ರಾಯಚೂರು: ನಗರಸಭೆ ಅಧಿಕಾರಿಗಳು ಹಾಗೂ ಯೋಜನಾಧಿಕಾರಿ ನಗರದ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ನಿಷ್ಕಾಳಜಿ ಹೊಂದಿದ್ದು, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಶಾಸಕ ಡಾ| ಶಿವರಾಜ ಪಾಟೀಲ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರಸಭೆ ಪೌರಾಯುಕ್ತ ರಮೇಶ ನಾಯಕ, ಆರೋಗ್ಯ ಅಧಿಕಾರಿ ಜೈಪಾಲ ರೆಡ್ಡಿ, ಕಂದಾಯ ಅಧಿಕಾರಿ ಮುನಿಸ್ವಾಮಿ ಮತ್ತು ಜಿಲ್ಲಾ ಅಭಿವೃದ್ಧಿ ಕೋಶ ವಿಭಾಗದ ಯೋಜನಾಧಿಕಾರಿ ಈರಣ್ಣ ಬಿರಾದಾರ ತಮ್ಮ ಜವಾಬ್ದಾರಿಗಳನ್ನು ಮರೆತು ನಡೆದುಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಎಂಬುದು ಮರೀಚಿಕೆ ಆಗುತ್ತಿದ್ದರೂ ಇವರು ಮಾತ್ರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇಂಥ ಅಧಿಕಾರಿಗಳಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು, ಇಲ್ಲವೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಸಮರ್ಪಕವಾಗಿ ರಸ್ತೆ ವಿಸ್ತರಣೆ ಮಾಡಿಲ್ಲ. ರಸ್ತೆ ನಿರ್ಮಾಣ, ಮಾವಿನ ಕೆರೆ ಅಭಿವೃದ್ಧಿಗೆ ಹಣ ಬಂದರೂ ಅಭಿವೃದ್ಧಿ ಮಾಡುತ್ತಿಲ್ಲ. ಪ್ರಮುಖ ಹುದ್ದೆಗಳಲ್ಲಿರುವ ಈ ಅಧಿಕಾರಿಗಳು ತಮ್ಮ ಹುದ್ದೆಗನುಸಾರ ಕೆಲಸ ಮಾಡುತ್ತಿಲ್ಲ. ಶಾಸಕರು ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡದೆ ನಗರ ಜನರಿಗೆ ವಂಚಿಸುತ್ತಿದ್ದಾರೆ. ಆದ್ದರಿಂದ ಶಾಸಕರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಎನ್.ಮಹಾವೀರ, ಕಾರ್ಯದರ್ಶಿ ಪ್ರಭು ನಾಯಕ, ವಿವಿಧ ಸಂಘಟನೆಗಳ ಮುಖಂಡರಾದ ಅಶೋಕ ಶೆಟ್ಟಿ, ಹುಸೇನ್ ಬಾಷಾ ಪಲಕನಮರಡಿ, ಖಾನ್, ಮಾರೆಪ್ಪ, ಆಂಜಿನೇಯ ಸೇರಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.