ರಾಯಚೂರು: ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಯಷ್ಟು ಗಿಡಗಳನ್ನು ನೆಡುವಲ್ಲಿ ನಿರ್ಲಕ್ಷ್ಯ ವಹಿಸಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ ತರಾಟೆಗೆ ತೆಗೆದುಕೊಂಡರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ನಿಮಗೆ ಎಷ್ಟು ಗುರಿ ನೀಡಲಾಗಿತ್ತು, ಎಷ್ಟು ನೆಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಆಗ ಇಲಾಖೆ ಅಧಿಕಾರಿ 4.5 ಲಕ್ಷ ಗುರಿಯಿದ್ದು, 16 ಸಾವಿರ ಸಸಿಗಳನ್ನು ನೆಟ್ಟಿರುವುದಾಗಿ ತಿಳಿಸಿದ್ದರಿಂದ ಬೇಸರ ವ್ಯಕ್ತಪಡಿಸಿದ ಅವರು, ನಿಮ್ಮ ಗುರಿ ಇರುವುದೆಷ್ಟು ಎಷ್ಟು ನೆಟ್ಟಿದ್ದೀರಾ. ಏನು ನಿದ್ರೆ ಮಾಡುತ್ತಿದ್ದಿರಾ ಎಂದು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಜೊತೆಗೆ ಯೋಜನೆ ರೂಪಿಸಿ ಗಿಡ ನೆಡಲು ಸೂಚಿಸಿದರು. ಸ್ವತ್ಛ ಭಾರತ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಶೌಚಗೃಹಗಳ ಗುಣಮಟ್ಟದ ಸರ್ವೆ ಮಾಡಬೇಕು. ಶೌಚಗೃಹ ಬಳಸುವ ಕುರಿತು ಜಾಗೃತಿ ಮೂಡಿಸಲು ಮಹಿಳಾ ಸಂಘ ಹಾಗೂ ಸ್ತ್ರೀ ಶಕ್ತಿ ಕೇಂದ್ರಗಳ ಹೆಣ್ಣುಮಕ್ಕಳನ್ನು ಬಳಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ ಅವರಿಗೆ ಸೂಚಿಸಿದರು.
ಡಿಡಿಪಿಐ ಬಿ.ಕೆ.ನಂದನೂರು ಮಾತನಾಡಿ, ಜಿಲ್ಲೆಯಲ್ಲಿ ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ಶಿಕ್ಷಕರ ಕೊರತೆ ಇದೆ ಎಂದು ವಿವರಿಸಿದರು. ಭೋದಕರ ಕೊರತೆಯಿದ್ದರೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂದು ಸೂಚಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವತ್ಛತೆ ಇಲ್ಲದಿರುವ ಕುರಿತು ದೂರುಗಳಿದ್ದು, ಯುವ ವೈದ್ಯರಿಂದ ಉತ್ತಮ ಕೆಲಸ ಪಡೆಯುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಹೊಸ ಯೋಜನೆಯಡಿ ಟೂರಿಸ್ಟ್ ಟ್ಯಾಕ್ಸಿ ಖರೀದಿಸಲು ಮೂರು ಲಕ್ಷದವರೆಗೆ ಸಬ್ಸಿಡಿ ಸಿಗುತ್ತಿದೆ. ಉಳಿದ ಹಣವನ್ನು ಫಲಾನುಭವಿಗಳು ಬ್ಯಾಂಕ್ನಿಂದ ಸಾಲ ಪಡೆಯಬೇಕಿದೆ. ಡೈರಿ. ಪೌಲಿ ಫಾರ್ಮ್ಗೂ ಸಬ್ಸಿಡಿ ಸಿಗುತ್ತಿದೆ ಎಂದು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ತಿಳಿಸಿದರು.
ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಎಡಿಸಿ ಗೋವಿಂದರೆಡ್ಡಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಎಂ.ಕೆ.ಎಸ್.ನಸೀರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ವೈ.ಎ. ಕಾಳೆ ಇತರರು ಉಪಸ್ಥಿತರಿದ್ದರು.