ರಾಯಚೂರು: ಚುನಾವಣೆ ಸಮೀಪಿಸುತ್ತಿದ್ದು, ಸರ್ಕಾರದ ಅವಧಿ ಮುಗಿಯುವ ಮುನ್ನೆಲೆಯಲ್ಲಿ ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಎಲ್ಲಿಲ್ಲದ ವೇಗ ಸಿಕ್ಕಿದ್ದು, ಅರೆಬರೆ ಸ್ಥಿತಿಯಲ್ಲೇ ಉದ್ಘಾಟನೆಗೆ ಜಿಲ್ಲಾಡಳಿತ ಮುಂದಾಗಿದೆ.
ಒಂದು ವಾರದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಮುಗಿಯದ ಕಾಮಗಾರಿಗಳನ್ನೂ ಉದ್ಘಾಟಿಸುತ್ತಿದ್ದಾರೆ. ಫೆ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಯಚೂರಿಗೆ ಆಗಮಿಸುತ್ತಿದ್ದು, ಬಾಕಿ ಉಳಿದ ಕಾಮಗಾರಿಗಳಿಗೆ ತರಾತುರಿಯಲ್ಲಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
ಮುಗಿಯದಿದ್ದರೂ ಉದ್ಘಾಟನೆ..?: ಹಲವು ವರ್ಷಗಳಿಂದ ನಡೆದ ಬಹುಕೋಟಿ ವೆಚ್ಚದ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಅಂತಿಮ ಸ್ಪರ್ಶ ನೀಡಿಲ್ಲ. ನೆಲಹಾಸು ಕೆಲಸ ಶುರುವಾಗಿಲ್ಲ. ಆದರೆ ಸರ್ಕಾರದ ಅವಧಿ ಮುಗಿಯುತ್ತಿದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಕೆಲಸ ಮುಗಿಸಿ ಉದ್ಘಾಟನೆಗೆ ಸಿದ್ಧಗೊಳಿಸುತ್ತಿದ್ದಾರೆ. ಇದರ ಜತೆಗೆ ಜಿಮ್ ಕೂಡ ಲೋಕಾರ್ಪಣೆಗೊಳ್ಳಲಿದೆ. ಇನ್ನು ಗುರ್ಜಾಪುರ ಬ್ಯಾರೇಜ್ ಕೂಡ ನಿರ್ಮಾಣ ಹಂತದಲ್ಲಿದ್ದು, ಅದನ್ನೂ ಲೋಕಾರ್ಪಣೆಗೊಳಿಸುವ ಸಾಧ್ಯತೆಗಳಿವೆ.
ಇಂದಿರಾ ಕ್ಯಾಂಟೀನ್, ವಾಣಿಜ್ಯಿಕ ಉತ್ಪಾದನೆಗೆ ಮುಕ್ತಗೊಂಡ ವೈಟಿಪಿಎಸ್‌ನ್ನು ಅಧಿಕೃತವಾಗಿ ಉದ್ಘಾಟಿಸಲಾಗುವುದು. ಇದಲ್ಲದೇ ಜಿಲ್ಲಾಡಳಿತ ಭವನಕ್ಕೆ ಅಡಿಗಲ್ಲು ನೆರವೇರಿಸುವ ಕಾರ್ಯಕ್ರಮವಿದೆ.
ಈ ನಿಟ್ಟಿನಲ್ಲಿ ಸಂಸದ ಬಿ.ವಿ.ನಾಯಕ್, ವಿಧಾನ್ ಪರಿಷತ್ ಸದಸ್ಯರಾದ ಎನ್.ಎಸ್.ಬೋಸರಾಜ, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಶನಿವಾರ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದರು. ಬಾಕಿ ಉಳಿದ ಕಾಮಗಾರಿಗಳಿಗೆ ತ್ವರಿತಗತಿಯಲ್ಲಿ ಅಂತಿಮರೂಪ ನೀಡುವಂತೆ ಕಾಮಗಾರಿ ನಿರ್ವಹಿಸುತ್ತಿರುವ ಕ್ಯಾಶುಟೆಕ್ ಅಧಿಕಾರಿಗಳಿಗೆ ಸೂಚಿಸಿದರು.
ಕ್ರೀಡಾಂಗಣದಲ್ಲಿ ಸಂಗ್ರಹಗೊಂಡ ತ್ಯಾಜ್ಯ ವಿಲೇವಾರಿ ಮಾಡುವುದು ಮರಂ ಹಾಕಿಸಿ ನೆಲ ಸಮತಟ್ಟು ಮಾಡುವುದು ಸೇರಿ ವಿವಿಧ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು ತರಾತುರಿಯಲ್ಲಿ ಚಾಲನೆ-ಉದ್ಘಾಟನೆ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯ ತರಾತುರಿಯಲ್ಲಿ ಉದ್ಘಾಟಿಸುತ್ತಿದ್ದಾರೆ. ವಾರದ ಹಿಂದೆಯಷ್ಟೇ ಮಸ್ಕಿ, ಸಿಂಧನೂರು ಕ್ಷೇತ್ರಕ್ಕೆ
ಆಗಮಿಸಿದ್ದ ಅವರು 1058 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.
ಈಗ ನಗರ ಮತ್ತು ಗ್ರಾಮೀಣ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಒಟ್ಟಾರೆ ಚುನಾವಣೆ ಎಫೆಕ್ಟ್ ಶುರುವಾಗಿದ್ದು, ಇನ್ನೂ ಯಾವೆಲ್ಲ ಕಾಮಗಾರಿಗಳಿಗೆ ಮುಕ್ತಿ ಸಿಗುವುದೋ ನೋಡಬೇಕು.