ಮುಂಬಯಿ: ಮುಂಬಯಿ ಮೂಲದ ಆಭರಣ ವ್ಯಾಪಾರಿಯಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಜಾರಿ ನಿರ್ದೇಶನಾಲಯದ(ED) ಉನ್ನತ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣಗಳ ತನಿಖೆಯ ಹೊಣೆಗಾರಿಕೆಯಿರುವ ಕೇಂದ್ರೀಯ ಸಂಸ್ಥೆಯ ಸಹಾಯಕ ನಿರ್ದೇಶಕ ಸಂದೀಪ್ ಸಿಂಗ್ ಯಾದವ್ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿರುವ ವ್ಯಕ್ತಿಯಿಂದ ಮೊತ್ತವನ್ನು ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬುಧವಾರ ರಾತ್ರಿ ಹೊಸದಿಲ್ಲಿಯಲ್ಲಿ ಸಿಬಿಐನ ಮುಂಬೈ ಘಟಕ ಬಂಧಿಸಿದೆ. ಸಿಬಿಐ ಚಾರ್ಜ್‌ಶೀಟ್ ಪ್ರಕಾರ, ಜಾರಿ ನಿರ್ದೇಶನಾಲಯವು ಆಗಸ್ಟ್ 3 ಮತ್ತು 4 ರಂದು ಆಭರಣ ವ್ಯಾಪಾರಿಯ ಆವರಣದಲ್ಲಿ ಶೋಧ ನಡೆಸಿತ್ತು. ನಂತರ ಅಧಿಕಾರಿ ಯಾದವ್ ಅವರು ಆಭರಣ ವ್ಯಾಪಾರಿಯ ಮಗನಿಗೆ 25 ಲಕ್ಷ ರೂಪಾಯಿ ನೀಡದಿದ್ದರೆ ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು. ಸಿಬಿಐ ತನಿಖೆಯಿಂದ ಕಂಡುಬಂದಂತೆ ಮಾತುಕತೆಯ ಸಮಯದಲ್ಲಿ, ಲಂಚದ ಮೊತ್ತವನ್ನು 20 ಲಕ್ಷಕ್ಕೆ ಇಳಿಸಲಾಗಿತ್ತು.
“ಈ ಘಟನೆಯ ತತ್ ಕ್ಷಣದ ಅರಿವನ್ನು ತೆಗೆದುಕೊಂಡು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸಿ, ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಸಂದೀಪ್ ಸಿಂಗ್ ಯಾದವ್ ವಿರುದ್ಧ ಕ್ರಿಮಿನಲ್ ಕ್ರಮವನ್ನು ಪ್ರಾರಂಭಿಸಿದೆ” ಎಂದು ಸಿಬಿಐ ಹೇಳಿದೆ.
ಗುರುವಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಜಂಟಿ ತಂಡ ಯಾದವ್ ಅವರ ಕಚೇರಿ ಮೇಲೆ ದಾಳಿ ನಡೆಸಿ ಸಾಕ್ಷ್ಯ ಸಂಗ್ರಹಿಸಿತ್ತು. ಸಿಬಿಐ ಪ್ರಕಾರ, ತನಿಖೆಯು ಅಪರಿಚಿತ ಇತರರೊಂದಿಗೆ ಯಾದವ್ ರೂಪಿಸಿದ ಕ್ರಿಮಿನಲ್ ಸಂಚು ಕೂಡ ಬಹಿರಂಗವಾಗಿದೆ.