Advertisement

Bengaluru: ನಕಲಿ ದಾಖಲೆ ನೀಡಿ ಹುದ್ದೆ ಪಡೆದ ಆರೋಪದಡಿ ಪಿಎಸ್‌ಐ ವಿರುದ್ಧ ಕೇಸ್‌

10:28 AM Dec 30, 2024 | Team Udayavani |

ಬೆಂಗಳೂರು: ನಕಲಿ ದಾಖಲಾತಿ ನೀಡಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಿಟ್ಟಿಸಿಕೊಂಡಿರುವ ಬ್ಯಾಡರಹಳ್ಳಿ ಪಿಎಸ್‌ಐ ಕಾಶಿಲಿಂಗೇಗೌಡ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್‌.ಟಿ.ಚಂದ್ರಶೇಖರ್‌ ನೀಡಿರುವ ದೂರಿನ ಆಧಾರದ ಮೇಲೆ ಬ್ಯಾಡರಹಳ್ಳಿ ಪಿಎಸ್‌ಐ ಕಾಶಿಲಿಂಗೇಗೌಡ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಪೊಲೀಸ್‌ ಇಲಾಖೆಯಿಂದ 2017-18 ರಲ್ಲಿ ಪಿಎಸ್‌ಐ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಗರಿಷ್ಠ ವಯೋಮಿತಿಯು 2018 ಮಾ.12ಕ್ಕೆ 30 ವರ್ಷ ಮೀರಿರಬಾರದು ಎಂಬುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಕಾಶಿಲಿಂಗೇಗೌಡ ಅವರ ಜನ್ಮದಿನ 1987ರ ಏಪ್ರಿಲ್‌ 15 ಆಗಿತ್ತು. ವಯೋಮಿತಿಯ ಅನ್ವಯ ಇವರು ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲದಿದ್ದರೂ ಸಹ ಸಣಬ ಗ್ರಾಮದ ಅಂಗನವಾಡಿ ಕೇಂದ್ರದ 1987-88 ಮತ್ತು 1988-89ನೇ ಸಾಲಿನ ಚುಚ್ಚುಮದ್ದಿನ ರಿಜಿಸ್ಟರ್‌ನಲ್ಲಿನ ನಮೂದುಗಳನ್ನು ಅದಲು ಬದಲು ಮಾಡಿದ್ದರು. ಬಳಿಕ ಘನ ಪ್ರಿನ್ಸಿಪಲ್‌ ಸಿವಿಲ್‌ ಜಡ್ಜ್ ಜೆಎಂಎಫ್ಸಿ ಕುಣಿಗಲ್‌ ನ್ಯಾಯಾಲಯದಲ್ಲಿ ತಮ್ಮ ಜನ್ಮ ದಿನಾಂಕ 1988ರ ಏಪ್ರಿಲ್‌ 15 ಎಂಬುದಾಗಿ ಖಾಸಗಿ ದಾವೆ ಹೂಡಿದ್ದರು. ತನ್ನ ವಯೋಮಿತಿಗೆ ಸಂಬಂಧಿಸಿದಂತೆ ನಕಲಿ ದಾಖಲಾತಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ಮೂಲಕ 1988 ಏ.15 ಎಂದು ತಿದ್ದುಪಡಿ ಮಾಡುವಂತೆ ಡಿಕ್ರಿ ಆದೇಶವನ್ನು ಪಡೆದುಕೊಂಡು, ಸುಳ್ಳು, ಜನ್ಮದಿನಾಂಕದ ನಕಲಿ ದಾಖಲಾತಿಗಳ ಮೂಲಕ ಪಿ.ಎಸ್‌.ಐ. ಹುದ್ದೆಗೆ ನೇಮಕಾತಿ ಹೊಂದಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?: 2013 ರಿಂದ 2018ರ ವರೆಗೆ ಪಿಎಸ್‌ಐ ಹುದ್ದೆಗಳಿಗೆ ಅರ್ಜಿ ಹಾಕಿದ್ದು, 2013 ರಿಂದ 2017ರ ವರೆಗೆ ನೀಡಿರುವ ಜನ್ಮ ದಿನಾಂಕ ಮತ್ತು 2018ರಲ್ಲಿ ನೀಡಿದ ಜನ್ಮ ದಿನಾಂಕ ವ್ಯತ್ಯಾಸವಿರುತ್ತದೆ ಎಂಬಿತ್ಯಾದಿಯಾಗಿ ಆರೋಪಿಸಿದ ಹಿನ್ನೆಲೆಯಲ್ಲಿ ದೂರುದಾರರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕುಣಿಗಲ್‌ ಕಚೇರಿ ಅಮೃತೂರು ಹೋಬಳಿಯ ಸಣಬ ಗ್ರಾಮದ ಚುಚ್ಚುಮದ್ದು ಕಾರ್ಯಕ್ರಮದ ರಿಜಿಸ್ಟರ್‌ನಲ್ಲಿನ ನಮೂದುಗಳನ್ನು ಪರಿಶೀಲಿಸಿದ್ದರು. ಆಗ ಕಾಶಿಲಿಂಗೇಗೌಡ ಅವರ ಜನ್ಮ ದಿನಾಂಕ 1987ರ ಏ.5 ಎಂಬುದು ದೃಢಪಟ್ಟಿತ್ತು. ಹೀಗಾಗಿ ಕಾಶಿಲಿಂಗೇಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಕರಣದಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next