Advertisement

ಸಿಬಿಡಿ ಸದ್ಗುರು ಶ್ರೀ ನಿತ್ಯಾನಂದ ಸೇವಾ ಸಂಘ: ಯಕ್ಷಗಾನ,ಸಮ್ಮಾನ

05:27 PM Apr 09, 2017 | |

ನವಿ ಮುಂಬಯಿ: ಸದ್ಗುರು ನಿತ್ಯಾನಂದರು ನಂಬಿದವರನ್ನು ಎಂದಿಗೂ ಕೈಬಿಟ್ಟವರಲ್ಲ. ಅವರ ಅನುಗ್ರಹದಿಂದ ನೂರಾರು ಮಂದಿ ಯಶಸ್ಸನ್ನು ಕಂಡ‌ವರಿದ್ದಾರೆ. ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ನಮ್ಮ ಮೂಲ ಪರಂಪರೆಯನ್ನು ಉಳಿಸಿಕೊಂಡು ಮುಂದುವರಿಯಬೇಕಾದ ಅನಿವಾರ್ಯತೆ ಇದೆ. ದೈವ-ದೇವರುಗಳ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸಿದಾಗ ನಮ್ಮ ಸಂಸ್ಕೃತಿ-ಸಂಸ್ಕಾರಗಳು ಉಳಿಯಬಹುದು. ಯಕ್ಷಗಾನವು ಧಾರ್ಮಿಕ ಅಂಶವನ್ನು ನೋಡುಗರಿಗೆ ನೀಡಿ ಅವರಲ್ಲಿ ಆಧ್ಯಾತ್ಮಿಕತೆಯ ಬೆಳಕು ಚಿಮ್ಮಿಸುತ್ತದೆ. ಆದ್ದರಿಂದ ನಾಡಿನ ಕಲೆ, ಸಂಸ್ಕೃತಿಗೆ ಎಲ್ಲರ ಪ್ರೋತ್ಸಾಹ, ಸಹಕಾರವಿರಬೇಕು ಎಂದು ಪನ್ವೇಲ್‌ ನಗರ ಸೇವಕ ಸಂತೋಷ್‌ ಜಿ. ಶೆಟ್ಟಿ ನುಡಿದರು.

Advertisement

ಎ. 1ರಂದು ಸಿಬಿಡಿ ಬೇಲಾಪುರದ ಸೆಕ್ಟರ್‌-8 ರಲ್ಲಿರುವ ಸದ್ಗುರು ನಿತ್ಯಾನಂದ ಸೇವಾ ಸಂಘದ ವತಿಯಿಂದಯಕ್ಷಗಾನ ಪ್ರದರ್ಶನದ ಮಧ್ಯೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದು ಯಕ್ಷಗಾನ ಕಲೆಯು ವಿಶ್ವಮಾನ್ಯತೆಯನ್ನು ಪಡೆಯುವಂತಾಗಲಿ. ಇದರಿಂದ ಕಲೆಯೊಂದಿಗೆ ಕಲಾವಿದರು ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಸಮಾರಂಭದಲ್ಲಿ ನಗರದ ಪ್ರಸಿದ್ಧ ಭಾಗವತ ನಾದಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಪ್ರಸಿದ್ಧ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಸಮ್ಮಾನಿಸಿ ಅಭಿನಂದಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರು, ಸಿಬಿಡಿ ಸದ್ಗುರು ನಿತ್ಯಾನಂದ ಸೇವಾ ಸಂಘದ ವತಿಯಿಂದ ನನಗೆ ನೀಡಿದ ಈ ಸಮ್ಮಾನವು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದ್ದೇನೆ. ಈ ಗೌರವ ಗೀತಾಂಬಿಕಾ ಮಂದಿರ ಯಕ್ಷಗಾನ ಮಂಡಳದ ಎಲ್ಲಾ ಕಲಾವಿದರಿಗೆ ಸಂದ ಗೌರವವಾಗಿದೆ. ಕಲಾಪ್ರೇಮಿಗಳ ಪ್ರೋತ್ಸಾಹ, ಸಹಕಾರವಿದ್ದರೆ ಮಾತ್ರ ಯಕ್ಷಗಾನ ಕಲೆ, ಕಲಾವಿದರು ಉಳಿಯಲು ಸಾಧ್ಯವಿದೆ ಎಂದು ನುಡಿದರು.

ಅತಿಥಿಯಾಗಿ ಪಾಲ್ಗೊಂಡು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ದೈವ-ದೇವರುಗಳನ್ನು ನಂಬಿದವರಿಗೆ ಎಲ್ಲವೂ ಒಳ್ಳೆಯದಾಗಿದೆ. ಸಿಬಿಡಿ ಸದ್ಗುರು ನಿತ್ಯಾನಂದ ಸೇವಾ ಸಂಘದವರು ಕಲೆಯ ಮೇಲಿಟ್ಟಿರುವ ಗೌರವ ಅಪಾರವಾಗಿದೆ. ಕಲೆ ಮತ್ತು ಕಲಾವಿದರನ್ನು ಸಂಘದ ಗೌರವದಿಂದ ಕಾಣುತ್ತಿರುವುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ. ನವಿಮುಂಬಯಿಯಲ್ಲಿ ಯಕ್ಷಗಾನ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಿದೆ. ಭವಿಷ್ಯದಲ್ಲೂ ಇಂತಹ ಸೇವೆಗಳು ತುಳು-ಕನ್ನಡಿಗರಿಗೆ ನಡೆಯುತ್ತಿರಲಿ ಎಂದು ಹೇಳಿ, ಸಮ್ಮಾನಿತರನ್ನು ಅಭಿನಂದಿಸಿ ಶುಭ ಹಾರೈಸಿದರು.

Advertisement

ನೆರೂಲ್‌ ಶ್ರೀ ಶನೀಶ್ವರ ಮಂದಿರದ ಧರ್ಮದರ್ಶಿ ರಮೇಶ್‌ ಎಂ.ಪೂಜಾರಿ ಅವರು ಮಾತನಾಡಿ, ಇಂದಿನ ಪೀಳಿಗೆ ಹಳೆಯ ಸಂಪ್ರದಾಯಗಳನ್ನು ಮರೆಯುತ್ತಿರುವುದು ವಿಷಾದನೀಯ. ದೈವ-ದೇವರುಗಳ ಬಗ್ಗೆ ಅಭಿಮಾನ ಬರಬೇಕಾದರೆ, ಇಂತಹ ಯಕ್ಷಗಾನ ಪ್ರಸಂಗಗಳನ್ನು ಮಕ್ಕಳಿಗೆ ತೋರಿಸುವ ಜವಾಬ್ದಾರಿಯನ್ನು ಪಾಲಕ-ಪೋಷಕರು ಹೊಂದಬೇಕು. ದೈವ-ದೇವರ ಕಾರಣಿಕವನ್ನು ಎಂದಿಗೂ ಅಲ್ಲಗಳೆಯಬಾರದು. ಹಿಂದಿನ ಕಾಲದಲ್ಲಿ ನಾವು ಯಕ್ಷಗಾನವಿದ್ದರೆ ಪಕ್ಕದ ಊರಿಗೆ ನಡೆದುಕೊಂಡು ಹೋಗಿ ವೀಕ್ಷಿಸುತ್ತಿದ್ದೆವು. ಆ ಕಾಲ ಸಂಪೂರ್ಣವಾಗಿ ಇಂದು ಬದಲಾಗಿದ್ದು, ಮಕ್ಕಳಿಗೆ ಕಲೆಯ ಬಗ್ಗೆ ಆಸಕ್ತಿಯನ್ನು ಮೂಡಿಸುವ ಕಾರ್ಯಗಳು ನಮ್ಮಿಂದಾಗಬೇಕು ಎಂದರು.

ನೆರೂಲ್‌ನ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದ ಕಾರ್ಯಾಧ್ಯಕ್ಷ ಕಿಶೋರ್‌ ಎಂ. ಶೆಟ್ಟಿ ಅವರು ಮಾತನಾಡಿ, ಸದ್ಗುರು ನಿತ್ಯಾನಂದರು ಎಲ್ಲಕ್ಕಿಂತ ಮಿಗಿಲಾದ ಶಕ್ತಿಯನ್ನು ಹೊಂದಿದ್ದು, ದೈವ-ದೇವರೊಂದಿಗೆ ಗುರುಗಳ ಆರಾಧನೆ ಅವಶ್ಯವಾಗಿದೆ. ಸಂಕಷ್ಟಗಳು ಬಂದಾಗ ದೇವರ ಮೊರೆ ಹೋಗದೆ ಪ್ರತಿನಿತ್ಯವೂ ದೇವರ ಧ್ಯಾನ ಮಾಡಿದಾಗ ಮನಸ್ಸು ಪ್ರಫುಲ್ಲಗೊಂಡು ಜೀವನ ಪಾವನಗೊಳ್ಳುತ್ತದೆ ಎಂದು ನುಡಿದರು.

ನೆರೂಲ್‌ನ ಮಾಜಿ ನಗರ ಸೇವಕ ಸುರೇಶ್‌ ಜಿ. ಶೆಟ್ಟಿ ಅವರು ಮಾತನಾಡಿ, ಭಗವಾನ್‌ ನಿತ್ಯಾನಂದರು ಹಾಗೂ ದೈವ-ದೇವರುಗಳ ಕೃಪೆ ಎಲ್ಲರ ಮೇಲಿರಲಿ. ಇಂದಿನ ಕಾರ್ಯಕ್ರಮವು ಅರ್ಥಪೂರ್ಣವಾಗಿದ್ದು, ಇಂತಹ ಕಾರ್ಯಕ್ರಮಗಳಿಗೆ ನಾವೆಲ್ಲರೂ ಸಹಕರಿಸಿ, ಪ್ರೋತ್ಸಾಹಿಸೋಣ ಎಂದರು.

ಸಮಾರಂಭದ ವೇದಿಕೆಯಲ್ಲಿ ಉದ್ಯಮಿಗಳಾದ ವಿದ್ಯಾಧರ ಹೆಗ್ಡೆ, ಸಮಾಜ ಸೇವಕ ಅರುಣ್‌ ಹರಿ ಶೆಟ್ಟಿ, ಅವರಾಲು ಕಂಕಣಗುತ್ತು ಕಿಶೋರ್‌ ಶೆಟ್ಟಿ, ಹಾಲಾಡಿ ಆದರ್ಶ್‌ ಶೆಟ್ಟಿ, ದಿವಾಕರ ಶೆಟ್ಟಿ ಸಿಬಿಡಿ, ಸಂಜೀವ ಶೆಟ್ಟಿ, ಸದಾನಂದ ಶೆಟ್ಟಿ ಮೊದಲಾದವರು, ಸಿಬಿಡಿ ಭಾಸ್ಕರ ಶೆಟ್ಟಿ ಹಾಗೂ ಸಿಬಿಡಿ ಸದ್ಗುರು ನಿತ್ಯಾನಂದ ಸೇವಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕ ಸಮಾಜ ಸೇವಕ ಸಿಬಿಡಿ ಭಾಸ್ಕರ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಸಲ್ಫಾ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ ಧರ್ಮದೈವ ಕೊಡಮಣ್ಣಿತ್ತಾಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ನವಿಮುಂಬಯಿಯ ವಿವಿಧೆಡೆಗಳ ಹೊಟೇಲ್‌ ಉದ್ಯಮಿಗಳು, ಸಮಾಜ ಸೇವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಲಾಭಿಮಾನಿಗಳು, ಕಲಾಪೋಷಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಿಬಿಡಿ ಸದ್ಗುರು ನಿತ್ಯಾನಂದ ಸೇವಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next