Advertisement

ಜಾತಿ, ಧರ್ಮ ಸಂಘರ್ಷವೇ ದ್ರೋಹ

12:12 PM Mar 08, 2018 | Team Udayavani |

ಬೆಂಗಳೂರು: ಜಾತಿ, ಧರ್ಮದ ಹೆಸರಿನಲ್ಲಿ ಮಾಡುವ ಸಂಘರ್ಷ ಮನುಕುಲಕ್ಕೆ ಮಾಡುವ ದ್ರೋಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಸೆಂಟ್ರಲ್‌ ಕಾಲೇಜು ಆವರಣದ ಕ್ರಿಕೆಟ್‌ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಬುದ್ಧ, ಬಸವ ಹಾಗೂ ಗಾಂಧೀಜಿ ಕಂಡಿದ್ದ ಸಮ ಸಮಾಜದ ನಿರ್ಮಾಣದ ಹಾದಿಯಲ್ಲಿ ನಾವು ಸಾಗಬೇಕು. ಆರ್ಥಿಕ, ಸಾಮಾಜಿಕ ಹಾಗೂ ಲಿಂಗತಾರತಮ್ಯ ನಿವಾರಣೆ ಮಾಡಿದಾಗ ಮಾತ್ರ ಬದಲಾವಣೆ, ಪರಿರ್ತನೆ ಸಾಧ್ಯ ಎಂದು ಹೇಳಿದರು. ಕುಲಪತಿಗಳ ಮನವಿಯಂತೆ ಹೊಸ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಅನುದಾನ ಹಾಗೂ ಜಮೀನು ನೀಡಲಾಗುವುದು. ಆದರೆ, ಜಮೀನು, ಅನುದಾನಕ್ಕಿಂತ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಅಗತ್ಯ ಎಂದರು.

ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಜಾಗತಿಕ ಶಿಕ್ಷಣ ಒದಗಿಸಬೇಕು. ನೈತಿಕತೆ ಇಲ್ಲದಿದ್ದರೆ ಅದನ್ನು ಶಿಕ್ಷಣ ಎಂದು ಹೇಳಲು ಸಾಧ್ಯವಿಲ್ಲ. ವಿಶಾಲವಾದ ಮಾನವೀಯ ಮೌಲ್ಯವನ್ನು ರೂಪಿಸುವಂಥ ಶಿಕ್ಷಣ ವಿವಿಯಿಂದ ವಿದ್ಯಾರ್ಥಿಗಳಿಗೆ ಸಿಗಬೇಕು. ಇಲ್ಲಿ ಶಿಕ್ಷಣ ಪಡೆದವರು ಜಾತಿ, ಧರ್ಮ ಎಂಬ ಸಂಕುಚಿತ ಮನೋಭಾವ ಬಿಟ್ಟು ಮಾನವೀಯ ಮೌಲ್ಯಗಳಡಿ ಬದುಕು ರೂಪಿಸಿಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯ ಏಷ್ಯದಲ್ಲೇ ಅತಿದೊಡ್ಡ ವಿಶ್ವವಿದ್ಯಾಲಯವಾಗಿತ್ತು. 600ಕ್ಕೂ ಅಧಿಕ ಕಾಲೇಜು, 6 ಲಕ್ಷ ವಿದ್ಯಾರ್ಥಿಗಳಿದ್ದಾರೆ. ನಿರ್ವಹಣೆ, ಜಾಗತಿಕ ಗುಣಮಟ್ಟದ ಶಿಕ್ಷಣ, ಸಕಾಲದಲ್ಲಿ ಪರೀಕ್ಷೆ ನಡೆಸುವುದು ಸೇರಿದಂತೆ ಶೈಕ್ಷಣಿಕ ಸುಧಾರಣೆಗಾಗಿ ವಿವಿಯನ್ನು ತ್ರಿಭಜನೆ ಮಾಡಿದ್ದೇವೆ. ಬೆಂಗಳೂರು ಕೇಂದ್ರ ವಿವಿಯನ್ನು ಪ್ರೊ.ಜಾಫೆಟ್‌ ಅವರು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಾರೆ ಎಂಬ ಭರವಸೆ ಇದೆ.

ಬೆಂಗಳೂರು ವಿವಿ ಹಾಗೂ ಸೆಂಟ್ರಲ್‌ ಕಾಲೇಜಿಗೆ ಇರುವ ಚಾರಿತ್ರಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಮೂರೂ ವಿಶ್ವವಿದ್ಯಾಲಯಗಳ ಮೇಲಿದೆ ಎಂದರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಜಾಫೆಟ್‌, ಸಚಿವರಾದ ಕೆ.ಜೆ.ಜಾರ್ಜ್‌, ಎಚ್‌.ಎಂ.ರೇವಣ್ಣ, ಮೇಲ್ಮನೆ ಸದಸ್ಯರಾದ ರಾಮಚಂದ್ರಗೌಡ, ಉಗ್ರಪ್ಪ, ವಿವಿ ಕುಲಸಚಿವ ಪ್ರೊ.ಎಂ.ರಾಮಚಂದ್ರಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ.ಲಿಂಗರಾಜ್‌ಗಾಂಧಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಹಿರಿಯರಿಗೆ ಸನ್ಮಾನ: ಸೆಂಟ್ರಲ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ, ಉನ್ನತ ಹುದ್ದೆ ಅಲಂಕರಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿಪತಾಕೆ ಹಾರಿಸಿರುವ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ಹಿರಿಯ ವಿಜ್ಞಾನಿಗಳಾದ ಡಾ.ರೊಡ್ಡಂ ನರಸಿಂಹ, ಡಾ.ವಾಸುದೇವ ಅತ್ರಿ, ಕವಿಗಳಾದ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌, ಡಾ.ಸಿದ್ದಲಿಂಗಯ್ಯ, ಚಲನಚಿತ್ರ ನಿರ್ದೇಶಕ ಎಂ.ಎಸ್‌.ಸತ್ಯು, ಶಿಕ್ಷಣ ತಜ್ಞೆ ಡಾ.ಗೀತಾನಾ ರಾಯಣನ್‌ ಅವರನ್ನು ಈ ವೇಳೇ ಸನ್ಮಾನಿಸಲಾಯಿತು.

ವಿವಿ ಲಾಂಛನ ಬಿಡುಗಡೆ: ಸೆಂಟ್ರಲ್‌ ಕಾಲೇಜು ಆವರಣದ ಹಳೇ ಕಟ್ಟಡದಲ್ಲಿರುವ ಗಡಿಯಾರ ಗೋಪುರ ಹಾಗೂ ನವೀಕರಣಗೊಂಡ ರಾಜಾಜಿ ಹಾಲ್‌ನ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು. ಕ್ರಿಕೆಟ್‌ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅವರು ಬೆಂಸಿವಿ ವಿಷನ್‌ ಡಾಕ್ಯುಮೆಂಟ್‌ ಅನ್ನು, ಸಿಎಂ ಸಿದ್ದರಾಮಯ್ಯ ವಿವಿ ಲಾಂಛನವನ್ನು ಬಿಡುಗಡೆ ಮಾಡಿದರು.

ವಿದ್ಯಾರ್ಥಿಗಳೇ ಇರಲಿಲ್ಲ!: ಬೆಂಗಳೂರು ಕೇಂದ್ರ ವಿವಿಯ ಉದ್ಘಾಟನಾ ಸಮಾರಂಭ ಬೆ.11.30ಕ್ಕೆ ನಿಗದಿಯಾಗಿತ್ತು. ವಿವಿ ವ್ಯಾಪ್ತಿಯ 239 ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಬೆಳಗ್ಗೆ 10 ಗಂಟೆಗಾಗಲೇ ಸಭಾಂಗಣದಲ್ಲಿ ಸೇರಿದ್ದರು. ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು. ಸಿಎಂ ಭಾಷಣ ಮಾಡುವಾಗ ಇನ್ನೂ ತಡವಾಗಿತ್ತು. ಅಷ್ಟೊತ್ತಿಗೆ ಸಭಾಂಗಣದಲ್ಲಿ ವಿದ್ಯಾರ್ಥಿಗಳೇ ಇರಲಿಲ್ಲ. ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು. “ವಿದ್ಯಾರ್ಥಿಗಳೆಲ್ಲ ಈಗಾಗಲೇ ಸಭಾಂಗಣದಿಂದ ಹೊರಗಡೆ ಹೋಗಿದ್ದಾರೆ. ಹೀಗಾಗಿ ನಾನು ಕೂಡ ಹೆಚ್ಚು ಹೊತ್ತು ಮಾತನಾಡುವುದಿಲ್ಲ’ ಎಂದೇ ಮುಖ್ಯಮಂತ್ರಿಗಳು ಭಾಷಣ ಆರಂಭಿಸಿದರು.

ಸೆಂಟ್ರಲ್‌ ವಿಶ್ವವಿದ್ಯಾಲಯದ ವಿಸ್ತರಣೆಗೆ ನಗರದ ಒಳಗೆ 43 ಎಕರೆ ಜಮೀನು ಒದಗಿಸಿ, ಸಮಗ್ರ ಅಭಿವೃದ್ಧಿಗೆ 1000 ಕೋಟಿ ರೂ. ಮೀಸಲಿಟ್ಟು, ತಕ್ಷಣ 500 ಕೋಟಿ ರೂ. ಮಂಜೂರು ಮಾಡಬೇಕು. ಲ್ಯಾಬ್‌ಗಳ ಅಭಿವೃದ್ಧಿ ಜತೆಗೆ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಮಾಡಬೇಕು. 
-ಪ್ರೊ.ಜಾಫೆಟ್‌, ಕುಲಪತಿ

ವಿಶ್ವದ ಉತ್ಕೃಷ್ಟ 20 ವಿಶ್ವವಿದ್ಯಾಲಯಗಳ ಪೈಕಿ 17 ವಿಶ್ವವಿದ್ಯಾಲಯಗಳು ಅಮೆರಿಕದಲ್ಲಿವೆ. ವಿಶ್ವ ಶೇಷ್ಠ 100 ವಿವಿಗಳ ಪಟ್ಟಿಯಲ್ಲೂ ಭಾರತದ ವಿಶ್ವವಿದ್ಯಾಲಯಗಳಿಲ್ಲ. ಸೆಂಟ್ರಲ್‌ ಕಾಲೇಜಿಗೆ ಸಾಕಷ್ಟು ಇತಿಹಾಸ ಇದೆ. ಇದೊಂದು ಜಾಗತಿಕ ವಿವಿಯಾಗಿ ಬೆಳೆಯಬೇಕು.
-ನ್ಯಾ.ಎಂ.ಎನ್‌.ವೆಂಕಟಾಚಲಯ್ಯ, ನಿವೃತ್ತ ಮುಖ್ಯ ನ್ಯಾಯಮೂರ್ತಿ

ಓದಿ, ಪಾಠ ಮಾಡಿದ ಸಂಸ್ಥೆಯಿಂದಲೇ ಸನ್ಮಾನ ದೊರೆತಿರುವುದು ಸಂತಸ ತಂದಿದೆ. ಗೃಹಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ನನ್ನ ವಿದ್ಯಾರ್ಥಿಯಾಗಿದ್ದರು. ಆದರೆ ಒಂದು ಕ್ಲಾಸ್‌ಗೂ ಬಂದಿರಲಿಲ್ಲ. ಸೆಂಟ್ರಲ್‌ ಕಾಲೇಜಿಗೆ ವಿಜ್ಞಾನ, ಸಾಹಿತ್ಯದ ಸುದೀರ್ಘ‌ ಇತಿಹಾಸವಿದೆ.
-ಕೆ.ಎಸ್‌.ನಿಸಾರ್‌ ಅಹಮದ್‌, ಕವಿ

Advertisement

Udayavani is now on Telegram. Click here to join our channel and stay updated with the latest news.

Next