Advertisement

ಕೋಟೆ ಪುರಾತತಕ್ವೆ , ಕಂದಕ ಕಂದಾಯ ಇಲಾಖೆಗೆ!

11:58 AM Mar 16, 2018 | Team Udayavani |

ರಾಯಚೂರು: ಅವೈಜ್ಞಾನಿಕ ನಿಯಮಗಳಿಂದ ಸಾರ್ವಜನಿಕ ಆಸ್ತಿ ಹೇಗೆ ದುರ್ಬಳಕೆ ಆಗುತ್ತದೆ ಎನ್ನಲಿಕ್ಕೆ ಇಲ್ಲಿದೆ ಉತ್ತಮ ನಿದರ್ಶನ. ಪುರಾತತ್ವ ಇಲಾಖೆ ಅಧೀನದಲ್ಲಿರಬೇಕಾದ ಕೋಟೆಯ ಕಂದಕ ಜಾಗ ಕಂದಾಯ ಇಲಾಖೆ ಸೇರಿದ್ದು, ಇದರಿಂದ ಕಂದಕ ಒತ್ತುವರಿಯಾಗುತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ.

Advertisement

ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಯಚೂರು ಕೋಟೆಗೆ ಈಗ ಒತ್ತುವರಿದಾರರ ಕಾಟ ಶುರುವಾಗಿದೆ. ಆದರೆ, ಇದನ್ನು ತಡೆಯಬೇಕಾದ ಇಲಾಖೆಗೆ ಅಧಿಕಾರಗಳಿಲ್ಲದೇ ಕೈಕಟ್ಟಿ ಕೂಡುವ ಪರಿಸ್ಥಿತಿ ಇದೆ. ಇಲಾಖೆಗಳಲ್ಲಿನ ಸಮನ್ವಯ
ಕೊರತೆಯಿಂದ ಕಂದಕ ಸ್ಥಳ ಪರರ ಸ್ವತ್ತಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ ಪರವಾನಗಿ ಪಡೆದು ಪುರಾತತ್ವ ಇಲಾಖೆ ಗಮನಕ್ಕಿಲ್ಲದಂತೆ ಕಂದಕದ ಆಸುಪಾಸು ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಕ್ಕೆ ಆಕ್ರಮಿಸಿಕೊಳ್ಳಲಾಗುತ್ತಿದೆ.

ಏನಿದು ಸಮಸ್ಯೆ?: ರಾಯಚೂರು ಕೋಟೆ ನಿರ್ಮಾಣವಾಗಿದ್ದು 13ನೇ ಶತಮಾನದಲ್ಲಿ. ಕಾಕತೀಯ ವಂಶದ ಮಹಾರಾಣಿ ರುದ್ರಮ್ಮದೇವಿ ಅವಧಿಯಲ್ಲಿ ಈ ಕೋಟೆ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ನಂತರ ಈ ಪ್ರದೇಶ ಹೈದರಾಬಾದ್‌ ನಿಜಾಮರ ಆಳ್ವಿಕೆಗೆ ಒಳಪಟ್ಟಿತು.

19ನೇ ಶತಮಾನದ ಆರಂಭದಲ್ಲಿ ಇಲ್ಲಿನ ಕೆಲ ಸ್ಮಾರಕಗಳನ್ನು ಸಾರ್ವಜನಿಕ ಆಸ್ತಿ ಎಂದು ಘೋಷಿಸಲಾಯಿತು. ಆಗ ಅದರಲ್ಲಿ ಸ್ಮಾರಕವನ್ನು ಮಾತ್ರ ಉಲ್ಲೇಖೀಸಿ ಅಕ್ಕಪಕ್ಕದ ಸ್ಥಳಗಳನ್ನು ಸೇರಿಸಲಿಲ್ಲ. ಅಲ್ಲದೇ, ಆಗ ಚಾಲ್ತಿಯಲ್ಲಿದ್ದ ಉರ್ದು ಭಾಷೆಯಲ್ಲೇ
ಎಲ್ಲ ದಾಖಲೆಗಳನ್ನು ರಚಿಸಲಾಯಿತು. ಆಗ ಕೋಟೆ ಅಕ್ಕಪಕ್ಕದ ಸ್ಥಳವೆಲ್ಲ ಕಂದಾಯ ಇಲಾಖೆಗೆ ಒಳಪಟ್ಟರೆ ಕೆಲವರು ತಮ್ಮ ಸ್ವಂತಕ್ಕೆ ಮಾಡಿಕೊಂಡರು. ಆದರೆ, ಕಾಲಾನುಕ್ರಮೇಣ ಈ ಕೋಟೆ ಕಂದಕಗಳು ಒತ್ತುವರಿಯಾಗುತ್ತಲೇ ಇದೆ.

25ಕ್ಕೂ ಅಧಿಕ ಪ್ರಕರಣಗಳು: ಕೋಟೆ ಮತ್ತು ಕಂದಕ ಒತ್ತುವರಿಗೆ ಸಂಬಂಧಿಸಿ ಸಾಕಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 25ಕ್ಕೂ ಅಧಿಕ ಪ್ರಕರಣಗಳು ನ್ಯಾಯಾಲಯ ಹಂತದಲ್ಲಿವೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯ
ತಡೆಯಾಜ್ಞೆ ನೀಡಿದೆ. ಹೀಗಾಗಿ ವಿಚಾರಣೆಗೆ ಬಾರದೆ ದಿನಾಂಕ ಮೂಂದೂಡುತ್ತಲೇ ಬರಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಸ್ಥಳ ನಮ್ಮ ಹೆಸರಲ್ಲಿಯೇ ಇದೆ ಎಂದು ಸಾಕಷ್ಟು ಜನ ನ್ಯಾಯಾಲಯ ಮೊರೆ ಹೋಗಿದ್ದಾರೆ.

Advertisement

ಐತಿಹಾಸಿಕ ಸ್ಮಾರಕಗಳ ಸುತ್ತಲಿನ ಜಾಗೆ, ಕೋಟೆ ಒತ್ತುವರಿ ತಡೆಗೆ ಯಾವುದೇ ಸ್ಮಾರಕದಿಂದ 100 ಮೀ. ಅಂತರದಲ್ಲಿ ಕಟ್ಟಡ ಕಟ್ಟಬಾರದು ಎಂದಿದ್ದರೂ ಕಂದಾಯ ಇಲಾಖೆಯಲ್ಲಿ ಆಸ್ತಿ ಖಾಸಗಿಯವರ ಹೆಸರಲ್ಲಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ.
ಹೀಗಾಗಿ ನಗರಸಭೆಯಿಂದ ಸುಲಭಕ್ಕೆ ಪರವಾನಗಿಸಿಗುತ್ತಿದೆ. ಕೋಟೆ ಸುತ್ತಲಿನ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡದಂತೆ ಪ್ರಾಚ್ಯವಸ್ತು ಇಲಾಖೆ ಸಾಕಷ್ಟು ಬಾರಿ ಮನವಿ ಮಾಡಿದೆ.

ಪ್ರಾಚ್ಯವಸ್ತು ಇಲಾಖೆಯಿಂದ ನಿರಪೇಕ್ಷಣಾ ಪತ್ರ (ಎನ್‌ಒಸಿ) ಪಡೆದವರು ಮಾತ್ರ ಕಟ್ಟಡ ನಿರ್ಮಿಸಬೇಕು. ನೀವು ಪರವಾನಗಿ ನೀಡುವ ಮುನ್ನ ಪುರಾತತ್ವ ಇಲಾಖೆಯಿಂದ ಎನ್‌ಒಸಿ ಪಡೆಯಲು ಸೂಚಿಸುವಂತೆ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಂದಕ ಪರರ ಆಸ್ತಿ ಎನ್ನುವಂತಾಗಿದೆ ಪುರಾತತ್ವ ಇಲಾಖೆ ಸ್ಥಿತಿ. ಇನ್ನಾದರೂ ಜಿಲ್ಲಾ ಧಿಕಾರಿಗಳು ಈ ವಿಚಾರದಲ್ಲಿ ಕಠಿಣ ನಿಲವು ತಾಳಬೇಕು. ಇಲ್ಲವಾದಲ್ಲಿ ಕಂದಕ ಎಂಬುದು ಕೆಲವೇ ವರ್ಷಗಳಲ್ಲಿ ಕಾಣೆಯಾಗುವುದರಲ್ಲಿ
ಸಂದೇಹಗಳಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಕೋಟೆ ಕಂದಕದ ಸ್ಥಳ ಒತ್ತುವರಿ ಮಾಡಲು ಬಿಡುವುದಿಲ್ಲ. ಈ ಹಿಂದೆ ನಗರಸಭೆ ಪರವಾನಗಿ ನೀಡಿರುವ ಬಗ್ಗೆ ಗಮನಕ್ಕಿಲ್ಲ. ಆದರೆ, ಹೊಸದಾಗಿ ಮಾತ್ರ ಯಾವುದೇ ಪರವಾನಗಿ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಕಂದಕ ಒತ್ತುವರಿಗೆ ಆಸ್ಪದ ನೀಡುವುದಿಲ್ಲ. ಹಿಂದೆ ನೀಡಿರುವ ಪರವಾನಗಿಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕ್ಕೆ ಸೂಚನೆ ನೀಡಲಾಗುವುದು.
 ಡಾ.ಬಗಾದಿ ಗೌತಮ್‌, ಜಿಲ್ಲಾಧಿಕಾರಿ ರಾಯಚೂರು

ಪುರಾತತ್ವ ಇಲಾಖೆ ಬರೆದ ಪತ್ರದ ಬಗ್ಗೆ ಗಮನಕ್ಕಿಲ್ಲ. ನಾನು ಈಚೆಗೆ ಅಧಿಕಾರ ಸ್ವೀಕರಿಸಿದ್ದು, ಹೊಸದಾಗಿ ಯಾರಿಗೂ ಪರವಾನಗಿ ನೀಡಿಲ್ಲ. ಈಚೆಗೆ ಒಬ್ಬರು ಕಟ್ಟಡ ನಿರ್ಮಿಸುತ್ತಿರುವುದು ಗಮನಕ್ಕೆ ಬಂದಾಗ ತೆರವುಗೊಳಿಸಲಾಯಿತು. ಈ ಕೂಡಲೇ
ಪುರಾತತ್ವ ಇಲಾಖೆಗೆ ಪ್ರತಿಕ್ರಿಯಿಸುತ್ತೇನೆ. 
 ರಮೇಶ ನಾಯಕ, ನಗರಸಭೆ ಪೌರಾಯುಕ

ಸಿದ್ದಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next