Advertisement
ದೇಶದಲ್ಲಿರುವ ಗೇರು ಸಂಸ್ಕರಣಾ ಘಟಕಗಳಿಗೆ ವಾರ್ಷಿಕವಾಗಿ 16-17 ಲಕ್ಷ ಟನ್ ಕಚ್ಚಾ ಗೇರು ಬೀಜದ ಅಗತ್ಯವಿದೆ. ಆದರೆ ಸ್ಥಳೀಯವಾಗಿ 5-6 ಲಕ್ಷ ಟನ್‌ಗಿಂತಲೂ ಕಡಿಮೆ ಗೇರು ಬೀಜ ಸಿಗುತ್ತಿದೆ. ಅಂದರೆ 2-3 ತಿಂಗಳಿಗಾಗುವಷ್ಟು ಮಾತ್ರ ಸಿಗುತ್ತಿದೆ. ಸುಮಾರು 10 ಲಕ್ಷ ಟನ್ ಕೊರತೆಯಾಗುತ್ತಿದ್ದು, ಅದಕ್ಕಾಗಿ ಆಫ್ರಿಕಾ, ವಿಯೆಟ್ನಾಂ, ಬ್ರೆಜಿಲ್‌ನಂತಹ ದೇಶಗಳಿಂದ ಕಚ್ಚಾ ಬೀಜ ಆಮದು ಅನಿವಾರ್ಯವಾಗಿದೆ. ಅದಕ್ಕಾಗಿ ಮುಖ್ಯವಾಗಿ ಸರಕಾರವು ಗೇರು ಅಭಿವೃದ್ಧಿ ನಿಗಮದ ಮೂಲಕ ಗೇರು ಬೆಳೆ ಪ್ರದೇಶಗಳನ್ನು ಹೆಚ್ಚಿಸಲು ಯೋಜನೆ ಹಾಕಿಕೊಳ್ಳಬೇಕು. ಆಗ ಮಾತ್ರ ಸ್ಥಳೀಯ ಗೇರು ಬೀಜ ಪ್ರಮಾಣ ಹೆಚ್ಚಾಗಬಹುದು.
ವರ್ಷದಿಂದ ವರ್ಷಕ್ಕೆ ಗೇರು ಬೀಜಕ್ಕೆ ಬೆಲೆ ಕುಸಿಯುತ್ತಿರುವುದರಿಂದ ಸರಕಾರವು ಅಡಿಕೆ ಮಾದರಿಯಲ್ಲಿ ಕ್ಯಾಂಪ್ಕೋ ರೀತಿಯಲ್ಲಿ ಕನಿಷ್ಠ 1 ಕೆಜಿಗೆ 150 ರೂ. ಬೆಂಬಲ ಬೆಲೆಯಲ್ಲಿ ಖರೀದಿ ವ್ಯವಸ್ಥೆಯನ್ನು ಆರಂಭಿಸಬೇಕು.
Related Articles
Advertisement
ಎಲ್ಲ ಕೃಷಿ, ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆಯಿದ್ದರೂ, ಗೇರು ಬೆಳೆಗೆ ಮಾತ್ರ ಬೆಳೆ ವಿಮೆಯಿಲ್ಲ. ದೇಶದ 13 ರಾಜ್ಯಗಳ ಪೈಕಿ ಕರ್ನಾಟಕ, ಗೋವಾ ಹೊರತುಪಡಿಸಿ ಬೇರೆಲ್ಲ ರಾಜ್ಯಗಳಲ್ಲಿ ಗೇರು ಬೆಳೆ ವಿಮೆ ವ್ಯಾಪ್ತಿಗೆ ಸೇರಿದೆ. ಗೇರು ಕೃಷಿಯೂ ರೋಗಬಾಧೆ, ಪ್ರತಿಕೂಲ ಹವಾಮಾನ, ಮುಳ್ಳುಹಂದಿ, ಸಿಂಗಲಿಕದಂತಹ ಕಾಡು ಪ್ರಾಣಿಗಳ ಹಾವಳಿಗೆ ತುತ್ತಾಗುತ್ತಿರುವುದರಿಂದ ಬೆಳೆ ವಿಮೆ ವ್ಯಾಪ್ತಿಗೆ ತರಬೇಕು.
ರಾಜ್ಯದ ಅಬಕಾರಿ ನೀತಿಯನ್ನು ರೈತ ಸ್ನೇಹಿಯಾಗಿಸಿ, ಗೇರು ಹಣ್ಣು, ಅನಾನಸು ಸೇರಿದಂತೆ ವಿವಿಧ ಸೀಸನಲ್ ಹಣ್ಣುಗಳನ್ನು ವೈನ್ ಆಗಿಸಲು ಅನುಮತಿ ನೀಡಿದರೆ, ಗೋವಾದಂತೆ ಗೇರು ಕೃಷಿಯ ಮೌಲ್ಯವರ್ಧನೆಯಾಗಲಿದೆ. ಈಗಾಗಲೇ ಗೇರು ಹಣ್ಣು ಆರೋಗ್ಯವರ್ಧಕವೂ ಆಗಿದೆ ಎನ್ನುವುದು ಸಂಶೋಧನೆಯಲ್ಲೂ ಸಾಬೀತಾಗಿದೆ. ಆಗ ಗೇರು ಬೀಜ ಮಾತ್ರವಲ್ಲದೆ, ಹಣ್ಣಿಗೆ ಬೇಡಿಕೆ ಸೃಷ್ಟಿಯಾಗಲಿದೆ.
– ಚಂದ್ರಶೇಖರ ಉಡುಪ ಕೆಂಚನೂರು, ನಿರ್ದೇಶಕರು, ಅಖೀಲ ಭಾರತ ಗೇರು ಬೆಳೆಗಾರರ ಸಂಘ