Advertisement

ಶೌಚಗೃಹ ಬಳಕೆ ಕಡ್ಡಾಯವಾಗಲಿ

10:53 AM Oct 26, 2018 | Team Udayavani |

ರಾಯಚೂರು: ಪರಿಸರದಲ್ಲಿ ಸ್ವತ್ಛತೆ ಕಾಪಾಡಬೇಕಾದರೆ ಪ್ರತಿಯೊಂದು ಕುಟುಂಬವು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಂಡು ಕಡ್ಡಾಯವಾಗಿ ಬಳಸುವಂತಾಗಬೇಕು ಎಂದು ನಗರಸಭೆ ಸದಸ್ಯೆ ಹೇಮಲತಾ ಪಿ.ಬೂದೆಪ್ಪ ಹೇಳಿದರು.

Advertisement

ಭಾರತ ಸರ್ಕಾರದ ಕ್ಷೇತ್ರ ಜನಸಂಪರ್ಕ ಕಚೇರಿ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಹರಿಜನವಾಡದ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಸ್ವತ್ಛ ಭಾರತ್‌ ಮಿಷನ್‌ (ನಗರ) ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಹಿರ್ದೆಸೆ ಪದ್ಧತಿಯನ್ನು ಸಂಪೂರ್ಣ ನಿಲ್ಲಿಸಬೇಕು. ಕಂಡಕಂಡಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ನಿಲ್ಲಿಸಬೇಕು. ಕೊಳಚೆ ಪ್ರದೇಶಗಳಲ್ಲಿ ಸಾಮೂಹಿಕ ಶೌಚಗೃಹಗಳನ್ನು ನಿರ್ಮಿಸಿದ್ದು, ಅವುಗಳನ್ನು ಬಳಸುವ ಮೂಲಕ ಸ್ವತ್ಛತೆಗೆ ಆದ್ಯತೆ ನೀಡಬೇಕು. ಆ ಮೂಲಕ ನಗರವನ್ನು ಮಾದರಿಯನ್ನಾಗಿಸಬೇಕು ಎಂದರು.
 
ನಗರಸಭೆ ಪೌರಾಯುಕ್ತ ರಮೇಶ ನಾಯಕ ಮಾತನಾಡಿ, ನಗರದ ಸ್ವತ್ಛತೆಗೆ ಜನರ ಸಹಭಾಗಿತ್ವ ಬಹಳ ಮುಖ್ಯ. ಕಸ ಮತ್ತು ತ್ಯಾಜ್ಯ ವಿಲೇವಾರಿ ಮಾಡುವಾಗಲೇ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಬೇಕು. ಇದರಿಂದ ಗೊಬ್ಬರ ತಯಾರಿಕೆಗೆ ಅನುಕೂಲವಾಗಲಿದೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಎಂ.ಎಸ್‌.ನಟೇಶ ಮಾತನಾಡಿ, ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್‌ ಬಳಕೆ ನಿಯಂತ್ರಣ ಕುರಿತು 2016ರಲ್ಲಿ ಎರಡು ನಿಯಮ ಜಾರಿಗೆ ತರಲಾಗಿದೆ. ಇದು ಕಟ್ಟುನಿಟ್ಟಾಗಿ ಜಾರಿಗೆ ಬರಲು ಜನರಿಗೆ ತಿಳಿವಳಿಕೆ ಮುಖ್ಯ. ನಗರದಲ್ಲಿ ಪ್ರತಿದಿನ 80 ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಅದರಲ್ಲಿ ಕೇವಲ 40-45 ಟನ್‌ ಕಸವನ್ನು ಮಾತ್ರ ಸಂಸ್ಕರಿಸಲು ಸಾಧ್ಯವಾಗುತ್ತಿದ್ದು, ಉಳಿದ ತ್ಯಾಜ್ಯ ಹಾಗೆಯೇ ಶೇಖರಣೆಯಾಗುತ್ತಿದೆ. ಇದರಿಂದ ಪರಿಸರಕ್ಕೆ ಗಂಡಾಂತರ ತಪ್ಪದು. ತ್ಯಾಜ್ಯ ಮರುಬಳಕೆಗೆ ಆದ್ಯತೆ ನೀಡಬೇಕಿದೆ ಎಂದರು.

ಕ್ಷೇತ್ರ ಪ್ರಚಾರ ಅಧಿಕಾರಿ ಜಿ. ತುಕಾರಾಮ ಗೌಡ ಪ್ರಾಸ್ತಾವಿಕ ಮಾತನಾಡಿದರು. ಸಿಡಿಪಿಒ ವೀರನಗೌಡ, ನಗರಸಭೆ ಸದಸ್ಯೆ ನರಸಮ್ಮ ನರಸಿಂಹಲು ಮಾಡಗಿರಿ, ನಗರಸಭೆ ಪರಿಸರ ಇಂಜಿನಿಯರ್‌ ಜೈಪಾಲ್‌ ರೆಡ್ಡಿ, ನೆಹರು ಯುವ ಕೇಂದ್ರದ ಡಿ.ದಯಾನಂದ, ಮುಖ್ಯಶಿಕ್ಷಕ ಸಿದ್ರಾಮರೆಡ್ಡಿ, ಐಸಿಡಿಎಸ್‌
ಮೇಲ್ವಿಚಾರಕಿ ಮೂಕಾಂಬಿಕಾ, ಸಿ.ಕೆ.ಸುರೇಶ, ಮುರಳಿಧರ ಕಾರಭಾರಿ, ಸೇವಾದಳ ಜಿಲ್ಲಾ ಸಂಘಟಕ ವಿದ್ಯಾಸಾಗರ ಚಿಣಮಗೇರಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎಚ್‌.ಪದ್ಮಾ ಇತರರಿದ್ದರು. ನಂತರ ವಿದ್ಯಾರ್ಥಿಗಳಿಂದ ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳೊಂದಿಗೆ ಜಾಗೃತಿ ಜಾಥಾ ನಡೆಸಲಾಯಿತು.

ಮಾಸಾಂತ್ಯಕ್ಕೆ ಜಿಲ್ಲೆ ಬಯಲು ಶೌಚ ಮುಕ್ತವಾಗಲಿ
ರಾಯಚೂರು: ಜಿಲ್ಲೆಯಲ್ಲಿ 2,54,759 ಮನೆಗಳಿದ್ದು, ಈವರೆಗೆ 2,48,301 ಮನೆಗಳಿಗೆ ಶೌಚಗೃಹ ನಿರ್ಮಿಸಲಾಗಿದೆ. ಇನ್ನೂ 6,458 ಮನೆಗಳಿಗೆ ಮಾತ್ರ ಶೌಚಗೃಹ ನಿರ್ಮಿಸಬೇಕಿದ್ದು, ಮಾಸಾಂತ್ಯಕ್ಕೆ ಅಷ್ಟು ನಿರ್ಮಿಸಿ ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸ್ವತ್ಛ ಭಾರತ ಮಿಷನ್‌ ನೋಡಲ್‌ ಅಧಿಕಾರಿ ಮಹ್ಮದ್‌ ಯುಸೂಫ್‌ ತಿಳಿಸಿದರು. ಜಿಪಂ ಕಚೇರಿಯ ಜಲ ನಿರ್ಮಲ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬಾಕಿ ಉಳಿದ ಶೌಚಗೃಹಗಳ ಕಾಮಗಾರಿಯನ್ನು ಅಕ್ಟೋಬರ್‌ ಅಂತ್ಯದೊಳಗೆ ಮುಗಿಸಲಾಗುವುದು. ನವೆಂಬರ್‌ 1ರಿಂದ ಜಿಲ್ಲೆ ಬಯಲು ಶೌಚಮುಕ್ತವಾಗಲಿದೆ ಎಂದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next