ಹೊಸದಿಲ್ಲಿ : ಸಿಬಿಎಸ್‌ಇ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಸೋರಿ ಹೋಗಿರುವ ಘಟನೆಯ ಹಿಂದೆ ಒಬ್ಬ ವ್ಯಕ್ತಿಯನ್ನು ಹೆಸರಿಸಿ ದಿಲ್ಲಿ ಪೊಲೀಸರಿಗೆ ದೂರು ನೀಡಿದೆ.
ದಿಲ್ಲಿಯ ರಾಜೀಂದರ್ ನಗರದಲ್ಲಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ನಡೆಸುತ್ತಿರುವ ಓರ್ವ ವ್ಯಕ್ತಿಯನ್ನು ಹೆಸರಿಸಿ ತನಗೆ ಕಳೆದ ಮಾರ್ಚ್ 23ರಂದು ಬಂದಿದ್ದ ಫ್ಯಾಕ್ಸ್ ಒಂದನ್ನು ಸಿಬಿಎಸ್‌ಇ ಪೊಲೀಸರೊಂದಿಗೆ ಹಂಚಿಕೊಂಡಿದೆ.
ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಸಿಬಿಎಸ್‌ಇ, ಅಪರಿಚಿತ ಮೂಲಗಳಂದ ತನಗೆ ದೂರೊಂದು ಬಂದಿದ್ದು ಅದರಲ್ಲಿ ಪೇಪರ್ ಲೀಕ್‌ಗೆ ಸಂಬಂಧಿಸಿದಂತೆ ಎರಡು ಶಾಲೆಗಳನ್ನು ಹೆಸರಿಸಲಾಗಿದೆ ಎಂದು ಹೇಳಿದೆ.
12ನೇ ತರಗತಿಯ ಅರ್ಥ ಶಾಸ್ತ್ರ ಪರೀಕ್ಷೆ ನಡೆಯುತ್ತಿದ್ದ ದಿನದಂದು ವಿಳಾಸ ಬರೆಯಲ್ಪಡದ ಲಕೋಟೆಯಿಂದ ತನಗೆ ಬಂದಿದೆ. ಆ ಲಕೋಟೆಯಲ್ಲಿ ಅರ್ಥಶಾಸ್ತ್ರ ಪೇಪರ್ ಉತ್ತರವಿರುವ ಕೈಬರಹದ ನಾಲ್ಕು ಶೀಟ್ ಪೇಪರ್‌ಗಳಿದ್ದವು ಎಂದು ಸಿಬಿಎಸ್‌ಇ ತಿಳಿಸಿದೆ.
ಸಿಬಿಎಸ್‌ಇ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ವಾಟ್ಸಾಪ್ ನಂಬರ್ ಒಂದನ್ನು ಉಲ್ಲೇಖೀಸಿದ್ದು ಈ ನಂಬರ್ ಬಳಸಿಕೊಂಡು ಲೀಕ್ ಆದ ಪೇಪರನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯ ಬಿಡಲಾಗಿದೆ ಎಂದು ಹೇಳಿದೆ.
ಸಿಬಿಎಸ್‌ಇ ಪೇಪರ್ ಲೀಕ್ ಬಗ್ಗೆ ದಿಲ್ಲಿ ಪೊಲೀಸರು ಉನ್ನತ ಮಟ್ಟ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರೂಪಿಸಿದೆ. ಈ ತಂಡದಲ್ಲಿ 2 ಡಿಸಿಪಿಗಳ, 4 ಎಸಿಪಿಗಳು ಮತ್ತು ಐದು ಇನ್ಸ್‌ಪೆಕ್ಟರ್‌ಗಳು ಇದ್ದಾರೆ. ದಿಲ್ಲಿ ಪೊಲೀಸರು ಪೇಪರ್ ಲೀಕ್ ಬಗ್ಗೆ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.