Advertisement

ಬೇಲಿಯೇ ಹೊಲ ಮೇಯ್ದ ಕತೆ!

06:00 AM Nov 02, 2018 | |

ಸಿಬಿಐ ಉನ್ನತ ಅಧಿಕಾರಿಗಳ ಮೇಲಿನ ಭ್ರಷ್ಟಾಚಾರ ಆರೋಪ ಈಗಲೂ ಬಿಸಿ ಬಿಸಿ ಸುದ್ದಿ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಮೇಲ್ಮಟ್ಟದ ಅಧಿಕಾರಿಗಳ ಮೇಲೆಯೇ ಭ್ರಷ್ಟಾಚಾರ ಆರೋಪ ವ್ಯಕ್ತವಾಗಿರುವುದು ಚಿಂತೆಯ ವಿಷಯ.

Advertisement

ಈಗ ಚರ್ಚೆಯಾಗುತ್ತಿರುವ ವಿಚಾರಗಳೆಲ್ಲ ರಾಜಕೀಯ ಪ್ರೇರಿತವಾಗಿವೆ. ಆದರೆ, ಯಾವ ವಿಚಾರದ ಕುರಿತಾಗಿ ಹೆಚ್ಚು ಗಮನ ಕೊಡಬೇಕಿತ್ತೋ ಅದು ಚರ್ಚೆಯಾಗುತ್ತಲೇ ಇಲ್ಲ. ಸಿಬಿಐಯಂತಹ ಸ್ವತಂತ್ರ ಸಂಸ್ಥೆಗಳನ್ನು ಮೋದಿ ಸರಕಾರ ನಾಶ ಮಾಡುತ್ತಿದೆ. ಅವುಗಳ ಉನ್ನತ ಸ್ಥಾನಗಳಲ್ಲಿ ತಮಗೆ ನಿಷ್ಠರಾಗಿರುವವರನ್ನೇ ನೇಮಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳೂ ಇದನ್ನು ಮಾಡಿಲ್ಲ ಎಂಬುದು ಇದರ ಅರ್ಥವಲ್ಲ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಸಂಸತ್ತು ಹಾಗೂ ರಾಜ್ಯಗಳ ವಿಧಾನಸಭೆಗಳ ಅಧಿಕಾರವನ್ನು ಆಗಿನ ಕಾಂಗ್ರೆಸ್‌ ಸರಕಾರ ಮೊಟಕುಗೊಳಿಸಲಿಲ್ಲವೇ? ಸಂವಿಧಾನದ 42ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದು ನ್ಯಾಯಾಂಗ ವ್ಯವಸ್ಥೆಯಲ್ಲೂ ಅಲ್ಲೋಲಕಲ್ಲೋಲ ಸೃಷ್ಟಿಸಲಿಲ್ಲವೇ? ಈ ವಿಚಾರದಲ್ಲಿ ಮೋದಿ ಸರಕಾರವೂ ಟೀಕೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಲ್ಲಿ ಖಾಲಿಯಿರುವ ನ್ಯಾಯಾಧೀಶರ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಸ್ಥಗಿತ ಗೊಳಿಸುವಂತಿಲ್ಲ. ಅದೂ ಅಲ್ಲದೆ, ಇಬ್ಬರು ಸೇನಾಧಿಕಾರಿಗಳ ಹಿರಿತನವನ್ನು ಕಡೆಗಣಿಸಿ ಭೂಸೇನೆಯ ಮುಖ್ಯಸ್ಥರಾಗಿ ಜನರಲ್‌ ಬಿಪಿನ್‌ ರಾವತ್‌ ಅವರನ್ನು ಕೇಂದ್ರ ಸರಕಾರ ನೇಮಕ ಮಾಡಿದೆ.

ತನ್ನದೇ ಕಚೇರಿ ಮೇಲೆ ಮೊದಲ ದಾಳಿ! 
ಸಿಬಿಐನ ಇಬ್ಬರು ಉನ್ನತ ಅಧಿಕಾರಿಗಳ ಮೇಲೆ ವ್ಯಕ್ತವಾಗಿರುವ ಭ್ರಷ್ಟಾಚಾರದ ಆರೋಪಗಳು ನಿಜವೇ ಆಗಿದ್ದರೆ ಅವರು ವಾಹನ ಚಾಲಕರು, ಸವಾರರಿಂದ ಲಂಚ ಪೀಕುವ ಸಂಚಾರ ಪೊಲೀಸರಿಗಿಂತ ಹೆಚ್ಚಿನವರು ಆಗಿರಲಿಕ್ಕೆ ಸಾಧ್ಯವಿಲ್ಲ. ಸಿಬಿಐ ನಿರ್ದೇಶಕ ಅಲೋಕ್‌ ಕುಮಾರ್‌ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನ ಅವರ ಮೇಲೆ ಲಂಚ ಸ್ವೀಕಾರ ಆರೋಪ ಹೊರಿಸಲಾಗಿದ್ದು, ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಸಿಬಿಐ ದಿಲ್ಲಿಯಲ್ಲಿರುವ ತನ್ನದೇ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿ, ತನ್ನದೇ ಡಿಎಸ್ಪಿ ಒಬ್ಬರನ್ನು ಬಂಧಿಸಿರುವುದು ಇತಿಹಾಸದಲ್ಲೇ ಮೊದಲ ಪ್ರಕರಣವೆಂದು ದಾಖಲಾಗಿದೆ. ಇದು ಮೊದಲ ದಾಳಿ ಇದ್ದಿರಬಹುದು. ಆದರೆ, ತನ್ನದೇ ಕಚೇರಿಯ ಅತಿ ಹಿರಿಯ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿರುವುದು ಇದೇ ಮೊದಲೇನೂ ಅಲ್ಲ. 2010-12ರ ಅವಧಿಯಲ್ಲಿ ನಿರ್ದೇಶಕರಾಗಿದ್ದ ರಂಜಿತ್‌ ಸಿನ್ಹಾ ಹಾಗೂ ಎಸ್‌.ಪಿ. ಸಿಂಗ್‌ ಅವರ ಮೇಲೆ ಸಿಬಿಐ ಕೇಸು ದಾಖಲಿಸಿಕೊಂಡಿತ್ತು. 

2017ರ ಜನವರಿಯಲ್ಲಿ ರಂಜಿತ್‌ ಸಿನ್ಹಾ ಅವರು ನಿವೃತ್ತರಾದಾಗ ಸಿಬಿಐ ನಿರ್ದೇಶಕರಾಗಿ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿ, ಎಡಿಜಿಪಿ ರೂಪಕ್‌ ಕುಮಾರ್‌ ದತ್ತಾ ಅವರನ್ನು ನೂತನ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿದ್ದರೆ ಸದ್ಯದ ಸ್ಥಿತಿ ಎದುರಾಗುತ್ತಿರಲಿಲ್ಲವೇನೋ. ಆದರೆ, ದತ್ತಾ ಅವರನ್ನು ಕೇಂದ್ರ ಗೃಹ ಇಲಾಖೆಗೆ ವರ್ಗಾವಣೆ ಮಾಡಿಕೊಂಡು, ಆಗ ದಿಲ್ಲಿಯ ಪೊಲೀಸ್‌ ಆಯುಕ್ತರಾಗಿದ್ದ ಅಲೋಕ್‌ ವರ್ಮಾ ಅವರನ್ನು ಸಿಬಿಐ ಮುಖ್ಯಸ್ಥರಾಗಿ ಸರಕಾರ ನೇಮಿಸಿತು. ಅವಗಣನೆಗೆ ಒಳಗಾದ ದತ್ತಾ ಕರ್ನಾಟಕದಲ್ಲಿ ಸೇವೆಗೆ ಮರಳಿದರು. ಪೊಲೀಸ್‌ ಇಲಾಖೆಯ ಡೈರೆಕ್ಟರ್‌ ಜನರಲ್‌-ಇನ್‌ಸ್ಪೆಕ್ಟರ್‌ ಜನರಲ್‌ ಆಗಿ (ಡಿಜಿ-ಐಜಿ) ನೇಮಕಗೊಂಡರು. ಪೊಲೀಸ್‌ ಇಲಾಖೆಯ ಮುಖ್ಯಸ್ಥರು ಎರಡು ವರ್ಷ ಹುದ್ದೆಯಲ್ಲಿರಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ಅನುಷ್ಠಾನ ಮಾಡುವಲ್ಲಿ ಕರ್ನಾಟಕ ಸರಕಾರ ವಿಫ‌ಲವಾಗಿದ್ದರಿಂದ ಅವರು ಕೇವಲ ಏಳು ತಿಂಗಳು ಆ ಹುದ್ದೆಯಲ್ಲಿ ಉಳಿದರು. ಲೋಕಾಯುಕ್ತದ ಪೊಲೀಸ್‌ ವ್ಯವಸ್ಥೆ (ಎಸಿಬಿ) ಮುಖ್ಯಸ್ಥರಾಗಿದ್ದ ವೇಳೆ ದತ್ತಾ ಅವರು ದೃಢತೆಗೆ ಹೆಸರಾಗಿದ್ದರು. ಮುಂದೆ ಅವರಿಗೆ ರಾಜ್ಯದಲ್ಲಿ ಮತ್ತೂಂದು ಹುದ್ದೆ ನೀಡಲಾಯಿತು.

ಕೇಂದ್ರ ಸರಕಾರ ಸಿಬಿಐ ವಿಶೇಷ ನಿರ್ದೇಶಕರಾಗಿ ಗುಜರಾತ್‌ ಕೇಡರ್‌ನ ಐಪಿಎಸ್‌ ಅಧಿಕಾರಿ ರಾಕೇಶ್‌ ಅಸ್ಥಾನ ಅವರನ್ನು ಕರೆತಂದಿತು. ಫೆ. 27, 2002ರಂದು ಗೋಧಾ ರೈಲು ನಿಲ್ದಾಣದಲ್ಲಿ ರಾಮಭಕ್ತರನ್ನು ಸಜೀವ ದಹನ ಮಾಡಿದ ಪ್ರಕರಣವನ್ನು ರಾಕೇಶ್‌ ಅವರೇ ತನಿಖೆ ಮಾಡಿದ್ದು ಈ ನೇಮಕಾತಿಗೆ ಒಂದು ಕಾರಣವಿದ್ದೀತು. ನಿರ್ದೇಶಕ ಅಲೋಕ್‌ ವರ್ಮಾ ಅವರ ಆಕ್ಷೇಪದ ಹೊರತಾಗಿಯೂ ಈ ನೇಮಕಾತಿ ಆಯಿತು. ಅಸ್ಥಾನ ಭ್ರಷ್ಟಾಚಾರದ ಸುಮಾರು 15 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಸಿಬಿಐನ ನಿಜವಾದ ಮುಖ್ಯಸ್ಥರಂತೆ ಕೆಲಸ ಮಾಡಲು ಅಸ್ಥಾನ ಪ್ರಯತ್ನಿಸಿದ್ದೂ ವರ್ಮಾ ಅವರ ಅತೃಪ್ತಿಗೆ ಕಾರಣವಾಗಿತ್ತು.

Advertisement

ಘನತೆ ಮಣ್ಣುಪಾಲು 
ಈ ಘಟನೆಗಳಿಂದ ಸಿಬಿಐನ ಘನತೆ ಮಣ್ಣುಪಾಲಾಗಿದೆ ಎಂಬುದನ್ನು ನಿರಾಕರಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿಬಿಐ ನಿರ್ದೇಶಕರೆಂದರೆ ದೇಶದ ವರಿಷ್ಠ ಐಪಿಎಸ್‌ ಅಧಿಕಾರಿ ಎಂಬುದೇ ಎಲ್ಲರ ಭಾವನೆ. ಕೆಲವು ಸಂದರ್ಭಗಳಲ್ಲಿ, ಡಿಜಿ ದರ್ಜೆಯ ಕೆಲವು ಸಿಬಿಐ ಅಧಿಕಾರಿಗಳು ನಿರ್ದೇಶಕರಿಗಂತಲೂ ಹೆಚ್ಚು ಸೇವಾ ಹಿರಿತನ ಹೊಂದಿರುತ್ತಾರೆ. ಅವರಿಗೆ ನಿರ್ದೇಶಕರ ಹುದ್ದೆ ನಿರಾಕರಿಸ ಲಾಗುತ್ತದೆ. ವಿಶೇಷ ಪೊಲೀಸ್‌ ಸಂಸ್ಥೆಯೊಂದು ದ್ವಿತೀಯ ಮಹಾಯುದ್ಧದಲ್ಲಿ ಹೋರಾಡುತ್ತಿದ್ದ ಬ್ರಿಟಿಷ್‌ ಸೈನ್ಯಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ಆಗಿದ್ದ ಭ್ರಷ್ಟಾಚಾರವನ್ನು ಹತ್ತಿಕ್ಕಲು ಕಾರ್ಯಾಚರಣೆ ನಡೆಸಿತ್ತು. ಸರಕಾರದ ಮಟ್ಟದಲ್ಲಿ ಭ್ರಷ್ಟಾಚಾರದ ತನಿಖೆಗೆ ನೇಮಿಸಲಾಗಿದ್ದ ಕೆ. ಶಾಂತಾರಾಮ್‌ ಸಮಿತಿ ಸಲ್ಲಿಸಿದ ವರದಿಯಲ್ಲಿರುವ ಶಿಫಾರಸುಗಳಂತೆ ಸಿಬಿಐ ಸ್ಥಾಪನೆಗೊಂಡಿತು. 1963ರಿಂದ ಈಚೆಗೆ ಉನ್ನತ ತನಿಖಾ ಸಂಸ್ಥೆಯನ್ನು ಸಿಬಿಐ ಎಂಬ ಹೆಸರಿನಿಂದ ಕರೆಯುವ ಪರಿಪಾಠ ಶುರುವಾಯಿತು. 1964ರಲ್ಲಿ ಸೆಂಟ್ರಲ್‌ ವಿಜಿಲೆನ್ಸ್‌ ಕಮಿಷನ್‌ ಸ್ಥಾಪನೆಯೂ ಆಯಿತು. 

ಹಲವು ಪ್ರಖ್ಯಾತ ಐಪಿಎಸ್‌ ಅಧಿಕಾರಿಗಳು ಸಿಬಿಐ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಪೈಕಿ ಡಿ.ಪಿ. ಕೊಹ್ಲಿ (1963-68), ಎಫ್.ವಿ. ಅರುಲ್‌, ಸಿ.ವಿ. ನರಸಿಂಹನ್‌ ಹಾಗೂ ಆರ್‌.ಕೆ. ರಾಘವನ್‌ ಪ್ರಮುಖರು. ಕರ್ನಾಟಕ ಕೇಡರಿನ ಒಬ್ಬರೇ ಐಪಿಎಸ್‌ ಅಧಿಕಾರಿ (ಜೋಗಿಂದರ್‌ ಸಿಂಗ್‌) ಸಿಪಿಐ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರನ್ನು ಹೊರತುಪಡಿಸಿದರೆ, 1968ರಲ್ಲಿ ಡಿ.ಆರ್‌. ಕಾರ್ತಿಕೇಯನ್‌ ಪ್ರಭಾರ ನಿರ್ದೇಶಕರಾಗಿದ್ದರು.

ಸಿಬಿಐನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತಾಗಿ ಮೊದಲಿಗೆ ಬಹಿರಂಗವಾಗಿ ಮಾತನಾಡಿದ್ದು ಇದೇ ಜೋಗಿಂದರ್‌ ಸಿಂಗ್‌. ಈ ಹಿಂದೆ ಸಹ ನಿರ್ದೇಶಕರಾಗಿದ್ದ ಬಿ.ಆರ್‌. ಲಾಲ್‌ ಅವರು ತನಿಖಾ ದಳದ ಹುಳುಕುಗಳನ್ನು ತಮ್ಮ ಪುಸ್ತಕ “Who Owns the CBI?’ಯಲ್ಲಿ ತೆರೆದಿಟ್ಟರು. ತನಿಖೆಯ ದಿಕ್ಕನ್ನು ಬದಲಿಸಿ, ಕೇಸುಗಳನ್ನು ಹೇಗೆ ದಾರಿ ತಪ್ಪಿಸುತ್ತಾರೆ ಎಂಬ ವಿವರಗಳು ಇದರಲ್ಲಿವೆ. ಬೋಫೋರ್ಸ್‌ ಹಗರಣದ ಪ್ರಮುಖ ಆರೋಪಿ, ಇಟಲಿಯ ಮಧ್ಯವರ್ತಿ ಒಟ್ಟಾವಿಯೋ ಕ್ವಟ್ರೊಚ್ಚಿ ಅವರು ದೇಶ ಬಿಟ್ಟು ಪಲಾಯನ ಮಾಡಲು ಅವಕಾಶ ನೀಡಿದ್ದು ಸಿಬಿಐ ಕಾರ್ಯವೈಖರಿಗೆ ನಿದರ್ಶನವೂ ಆಯಿತು. 2009ರಲ್ಲಿ ವಾಂಟೆಡ್‌ ಪಟ್ಟಿಯಿಂದ ಕ್ವಟ್ರೊಚ್ಚಿ ಹೆಸರನ್ನು ತೆಗೆಯುವಂತೆ ಇಂಟರ್‌ಪೋಲ್‌ಗೆ ಹೇಳಿ, ಪಲಾಯನಕ್ಕೆ ಸಹಕರಿಸಿದೆ ಎಂಬ ಆರೋಪ ಸಿಬಿಐ ಮೇಲಿದೆ. ಸಿಬಿಐನ ಕೆಲವು ನಡೆಗಳು ಆಕ್ಷೇಪಗಳಿಗೆ ಕಾರಣವಾದವು. ವಿನೀತ್‌ ನಾರಾಯಣ್‌ ಪ್ರಕರಣದಲ್ಲಿ (1996) ಸಿಬಿಐ ಸೆಂಟ್ರಲ್‌ ವಿಜಿಲೆನ್ಸ್‌ ಕಮಿಷನ್‌ ಮೇಲುಸ್ತುವಾರಿಯಲ್ಲಿ ಕೆಲಸ ಮಾಡ ಬೇಕೆಂದು ಸುಪ್ರೀಂ ಕೋರ್ಟ್‌ ಸೂಚಿಸಿದ್ದು ಉಲ್ಲೇಖನೀಯ. ಈಗಲೂ ಅದೇ ಸಂಸ್ಥೆ ಸಿಬಿಐ ನಿರ್ದೇಶಕ ವರ್ಮಾ ಹಾಗೂ ವಿಶೇಷ ನಿರ್ದೇಶಕ ಅಸ್ಥಾನಾ ವಿರುದ್ಧ ತನಿಖೆ ನಡೆಸುತ್ತಿದ್ದು, ಕಡ್ಡಾಯ ರಜೆ ಮೇಲೆ ತೆರಳುವಂತೆ ಅವರಿಗೆ ಸೂಚಿಸಿದೆ.

ಸಮರ್ಥ, ಪ್ರಾಮಾಣಿಕ 
ರಾಜ್ಯಗಳ ತನಿಖಾ ಸಂಸ್ಥೆಗಳಿಗೆ ಹೋಲಿಸಿದರೆ ಇಂದಿಗೂ ಸಿಬಿಐ ಹೆಚ್ಚು ಪ್ರಾಮಾಣಿಕ ಹಾಗೂ ಸಮರ್ಥ ತನಿಖಾ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ. ಪ್ರಕರಣಗಳನ್ನು ಸಿಬಿಐಗೆ ವಹಿಸುವಂತೆ ಬಹುತೇಕ ಎಲ್ಲ ಪ್ರತಿಪಕ್ಷ ನಾಯಕರು ಆಗಾಗ ಆಗ್ರಹಿಸುವುದುಂಟು. ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಿಗೂ ಸಿಬಿಐ ಮೇಲೆ ಹೆಚ್ಚು ವಿಶ್ವಾಸವಿದ್ದು, ಪ್ರಕರಣಗಳ ವಿಶೇಷ ತನಿಖೆಗಾಗಿ ವಹಿಸುವುದನ್ನು ಕಾಣುತ್ತೇವೆ. ಈಗ ಸೆಂಟ್ರಲ್‌ ವಿಜಿಲೆನ್ಸ್‌ ಕಮಿಷನ್‌ ಆದೇಶಿಸಿರುವ ತನಿಖೆಯ ಮೇಲುಸ್ತುವಾರಿಗೆ ಸವೊìàಚ್ಚ ನ್ಯಾಯಾಲಯವು ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್‌ ಅವರನ್ನು ನೇಮಿಸಿದೆ. ಈ ಮೂಲಕ ಸಿಬಿಐ ಸವೊìàಚ್ಚ ನ್ಯಾಯಾಲಯದ ಕಣ್ಗಾವಲಿನಲ್ಲಿದೆ.

ಸಿಬಿಐ ನಿರ್ದೇಶಕರ ಕಚೇರಿಗೆ ಹೆಚ್ಚು ಮಹತ್ವ ಇರುವುದನ್ನು ಗಮನಿಸಬೇಕು. ಲೋಕಪಾಲ ಕಾಯ್ದೆಯಂತೆ ರಚನೆಯಾದ ಸಮಿತಿಯೇ ಸಿಬಿಐ ನಿರ್ದೇಶಕರನ್ನು ನೇಮಿಸುತ್ತದೆ. ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕರೇ ಈ ಸಮಿತಿಯ ಸದಸ್ಯರು. ಅಂತಹ ವ್ಯಕ್ತಿಯೇ ಲಂಚ ಸ್ವೀಕಾರ ಆರೋಪ ಎದುರಿಸುತ್ತಿದ್ದಾರೆ ಎಂದರೆ, ದೇಶ ಎತ್ತ ಸಾಗುತ್ತಿದೆ ಎಂಬುದರ ಸಂಕೇತವೇ?

ಸಮಗ್ರತೆಯ ವಿಚಾರದಲ್ಲಿ ನಮ್ಮ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ನಿಷ್ಠೆ ಬದಲಾಗಿರುವುದೇ ಇಂದಿನ ಸ್ಥಿತಿಗೆ ಕಾರಣ ಎನ್ನಬಹುದು. ಕೇಂದ್ರೀಯ ಜಾಗೃತ ಆಯೋಗದ ಆಯುಕ್ತ ಪಿ. ಶಂಕರ್‌ ಬೆಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯೊಂದರ ವರದಿಯನ್ನು ನಾನು ಮಾಡಿದ್ದೆ. ಅಲ್ಲಿ ಅವರು ಹೇಳಿದ್ದಿಷ್ಟು: “ಐಎಎಸ್‌ ಆಗಿರುವ ಮುಖ್ಯ ಕಾರ್ಯದರ್ಶಿಯೊಬ್ಬರು ಭ್ರಷ್ಟರಾಗುತ್ತಾರೆ ಎಂಬುದನ್ನು ಯೋಚಿಸಲೂ ಸಾಧ್ಯವಿಲ್ಲ!’ ಶಂಕರ್‌ ಅವರು ತಮಿಳುನಾಡು ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು ಈ ಹೇಳಿಕೆಗೆ ಒಂದು ಕಾರಣವಿದ್ದೀತು. ಈಗ ಕೇಂದ್ರೀಯ ಜಾಗೃತ ಆಯೋಗದ ಆಯುಕ್ತರಾಗಿರುವವರು ಶರದ್‌ ಕುಮಾರ್‌ ಎಂಬ ಐಪಿಎಸ್‌ ಅಧಿಕಾರಿ. ನಿಟ್ಟೂರು ಶ್ರೀನಿವಾಸರಾಜು (1964-68) ಮೊದಲ ಸಿವಿಸಿ ಆಗಿದ್ದರು. ಅವರು ಮೈಸೂರು ಸಂಸ್ಥಾನದ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದವರು. ಅವರ ಬಳಿಕ ಸುಬಿಮಲ್‌ ದತ್‌ ಐಸಿಎಸ್‌, ಆರ್‌.ಕೆ. ತ್ರಿವೇದಿ, ಸಿ.ಜಿ. ಸೋಮಯ್ಯ ಹಾಗೂ ಎನ್‌. ವಿಟuಲ್‌ ಸಿವಿಸಿ ಹುದ್ದೆಗೇರಿದವರಲ್ಲಿ ಪ್ರಮುಖರು. ಇಲ್ಲಿಯೂ ಕ್ರಿಮಿನಲ್‌ ಪ್ರಕರಣವೊಂದರಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಪಿ.ಜೆ. ಥಾಮಸ್‌ ಅವರನ್ನು ಸಿವಿಸಿ ಹುದ್ದೆಯಿಂದ ತೆಗೆದು ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next