ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಸಿನಿಮಾ ನೋಡಿದ ಅನಂತರ ನಮ್ಮ ಮನೆಗೂ ಒಂದು ನಾಯಿ ತರಬೇಕೆಂಬ ಆಸೆ ಹುಟ್ಟಿತ್ತು. ಆದರೆ ಮನೆಯಲ್ಲಿ ನಾಯಿ ಸಾಕಲು ಅನುಮತಿಯಿಲ್ಲದ ಕಾರಣ ಬೌ ಬೌ ಆಸೆ ಕೈಬಿಟ್ಟೆ. ಆದರೆ ಬೆಕ್ಕಾದರೂ ಸಾಕಬೇಕೆಂಬ ಹೊಸ ಆಸೆಯೊಂದು ಮನದಲ್ಲಿ ಮನೆ ಮಾಡಿತ್ತು!
ಲಾರ ಇಂಗಲ್ಸ್ ವೈಲ್ಡರ್ ಪುಸ್ತಕ ಓದಿದ ಮೇಲಂತೂ ಬೆಕ್ಕು ಸಾಕುವ ಆಸೆ ಮತ್ತಷ್ಟು ಇಮ್ಮಡಿಯಾಗಿತ್ತು . ಆದ್ದರಿಂದ ನನ್ನ ಸೀನಿಯರ್ ಒಬ್ಬನ ವಾಟ್ಯ್ಸಾಪ್ ಡಿಪಿಯಲ್ಲಿ ಬೆಕ್ಕಿನ ಫೋಟೋ ನೋಡಿ ನಿನ್ನ ಬೆಕ್ಕು ಮರಿ ಹಾಕಿದರೆ ನನಗೆ ಕೊಡು ಎಂದು ಬಹಳ ಆಸೆಯಿಂದ ಕೇಳಿದ್ದೆ. ಬೆಕ್ಕು ಮಳೆಗಾಲದಲ್ಲಿ ಮರಿ ಹಾಕ್ತದೆ ಅವಾಗ ಕೊಡ್ತೆನೆ ಎಂದಿದ್ದನಾದರೂ, ಎರಡು ಮಳೆಗಾಲ ಕಳೆದರೂ ಅವನ ಬೆಕ್ಕು ಮರಿ ಹಾಕಲೇ ಇಲ್ಲ. ಅಂತೂ ಆ ಪ್ರಯತ್ನವೂ ವಿಫಲವಾಗಿತ್ತು!
ಒಂದು ದಿನ ಆಚಾನಕ್ಕಾಗಿ ತಿರುಕನ ಕನಸೊಂದು ನನಸಾದಂತೆ ನಮ್ಮ ಪಕ್ಕದ ಮನೆಯ ಹುಡುಗನೊಬ್ಬ ಬೀದಿಯ ಬದಿಯಲ್ಲಿನ ಪುಟ್ಟ ಮರಿ ಬೆಕ್ಕನ್ನು ನಮ್ಮ ಮನೆಗೆ ತಂದು ಬಿಟ್ಟಿದ್ದ. ಆ ದಿನ ಪೂರ್ತಿ ಬೆಕ್ಕಿನ ಮರಿಯ ಜೊತೆಯೇ ನನ್ನ ಒಡನಾಟ. ಅಮ್ಮನಂತೂ ಬೆಕ್ಕಿನ ಮರಿಯನ್ನು ಎಲ್ಲಿಂದ ತಂದೆಯೋ ಅಲ್ಲಿಗೆ ಬಿಟ್ಟು ಬಾ ಎಂದು ಗದರಿದ್ದರು. ಆದರೆ ಮನೆಗೆ ತಾನಾಗಿಯೇ ಬಂದ ಬೆಕ್ಕನ್ನು ಹಾಗೆಲ್ಲ ವಾಪಾಸು ಕಳಿಸಬಾರದು ಅದು ಶುಭದ ಸಂಕೇತವೆಂದು ಮಂಗನಾಟಾಡಿ ನಾನಂತೂ ಭೀಮ ಧೈರ್ಯದಿಂದಲೇ ಬೆಕ್ಕನ್ನು ಮನೆಯೊಳಗಿಟ್ಟು ಸಾಕಲು ಶುರು ಮಾಡಿದೆ.
ಬೆಳಗ್ಗೆ ಎದ್ದ ಕೂಡಲೇ ಬೆಕ್ಕು ಮಲಗಿದ ಜಾಗದಲ್ಲಿದೆಯೇ ಎಂದು ನೋಡುವುದು. ಕಾಲೇಜಿಗೆ ಹೋಗುವ ಮೊದಲು ಮಧ್ಯಾಹ್ನದ ಸಮೇತವಾಗಿ ಹಾಲು, ಊಟ ಹಾಕುವುದು ನನ್ನ ಖಾಯಂ ಕೆಲಸವಾಗಿತ್ತು. ಹಾಗೆಯೇ ಬೆಕ್ಕಿಗೆ ಬಹಳ ಪ್ರೀತಿಯಿಂದ ಲಾರಾ ಇಂಗಲ್ಸ್ ವೈಲ್ಡರ್ ಕತೆಯಲ್ಲಿ ಬರುವ ಬೆಕ್ಕಿನ ಸೂರ್ಸಾ ಎಂಬ ಹೆಸರನ್ನಿಟ್ಟಿದ್ದೆ.
ವಾರದ ಅನಂತರ, ಬೆಕ್ಕು ರಾತ್ರಿ ಇಡೀ ಕೂಗುತ್ತದೆ ನಿದ್ದೆಯೇ ಬರುವುದಿಲ್ಲ, ಎಕ್ಕೆಂದರಲ್ಲಿ ಗಲೀಜು ಮಾಡುತ್ತದೆ ಎಂದು ಸಾಲು ಸಾಲಾಗಿ ಅಮ್ಮನಿಂದ ದೂರುಗಳು ಬರಲು ಆರಂಭವಾದವು. ಪ್ರಾರಂಭದ ದಿನಗಳಲ್ಲಿ ಬೆಕ್ಕಿನ ಪರ ನಿಂತು ವಾದಿಸಿದೆನಾದರೂ ಬೆಕ್ಕು ಗಲೀಜು ಮಾಡಿದ ಎರಡೆರಡು ಮ್ಯಾಟ್‌ಗಳನ್ನು ತೊಳೆಯುವುದು ದಿನಚರಿಯಾದಾಗ ಬೆಕ್ಕನ್ನು ಎಲ್ಲಿಯಾದ್ರೂ ಬಿಟ್ಟು ಈ ರಗಳೆಯಿಂದ ತಪ್ಪಿಸಬೇಕೆಂದೆನಿಸಿತ್ತು.
ಆರಂಭದ ದಿನಗಳಲ್ಲಿ ಬೆಕ್ಕು ನನ್ನನ್ನು ಕಂಡು ಓಡುತ್ತಿದ್ದ ಕಾರಣ ಬೆಕ್ಕಿನ ಪ್ರೀತಿಗೆ ಪಾತ್ರನಾಗುವುದು ಹೇಗೆ, ಬೆಕ್ಕನ್ನು ಯಾವ ರೀತಿಯಲ್ಲಿ ಸ್ಪರ್ಶಿಸಿದರೆ ನಂಬಿಕೆ ಗಳಿಸಬಹುದು ಎಂಬೆಲ್ಲಾ ಬಗ್ಗೆ ಯೂಟ್ಯೂಬ್ ಅಧ್ಯಯನವನ್ನೇ ಮಾಡಿದೆ. ಕೊನೆಗೂ ಗೆಲುವನ್ನು ನನ್ನದಾಗಿಸಿಕೊಂಡೆ. ಸೂರ್ಸಾನನ್ನು ಮುದ್ದಿಸುವುದು, ರವಿವಾರ ಸೂರ್ಸಾನಿಗೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ ಅದರೊಂದಿಗೆ ಕಾಲ ಕಳೆಯುವುದೇ ನನ್ನ ಆದ್ಯತೆಯ ಕೆಲಸವಾಗಿತ್ತು.
ಮೊದಮೊದಲು ಮನೆಯಲ್ಲಿ ಸೂರ್ಸಾನನ್ನು ಮುಟ್ಟಿದರೆ ಬೈಯುತ್ತಿದ್ದರಾದರೂ ವರುಷ ಸಮೀಪಿಸಿದಂತೆ ಸೂರ್ಸಾ ನಮ್ಮ ಮನೆಯವರ ಪ್ರೀತಿಗೂ ಪಾತ್ರವಾಗಿ ಮನೆಯ ಸದಸ್ಯರಲ್ಲಿ ಒಂದಾಗಿದೆ. ಆದರೆ ಸೂರ್ಸಾ, ಕರೆಯುವವರ ಬಾಯಲ್ಲಿ ಚೂರ್ಸಾ, ಸೂಸಾ ಎಂದು ಹೇಗೇಗೋ ಆದಾಗ ಅದರ ಮರುನಾಮಕರಣ ಮಾಡಲು ನಿರ್ಧರಿಸಿದೆ. ಈಗ ಸೂರ್ಸಾ ಬಿಲ್ಲಿಯಾಗಿ ಬಚಾವಾಗಿದೆ. ಮಳೆಗಾಲದಲ್ಲಿ ಮನೆಯಲ್ಲಿ ಬೆಚ್ಚಗೆ ಮಲಗಿದೆ!
-ವಿಧಿಶ್ರೀ
ವಿ.ವಿ., ಕೊಣಾಜೆ