Advertisement

ಸಿಬಿಎಸ್‌ಸಿ ಪಠ್ಯಾಧಾರಿತ ಏಕರೂಪ ಶಿಕ್ಷಣ ಜಾರಿ

11:51 AM Jun 24, 2018 | |

ಹುಣಸೂರು: ಮಗುವಿಗಾಗಿ ಶಾಲೆ ಅದು ಶಿಕ್ಷಕರಿಗಲ್ಲ ಎಂಬುದನ್ನು ಅರಿಯಬೇಕಿದೆ. ಮುಂದೆ ಸಿಬಿಎಸ್‌ಸಿ ಪಠ್ಯಕ್ರಮ ಆಧಾರಿತ ಏಕರೂಪ ಶಿಕ್ಷಣ ಜಾರಿಗೆ ಬರುತ್ತಿದೆ. ನಮ್ಮ ಶಿಕ್ಷಕರು ಬದಲಾಗಬೇಕಿದೆ ಎಂದು ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು.

Advertisement

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ತಾಲೂಕು ಪ್ರೌಢಶಾಲೆಗಳ ಸಹಶಿಕ್ಷಕರಿಗಾಗಿ ನಡೆದ ಯಶಸ್ಸಿನ ಹರಿಕಾರ ಗುರು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಗೆ ಬರುವ ಮಗುವನ್ನು ಕೇಂದ್ರ ಬಿಂದುವನ್ನಾಗಿಸಿಕೊಂಡು ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕಿದೆ. ಶಿಕ್ಷಕರು ಮಕ್ಕಳಲ್ಲಿ ಮಕ್ಕಳಾಗಿ ಅವರ ಭಾವನೆ, ಮಾತುಗಳನ್ನು ಕೇಳುವ ಕಿವಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಸರಕಾರಿ ಶಾಲೆಗಳು ಬಾಗಿಲು ಹಾಕುತ್ತಿರುವುದು ದುರಂತ. ಸದನದಲ್ಲಿ ತಲಾ 7 ಮಂದಿ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಇವರೆಲ್ಲ ಸದನದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಚರ್ಚಿಸದೆ, ಖಾಸಗಿ ಆಡಳಿತ ಮಂಡಳಿ, ಶಿಕ್ಷಕರ ಬಗ್ಗೆ ಮಾತ್ರ ಚರ್ಚಿಸುತ್ತಾರೆ. ಇದನ್ನು ಪ್ರಶ್ನಿಸಿ, ವಿರೋಧ ಕಟ್ಟಿಕೊಂಡಿದ್ದೆ ಎಂದು ಸ್ಮರಿಸಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ರೇವಣ್ಣ  ಮಾತನಾಡಿ, ತಾಲೂಕಿನ ಹಲವು ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿದೆ. ಶಾಸಕರ ಗಮನಕ್ಕೆ ತರಲಾಗಿದೆ. ಶಿಕ್ಷಕರಲ್ಲಿ ಹೊಸ ಹುರುಪು-ಕ್ರಿಯಾಶೀಲತೆಯನ್ನು ಬೆಳೆಸಲು ಕಾರ್ಯಗಾರಗಳು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪ್ರಾತ್ಯಕ್ಷತೆ ಮೂಲಕ ಪಾಠ ಮಾಡಿ: ಶಿಕ್ಷಣ ತಜ್ಞ, ತರಬೇತುದಾರ ಚೇತನ್‌ರಾಮ್‌ ಮಾತನಾಡಿ, ಶಿಕ್ಷಕರು ಮಕ್ಕಳನ್ನು ಅಂಕದ ಹಿಂದೆ ಓಡಿಸುವ  ಪ್ರವೃತ್ತಿ ಬೇಡ. ಪ್ರೀತಿಯಿಂದ ಕಾಣುವ, ಜ್ಞಾನದೊಂದಿಗೆ ಕೌಶಲ್ಯ, ಮೌಲ್ಯಗಳನ್ನು ತಿಳಿಸುವ, ಬದುಕು ಕಟ್ಟಿಕೊಳ್ಳುವ ಶಿಕ್ಷಣ ನೀಡಬೇಕು. ಕೊಠಡಿಯಲ್ಲಿ ಮಕ್ಕಳನ್ನು ತಮ್ಮತ್ತ ಸೂಜಿಗಲ್ಲಿನಂತೆ ಸೆಳೆಯುವ ಪಾಠ ನಿಮ್ಮಿಂದಾಗಲಿ,

Advertisement

ಪಾಠ ಮಾಡುವ ವೇಳೆ ಮಧ್ಯದಲ್ಲಿ ಪ್ರಶ್ನಿಸುವ, ಕಥೆ ಹೇಳುವ, ನೀತಿ ಪಾಠಗಳನ್ನು ತುಂಬುತ್ತಿರಬೇಕು. ಪಾಠಕ್ಕೆ ತಕ್ಕಂತೆ ಪ್ರಾತ್ಯಕ್ಷತೆ ನೀಡಿದಲ್ಲಿ ಬದಲಾವಣೆ ಸಾಧ್ಯ. ಅವರಲ್ಲಿ ಕೇಳಿಸುವ, ಓದಿಸುವ, ಪ್ರಶ್ನಿಸುವುದನ್ನು ರೂಢಿಸಿಕೊಳ್ಳಿ. ಪಾಠದಾಚೆಗಿನ ವಿಚಾರಗಳನ್ನೂ ತಿಳಿಸುವ ಮೂಲಕ ಅವರಲ್ಲಿ ಜ್ಞಾನವನ್ನು ಅರಳಿಸಬೇಕು. . ಕಲಿಕೆಯಲ್ಲಿ ಹಿಂದುಳಿದವರನ್ನು ಗುರುತಿಸಿ ಹೆಚ್ಚಿನ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.

ರೋಟರಿ ಕ್ಲಬ್‌ ಅಧ್ಯಕ್ಷ ಶ್ರೀಧರ್‌, ಇನ್ನರ್‌ವೀಲ್‌ ಕ್ಲಬ್‌ ಅಧ್ಯಕ್ಷರಾದ ಸೌಮ್ಯ, ಡಾ.ರಾಜೇಶ್ವರಿ, ಜೆಡಿಎಸ್‌ ಅಧ್ಯಕ್ಷ ಮಾದೇಗೌಡ, ಬಿಆರ್‌ಸಿ ಮೊಗಣ್ಣ, ಸಿಆರ್‌ಪಿಗಳಾದ ಕುಮಾರ್‌, ಮಾಧು ಪ್ರಸಾದ್‌, ಶಿಕ್ಷಕರ ಸಂಘಟನೆಯ ಕಾಂತರಾಜ್‌, ಸಿದ್ದರಾಜು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next