Advertisement

NEET-UG ಪೇಪರ್ ಲೀಕ್; ಸಿಬಿಐನಿಂದ ಕಿಂಗ್ ಪಿನ್ ಆರೋಪಿ ಬಂಧನ

01:08 AM Jul 12, 2024 | Team Udayavani |

ಹೊಸದಿಲ್ಲಿ: ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್‌ ಎಂದು ಹೇಳಲಾದ ರಾಕಿ ಅಲಿಯಾಸ್‌ ರಾಕೇಶ್‌ ರಂಜನ್‌ನನ್ನು ಗುರುವಾರ ಸಿಬಿಐ ಬಂಧಿಸಿದೆ.

Advertisement

ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಈತ ತಲೆಮರೆಸಿಕೊಂಡಿದ್ದ. ಈತ ನಳಂದಾ ಮೂಲದವನಾಗಿದ್ದು, ಇಡೀ ನೀಟ್‌ ಅಕ್ರಮ ಪ್ರಕರಣದ ಮಾಸ್ಟರ್‌ಮೈಂಡ್‌ ಸಂಜೀವ್‌ ಮುಖೀಯಾನ ಸಂಬಂಧಿ. ಗುರುವಾರ ಸಿಬಿಐ ತಂಡ ಈತನನ್ನು ಬಿಹಾರದ ಪಟ್ನಾದ ಹೊರವಲಯದಲ್ಲಿ ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದೆ. ಪಟ್ನಾದ ವಿಶೇಷ ಕೋರ್ಟ್‌ ಈತನನ್ನು 10 ದಿನ ಸಿಬಿಐ ವಶಕ್ಕೊಪ್ಪಿಸಿ ಆದೇಶ ನೀಡಿದೆ. ರಾಕಿ ಬಂಧನದ ಬೆನ್ನಲ್ಲೇ ಸಿಬಿಐ ಪಟ್ನಾ ಮತ್ತು ಕೋಲ್ಕತಾದ ಒಟ್ಟು 3 ಪ್ರದೇಶಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದೆ. ಇದಕ್ಕೂ ಮುನ್ನ ವಾರದ ಆರಂಭದಲ್ಲಿ ಬಿಹಾರ, ಝಾರ್ಖಂಡ್‌ನ‌ 15 ಕಡೆ ಸಿಬಿಐ ಶೋಧ ಕೈಗೊಂಡಿತ್ತು.

ಜು.18ಕ್ಕೆ ಸುಪ್ರೀಂನಲ್ಲಿ ವಿಚಾರಣೆ: ನೀಟ್‌ ಅಕ್ರಮಗಳಿಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜು.18ಕ್ಕೆ ಮುಂದೂಡಿದೆ. ಅಕ್ರಮ ಸಂಬಂಧ ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಫಿದವಿತ್‌ ಸಲ್ಲಿಸಿದ್ದು, ಅದರ ಪ್ರತಿ ಇತರ ಅರ್ಜಿದಾರರಿಗೆ ಲಭ್ಯವಾಗದಿರುವ ಕಾರಣ, ವಿಚಾರಣೆ ಮುಂದೂಡಲಾಗಿದೆ. ಸಾಮೂಹಿಕವಾಗಿ ಅಕ್ರಮ ನಡೆದಿಲ್ಲ, ಕೆಲವೇ ಮಂದಿಯ ನಡುವೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ಸಲ್ಲಿಸಿದ್ದ ಅಫಿದವಿತ್‌ನಲ್ಲಿ ಹೇಳಿತ್ತು.

ತಿರುಚಿದ ಸ್ಕ್ರೀನ್‌ಶಾಟ್‌ : ಶೀಘ್ರ ಚಾರ್ಜ್‌ಶೀಟ್‌?
ಯುಜಿಸಿ-ನೆಟ್‌ ಪ್ರಶ್ನೆಪತ್ರಿಕೆಯ ತಿರುಚಿದ ಸ್ಕ್ರೀನ್‌ಶಾಟ್‌ ಅನ್ನು ಟೆಲಿಗ್ರಾಂ ಮೂಲಕ ಹಂಚಿಕೊಂಡಿದ್ದ ಆರೋಪಕ್ಕೆ ಸಂಬಂಧಿಸಿ ಯುವಕನೊಬ್ಬನ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಬಿಐ ಸಿದ್ಧತೆ ನಡೆಸಿದೆ. ಯುವಕನೊಬ್ಬ ಆ್ಯಪ್‌ವೊಂದನ್ನು ಬಳಸಿ, ಪ್ರಶ್ನೆಪತ್ರಿಕೆಯೊಂದರ ಸ್ಕ್ರೀನ್‌ಶಾಟ್‌ ಅನ್ನು ತಿರುಚಿ, ಹಣ ಮಾಡುವ ಉದ್ದೇಶದಿಂದ ಅದನ್ನು ಯುಜಿಸಿ-ನೆಟ್‌ ಪ್ರಶ್ನೆಪತ್ರಿಕೆ ಎಂದು ಸುಳ್ಳು ಹೇಳಿ ಬಳಿಕ ಅದನ್ನು ಟೆಲಿಗ್ರಾಂನಲ್ಲಿ ಹಂಚಿಕೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next