ಮೈಸೂರು: ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ಕಣಿವೆಯ ಜಲಾಶಯಗಳು ನಿಧಾನವಾಗಿ ಮೈದುಂಬಿ ಕೊಳ್ಳುತ್ತಿವೆ. ಈ ಭಾಗದ ಪ್ರಮುಖ ಜಲಾಶಯವಾದ ಕೆಆರ್‌ಎಸ್ 100 ಅಡಿ ದಾಟಿದ್ದರೆ, ಕಬಿನಿ 78.05 ಅಡಿ, ಕಬಿನಿ ಜಲಾಶಯ 2857.24 ಅಡಿಗೆ ತಲುಪಿದೆ.
ಜುಲೈ, ಆಗಸ್ಟ್ ತಿಂಗಳಲ್ಲಿ ಜಲಾಶಯಗಳು ಭರ್ತಿಯಾಗುವುದು ವಾಡಿಕೆ. ಆದರೆ, ಈ ವರ್ಷ ಉತ್ತಮ ಮಳೆಯಾಗದ ಪರಿಣಾಮ ಒಳಹರಿವು ಕಡಿಮೆಯಾದ ಜತೆಗೆ ನ್ಯಾಯಾಲಯದ ಆದೇಶ ಪಾಲನೆಗಾಗಿ ತಮಿಳುನಾಡಿಗೆ ನೀರು ಬಿಡಲು, ಜಲಾಶಯಗಳಿಂದ ನದಿಗೆ ನೀರು ಬಿಟ್ಟಿದ್ದರಿಂದ ಜಲಾಶಯಗಳು ಸೆಪ್ಟೆಂಬರ್ ತಿಂಗಳಾದರೂ ಭರ್ತಿಯಾಗಲಿಲ್ಲ.
ಕಾವೇರಿ ಕಣಿವೆಯ ಪ್ರಮುಖ ಜಲಾಶಯವಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ 124.80 ಅಡಿ(45.05 ಟಿಎಂಸಿ) ಗರಿಷ್ಠ ನೀರು ಸಂಗ್ರಹಣ ಸಾಮರ್ಥ್ಯದ ಕೆಆರ್‌ಎಸ್ ಜಲಾಶಯದಲ್ಲಿ ಭಾನುವಾರ ಸಂಜೆ 6ಗಂಟೆ ಮಾಪನದ ಪ್ರಕಾರ 104.00 ಅಡಿ ನೀರಿದ್ದು, 12114 ಕ್ಯೂಸೆಕ್ ಒಳಹರಿವು ಬರುತ್ತಿದೆ. 5894 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 20.94 ಟಿಎಂಸಿ ನೀರಿದೆ. ಕಳೆದ ವರ್ಷ ಜಲಾಶಯದಲ್ಲಿ ಈ ದಿನಾಂಕಕ್ಕೆ 91.22 ಅಡಿ (12.28 ಟಿಎಂಸಿ) ನೀರು ಸಂಗ್ರಹವಿತ್ತು.
ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ 2284.00 ಅಡಿ (15.67 ಟಿಎಂಸಿ) ನೀರು ಸಂಗ್ರಹಣ ಸಾಮರ್ಥ್ಯದ ಕಬಿನಿ ಜಲಾಶಯಕ್ಕೆ 3006 ಕ್ಯೂಸೆಕ್ ನೀರು ಒಳಹರಿವು ಬರುತ್ತಿದ್ದು, 2000 ಕ್ಯೂಸೆಕ್ ಹೊರ ಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 78.05 ಅಡಿ (12.39 ಟಿಎಂಸಿ) ನೀರಿದ್ದು, ಕಳೆದ ವರ್ಷ 2274.55 ಅಡಿ (10.18 ಟಿಎಂಸಿ) ನೀರಿತ್ತು.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಣಿವೆಯಲ್ಲಿರುವ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859.00 ಅಡಿ. ಭಾನುವಾರ ಸಂಜೆಯ ಮಾಪನದ ಪ್ರಕಾರ 2857.24 ಅಡಿ ನೀರಿದ್ದು, 1200 ಕ್ಯೂಸೆಕ್ ಒಳ ಹರಿವು ಬರುತ್ತಿದೆ. ನದಿಗೆ 400 ಕ್ಯೂಸೆಕ್ ಹಾಗೂ ನಾಲೆಗೆ 800 ಕ್ಯೂಸೆಕ್ ಸೇರಿದಂತೆ ಒಟ್ಟಾರೆ 1200 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ರೈತರ ಮೊಗದಲ್ಲಿ ಹರ್ಷ
ಅಚ್ಚುಕಟ್ಟು ಪ್ರದೇಶದಲ್ಲಿ ಮೊದಲೇ ಭತ್ತ ನಾಟಿ ಮಾಡಿದ್ದ ರೈತರಿಗೆ ಇದೀಗ ಮಳೆಯಾಗುತ್ತಿರುವುದರಿಂದ ಗದ್ದೆಗಳಲ್ಲಿನ ಬೆಳೆಗೆ ಅನುಕೂಲವಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಸತತ ಬರ ಪರಿಸ್ಥಿತಿ ಎದುರಿಸಿದ್ದ ಕಾವೇರಿ ಕಣಿವೆಯ ರೈತರ ಮೊಗದಲ್ಲಿ ಕೊಂಚ ಹರ್ಷ ಮೂಡಿದೆ. ಸರ್ಕಾರದ ಕೆರೆ ತುಂಬಿಸುವ ಯೋಜನೆಯಿಂದಾಗಿ ಬಹುತೇಕ ಕೆರೆ-ಕಟ್ಟೆಗಳು ತುಂಬಿರುವ ಜತೆಗೆ ಇದೀಗ ಜಲಾಶಯಗಳೂ ಭರ್ತಿಯಾಗುವ ಲಕ್ಷಣಗಳು ಕಾಣುತ್ತಿರುವುದರಿಂದ ಮುಂದಿನ ಜೂನ್ ತಿಂಗಳವರೆಗೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅಭಾವ ಉಂಟಾಗದು ಎನ್ನುತ್ತಾರೆ ರೈತರು.
* ಗಿರೀಶ್ ಹುಣಸೂರು