅಲಿ, ನವಾಜ್, ರವೂಫ್, ಶದಾಬ್… ಎಲ್ಲರೂ ದುಬಾರಿಯಾಗಿದ್ದರು.
ಅಹ್ಮದಾಬಾದ್ ಟ್ರ್ಯಾಕ್ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡಲಿದೆ. ಉದ್ಘಾಟನ ಪಂದ್ಯದಲ್ಲಿ 280ರ ಸರಾಸರಿ ದಾಖಲಾಗಿತ್ತು. ಮುನ್ನೂರರ ಗಡಿ ದಾಟಿದರೆ ಬೋನಸ್ ಸಿಕ್ಕಿದಂತೆ. ಇದು ಭಾರತಕ್ಕೆ ಲಭಿಸುವಂತಾಗಲಿ. ಮುಂದುವರಿದ ಶೀರ್ಷಿಕೆ…
2019ರಲ್ಲಿ ಭಾರತ-ಪಾಕಿಸ್ಥಾನ ವಿಶ್ವಕಪ್ ಪಂದ್ಯದ ಕುರಿತ ವರದಿಗೆ “ಪಾಕಿಗೆ ಬೀಳಲಿ ಏಳನೇ ಏಟು’ ಎಂಬ ಶೀರ್ಷಿಕೆ ನೀಡಲಾಗಿತ್ತು. ಅಂದಿನ ಮ್ಯಾಂಚೆಸ್ಟರ್ ಪಂದ್ಯದಲ್ಲಿ ಏಳನೇ ಸೋಲಿನೇಟು ನೀಡುವಲ್ಲಿ ಕೊಹ್ಲಿ ಪಡೆ ಯಶಸ್ವಿಯಾಗಿತ್ತು. ಹೀಗಾಗಿ ಈ ಬಾರಿ ಅದೇ ಶೀರ್ಷಿಕೆಯನ್ನು ಮುಂದುವರಿಸಿ “ಪಾಕಿಗೆ ಬೀಳಲು ಎಂಟನೇ ಏಟು’ ಎಂದು ನೀಡಲಾಗಿದೆ. ಈ ಹಾರೈಕೆಯೂ ನಿಜವಾಗಲಿ!