Advertisement
ಪಕ್ಷದ ಕಚೇರಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸ್ಥಾನದಲ್ಲಿ ಬಹಳ ದಿನ ಉಳಿಯಲು ಸಾಧ್ಯವಿಲ್ಲ ಎಂಬುದು ಮನವರಿಕೆ ಆದಂತಿದೆ. ತಾನು ಅಪರಾಧಿ ಸ್ಥಾನದಲ್ಲಿದ್ದು, ಬಹಳ ದಿನ ಈ ಭಂಡತನ ನಡೆಯದು ಎಂಬುದೂ ಅವರಿಗೆ ಗೊತ್ತಾಗಿದೆ. ಹಾಗಾಗಿ ಬ್ರಹ್ಮಾಸ್ತ್ರ ಚಲಾವಣೆ ಮಾಡುವ ಪ್ರಯತ್ನದಲ್ಲಿದ್ದಂತೆ ಕಾಣುತ್ತಿದೆ. ಅದರ ಭಾಗವಾಗಿ ತರಾತುರಿಯಲ್ಲಿ ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಮುಖಂಡರೂ ಇದನ್ನು ವಿರೋಧಿಸುತ್ತಿದ್ದಾರೆ. ಅದಕ್ಕೆ ಕಾರಣಗಳೂ ಸ್ಪಷ್ಟವಾಗಿವೆ. ಈ ವರದಿ ಅವೈಜ್ಞಾನಿಕವಾಗಿದೆ ಎಂದು ಹಲವಾರು ಬಾರಿ ಕಾಂಗ್ರೆಸ್ ಮುಖಂಡರೇ ಹೇಳಿದ್ದಾರೆ ಎಂದು ನೆನಪು ಮಾಡಿದರು.ರಾಜಕೀಯ ದಾಳವಾಗಿ ಬಳಕೆ :
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ, ಮೈಸೂರಿನ ಮುಡಾ ಹಗರಣ, ಮುಖ್ಯಮಂತ್ರಿಗಳ ಬುಡವನ್ನೇ ಅಲ್ಲಾಡಿಸಿರುವ ಈ ಸಂದರ್ಭದಲ್ಲಿ, ಸಿಎಂ ಕುರ್ಚಿ ಅಲ್ಲಾಡುತ್ತಿರುವ ಈ ಕಾಲಘಟ್ಟದಲ್ಲಿ ಜಾತಿಗಣತಿಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕರಿಗೂ ಅನ್ನಿಸಿದೆ. ಜಾತಿ ಜನಗಣತಿ ಬಗ್ಗೆ ರಾಷ್ಟ್ರೀಯ, ರಾಜ್ಯಮಟ್ಟಗಳಲ್ಲಿ ಚರ್ಚೆ ಮಾಡಬೇಕು. ನಂತರ ನಿರ್ಣಯಿಸುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಇದು ಅವೈಜ್ಞಾನಿಕ; ಮತ್ತೂಮ್ಮೆ ಪರಿಶೀಲಿಸಿ ಎಂದು ಶಾಮನೂರು ಶಿವಶಂಕರಪ್ಪ ಅವರೂ ಹೇಳಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಗಮನ ಸೆಳೆದರು.
ಹಿಂದುಳಿದ ಸಮಾಜ, ಪರಿಶಿಷ್ಟ ಜಾತಿ, ಪಂಗಡಗಳು, ಎಲ್ಲ ಸಮುದಾಯಗಳಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಶಕ್ತಿ ಕೊಡಬೇಕು. ಅವರನ್ನೂ ಮುಂಚೂಣಿಯಲ್ಲಿ ತರಬೇಕೆಂಬುದು ಬಿಜೆಪಿ ನಿಲುವು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೇಶದ, ರಾಜ್ಯದ ಸೌಲಭ್ಯ ಸಿಗಬೇಕೆಂಬ ಆಶಯವುಳ್ಳ ಅಂತ್ಯೋದಯದ ಪರಿಕಲ್ಪನೆಯ ಮೂಲ ಉದ್ದೇಶವನ್ನು ಬಿಜೆಪಿ ಹೊಂದಿದೆ. ಆ ಸಮುದಾಯಗಳಿಗೆ ನ್ಯಾಯ ಸಿಗಬೇಕೆಂಬ ಬದ್ಧತೆ ಬಿಜೆಪಿಗೆ ಇದೆ. ಅದರ ಬಗ್ಗೆ ಗೊಂದಲ ಬೇಡ. ಆದರೆ, ಇದನ್ನು ರಾಜಕೀಯ ದಾಳವಾಗಿ ಬಳಸಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೊರಟಿದ್ದಾರೆ. ಇದು ಖಂಡಿತ ಸಾಧ್ಯವಾಗುವುದಿಲ್ಲ. ಇದರ ಹಿಂದೆ ರಾಜಕೀಯ ಷಡ್ಯಂತ್ರ, ಕುತಂತ್ರ ಇರುವುದಾಗಿ ಕಾಂಗ್ರೆಸ್ಸಿನವರೇ ಹೇಳುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.