Advertisement

ರೆಸಾರ್ಟ್‌ ಘಟನೆಗೆ ಈಗ ಜಾತಿ ಬಣ್ಣ !

12:34 AM Jan 25, 2019 | |

ಬಳ್ಳಾರಿ/ ಬೆಂಗಳೂರು: ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಡೆದ ಶಾಸಕರ ಗಲಾಟೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಿಂದಾಗಿ ನಾಪತ್ತೆಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌, ಗುರುವಾರ ‘ಕಂಪ್ಲಿ ಕಾಂಗ್ರೆಸ್‌’ ಫೇಸ್‌ಬುಕ್‌ ಪೇಜ್‌ನಲ್ಲಿ ರೆಸಾರ್ಟ್‌ನಲ್ಲಿ ನಡೆದಿರುವ ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಇದು ಜಾತಿಯ ಬಣ್ಣ ಪಡೆದುಕೊಳ್ಳಬಹುದಾಗಿದೆ.

Advertisement

ವಿಜಯನಗರ ಶಾಸಕ ಆನಂದ್‌ಸಿಂಗ್‌ ಮೇಲೆ ಶಾಸಕ ಗಣೇಶ್‌ ನಡೆಸಿರುವ ಹಲ್ಲೆ ಖಂಡಿಸಿ, ಜ.24ರಂದು ಹೊಸಪೇಟೆ ಬಂದ್‌ಗೆ ಆನಂದ್‌ಸಿಂಗ್‌ ಅಭಿಮಾನಿಗಳ ಬಳಗ ಕರೆ ನೀಡಿತ್ತು. ಆದರೆ ಕ್ಷೇತ್ರದಲ್ಲಿ ಪ್ರಬಲವಾದ ವಾಲ್ಮೀಕಿ ಸಮುದಾಯ ಶಾಸಕ ಗಣೇಶ್‌ ಬೆನ್ನಿಗೆ ನಿಂತು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಹೊಸಪೇಟೆ ಬಂದ್‌ ಕರೆಗೆ ವಿರೋಧ ವ್ಯಕ್ತಪಡಿಸಿತ್ತು. ಇದರಿಂದ ಕ್ಷೇತ್ರದಲ್ಲಿ ಮುಂದಿನ ರಾಜಕೀಯ ಭವಿಷ್ಯಕ್ಕೆ ಪೆಟ್ಟಾಗುವ ಸಾಧ್ಯತೆಯಿದೆ ಎಂಬುದನ್ನು ಸೂಕ್ಷ್ಮ್ಮವಾಗಿ ಅರಿತ ಶಾಸಕ ಆನಂದ್‌ಸಿಂಗ್‌, ಆಸ್ಪತ್ರೆಯಿಂದಲೇ ಹೊಸಪೇಟೆ ಬಂದ್‌ ಕೈಬಿಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಬಂದ್‌ ಕರೆ ಹಿಂಪಡೆದರು.

ಇನ್ನು ಕಂಪ್ಲಿ ಕ್ಷೇತ್ರ ಮತ್ತು ವಿಜಯನಗರ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ ಗಣೇಶ್‌ ಬೆನ್ನಿಗೆ ನಿಂತಿದೆ. ಕ್ಷೇತ್ರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಪಕ್ಷದಿಂದ ಅಮಾನತು ಆದೇಶ ವಾಪಸ್‌ ಪಡೆಯುವಂತೆ ಒತ್ತಾಯಿಸಿದ್ದ ಗಣೇಶ್‌ ಬೆಂಬಲಿಗರು, ಗುರುವಾರ ಹಲವಾರು ವಾಹನಗಳಲ್ಲಿ ರಾಜಧಾನಿಗೆ ತೆರಳಿ ಕಾಂಗ್ರೆಸ್‌ ನಾಯಕರಿಗೂ ಅಮಾನತು ರದ್ದುಗೊಳಿಸುವಂತೆ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.

ಕಂಪ್ಲಿ ಶಾಸಕರು ಬರೆದಿರುವುದೇನು?

ಫೇಸ್‌ಬುಕ್‌ನ ‘ಕಂಪ್ಲಿ ಕಾಂಗ್ರೆಸ್‌’ ಪೇಜ್‌ನಲ್ಲಿ ಘಟನೆಯ ಬಗ್ಗೆ ಶಾಸಕರು ವಿವರಿಸಿರುವುದು ಹೀಗೆ: ‘ರೆಸಾರ್ಟ್‌ನಲ್ಲಿ ನಾನು ಆನಂದ್‌ಸಿಂಗ್‌ ಪಾರ್ಟಿ ಮಾಡಿದ್ದು ನಿಜ. ಆದರೆ ಪಾರ್ಟಿ ನಂತರ ಆನಂದ್‌ಸಿಂಗ್‌ ಅವರೇ ನನ್ನನ್ನು ರೂಮ್‌ಗೆ ಕರೆದೊಯ್ದು ರಾತ್ರಿ 11 ಗಂಟೆಯಿಂದ 2.30ಗಂಟೆವರೆಗೂ ಕೂಡಿಸಿಕೊಂಡು ಮಾತನಾಡಿದರು. ಸಾಮಾನ್ಯ ವ್ಯಕ್ತಿಯಾಗಿದ್ದ ನೀನು ಎಂಎಲ್‌ಎ ಆಗಿದ್ದನ್ನು ನಾನು ಸಹಿಸುವುದಿಲ್ಲ. ನನ್ನ ಎದುರು ಕುಳಿತುಕೊಳ್ಳುವ ಶಕ್ತಿ ನಿನಗೆ ಬಂತ, ಕೆಳಗೆ ಕುಳಿತುಕೊಳ್ಳು ಎಂದು ನಿಂದಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀನು ಪಕ್ಷೇತರ ಅಭ್ಯರ್ಥಿಯಾಗಿಸ್ಪರ್ಧಿಸಲು, ಸೋಲಲು ನಾನೇ ಕಾರಣ. ನಿನ್ನನ್ನು ಆರ್ಥಿಕವಾಗಿ ಕುಗ್ಗಿಸಿ ಭಿಕ್ಷೆ ಬೇಡುವಂತೆ ಮಾಡಿದೆ. ತುಕಾರಾಂನನ್ನು ಮಿನಿಸ್ಟರ್‌ ಮಾಡಲು ದೆಹಲಿಗೆ ಹೋಗುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು.

Advertisement

ಮಾಜಿ ಶಾಸಕ ಎಂ.ಪಿ.ರವೀಂದ್ರರ ಜಾಗ ಖರೀದಿಸಿ, ಹಗರಿಬೊಮ್ಮನಹಳ್ಳಿಯಲ್ಲಿ ಕಚೇರಿ ತೆರೆದು ಭೀಮಾನಾಯ್ಕ ಸೋಲಿಸಲು ಪಣತೊಟ್ಟಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಈಗ ಕಂಪ್ಲಿಯಲ್ಲಿ ಆಫೀಸ್‌ ತೆಗೆದು ನಿನ್ನನ್ನು ಮುಗಿಸುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ನನ್ನ ವಿರುದ್ಧ ಇದ್ದರೂ ನನ್ನ ಒಂದು ಕೂದಲು ಸಹ ಕೀಳಲು ಅವರಿಂದ ಸಾಧ್ಯವಾಗಿಲ್ಲ. ಆದರೂ, ನಾನು ಗೆದ್ದು ಬಂದೆ. ಕೀಳು ಜಾತಿಯವನು ಎಂದೆಲ್ಲ ಜಾತಿ ನಿಂದನೆ ಮಾಡಿದ್ದಾರೆ.

ಕೂತು ಮಾತನಾಡುತ್ತಿದ್ದಾಗ ಮೊದಲು ಹೊಡೆದದ್ದೇ ಆನಂದ್‌ಸಿಂಗ್‌. ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದರು. ಜಾತಿ ನಿಂದನೆ ಮಾಡಿದರು. ನನ್ನ ಶರ್ಟ್‌ ಹರಿದು, ನನ್ನ ಬಲಗೈ ಹೆಬ್ಬೆರಳನ್ನು ತಿರುಚಿ ಫ್ಯಾಕ್ಚರ್‌ ಮಾಡಿ, ಬೆಡ್‌ಲೈಟ್ನಿಂದ ಬೆನ್ನಿಗೆ ಹೊಡೆದು ಹಲ್ಲೆ ಮಾಡಿದರು. ಅವರೇ ಮೊದಲು ನನ್ನ ಮೇಲೆ ಕೈ ಎತ್ತಿದ್ದಕ್ಕೆ ನಾನು ಅವರ ಮೇಲೆ ಕೈ ಮಾಡಬೇಕಾಯಿತು. ಇದಕ್ಕೆ ಶಾಸಕ ಭೀಮಾನಾಯ್ಕ, ವಿಶ್ವ, ಶರಣಪ್ಪ ಅವರೇ ಪ್ರತ್ಯಕ್ಷ ಸಾಕ್ಷಿಗಳು. ಈ ಎಲ್ಲ ವಿಷಯಗಳು ಮುಖಂಡರಿಗೆ ತಿಳಿದಿದ್ದು, ಇಬ್ಬರದ್ದೂ ತಪ್ಪಿದೆ. ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ ಎಂದಿದ್ದಾರೆ. ಹೊಡೆಯಬೇಕೆಂಬ ಉದ್ದೇಶ ಇರಲಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಎಲ್ಲ ರೀತಿಯ ಪ್ರಯತ್ನ ಆನಂದ್‌ಸಿಂಗ್‌ ಮಾಡುತ್ತಿದ್ದಾರೆ. ಆದ್ದರಿಂದ ಕ್ಷೇತ್ರದ ಜನರು ಸುಳ್ಳು ಸುದ್ದಿ ನಂಬಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next