ಚಿಕ್ಕಮಗಳೂರು: ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಪರಿಶಿಷ್ಟ ಮಹಿಳೆಯಾಗಿದ್ದು, ಬಿಜೆಪಿ ಮುಖಂಡರು ಮೇಲ್ವರ್ಗದವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಸಂಚು ಮಾಡುತ್ತಿದ್ದಾರೆ. ಈ ದೌರ್ಜನ್ಯದ ವಿರುದ್ಧ ಈಗಾಗಲೇ ವಕೀಲರ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಮುಂದಿನ ಜಿಪಂ ಸಾಮಾನ್ಯ ಸಭೆಗೆ ಆಡಳಿತ ಪಕ್ಷದ ಸದಸ್ಯರು ಹಾಜರಾಗುವಂತೆ ನಿರ್ದೇಶನ ನೀಡಬೇಕು. ತಪ್ಪಿದಲ್ಲಿ ಅವರ ವಿರುದ್ಧ ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಅಖೀಲ ಭಾರತ ಮುಂಡಾಲ ಸಮಾಜದ ಪ್ರಧಾನ ಕಾರ್ಯದರ್ಶಿ ಜಾನವ್ ಎಚ್ಚರಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಡಾಲ ಸಮಾಜದ ಮುಖಂಡರು ಸುಜಾತಾ ಕೃಷ್ಣಪ್ಪ ಅವರನ್ನು ದಾರಿ ತಪ್ಪಿಸುತ್ತಿದ್ದು, ಹಣಕ್ಕಾಗಿ ಇದನ್ನೆಲ್ಲ ಮಾಡುತ್ತಿದ್ದಾರೆಂದು ಬಿಜೆಪಿ ಮುಖಂಡರು ಆರೋಪ ಮಾಡುತ್ತಿರುವುದು ತಿಳಿದು ಬಂದಿದೆ. ಸಮಾಜದ ಮಹಿಳೆಗೆ ಸಂವಿಧಾನದತ್ತವಾದ ಅಧಿಕಾರವನ್ನು ಬಿಜೆಪಿ ಮುಖಂಡರು ವಾಮಮಾರ್ಗದಲ್ಲಿ ಕಿತ್ತುಕೊಳ್ಳಲು ಸಂಚು ಮಾಡುತ್ತಿದ್ದು, ರಾಜೀನಾಮೆ ನೀಡದಿದ್ದರೆಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ ಬೆದರಿಕೆ ಹಾಕಿದ್ದಾರೆ ಎಂದರು.
ಹಿಂದೆ ನಿಗದಿಯಾಗಿದ್ದ ಎರಡು ಸಭೆಗೆ ಆಡಳಿತ ಪಕ್ಷದ ಸದಸ್ಯರು ಹಾಜರಾಗದಂತೆ ತಡೆದು ದಲಿತ ಮಹಿಳೆಯ ಅಧಿಕಾರ ಕಿತ್ತುಕೊಳ್ಳುವ ಸಂಚು ರೂಪಿಸಿದ್ದು, ಇದು ದಲಿತರ ಮೇಲಿನ ದೌರ್ಜನ್ಯವಾಗಿದೆ. ನ.12ರಂದು ಜಿಪಂ ಅಧ್ಯಕ್ಷೆ ಜಿಪಂ ಸಾಮಾನ್ಯ ಸಭೆ ಕರೆದಿದ್ದು, ಈ ಸಭೆಗೂ ಆಡಳಿತ ಪಕ್ಷದ ಸದಸ್ಯರನ್ನು ಸಭೆಗೆ ಹಾಜರಾಗದಂತೆ ತಡೆದಲ್ಲಿ ವಕೀಲರ ಮೂಲಕ ನ್ಯಾಯಾಲಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಇಬ್ಬರು ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗುವುದು. ಬಿಜೆಪಿ ಪಕ್ಷದಿಂದ ಸುಜಾತಾ ಕೃಷ್ಣಪ್ಪ ಅವರು ಗೆದ್ದು ಬಂದಿರುವುದು ಹೊರತು ಮುಂಡಾಲ ಸಮಾಜದಿಂದ ಅಲ್ಲವೆಂದು ಮುಖಂಡರು ಆರೋಪಿಸುತ್ತಿದ್ದು, ಸುಜಾತಾ ಅವರ ಹೆಸರನ್ನು ಬಿಜೆಪಿಗೆ ಶಿಫಾರಸು ಮಾಡಿದ್ದೇಮುಂಡಾಲ ಸಮಾಜ. ಕೊಪ್ಪ ತಾಲೂಕಿನಲ್ಲಿ ಮುಂಡಾಲ ಸಮಾಜದ ಮತದಾರರು ಹೆಚ್ಚಿದ್ದು, ಸಮಾಜದವರು ತಮ್ಮ ಓಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸುಜಾತಾ ಅವರಿಗೆ ಹಾಕಿದ್ದರಿಂದ ಅವರು ಜಿಪಂಗೆ ಆಯ್ಕೆಯಾಗಿದ್ದಾರೆ. ಸುಜಾತಾ ಕೃಷ್ಣಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿರುವುದರಿಂದ ಬಿಜೆಪಿ ಜಿಲ್ಲಾಧ್ಯಕ್ಷರು ನಮ್ಮ ನಡುವೆ ಒಡಕು ತಂದು ಒಡೆದಾಳಲು ಮುಂದಾಗಿದ್ದಾರೆ ಎಂದರು.