ಬೆಂಗಳೂರು: ಕಾರು ಪೂಲಿಂಗ್‌ಗೆ ಬೆಂಬಲ ನೀಡಿದ ಸಂಸದ ತೇಜಸ್ವಿಸೂರ್ಯ ನಡೆ ವಿರೋಧಿಸಿ ಆಟೋಗಳ ಹಿಂಭಾಗದಲ್ಲಿ ಪೋಸ್ಟರ್ ಅಂಟಿಸುತ್ತಿದ್ದ ಚಾಲಕರಿಗೆ ಬೆದರಿಕೆ ಹಾಕಿದ ಆರೋಪದಡಿ ಮಾಜಿ ಕಾರ್ಪೋರೆಟರ್ ಸಂಗಾತಿ ವೆಂಕಟೇಶ್ ಹಾಗೂ ಇತ ರರ ವಿರುದ್ಧ ಹನುಮಂತ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ಚಾಲಕ ಮನೋಜ್ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಹನು ಮಂತನಗರ ಪೊಲೀಸರು ಸಂಗಾತಿ ವೆಂಕಟೇಶ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ನ.17ರಂದು ಮನೋಜ್ ಕುಮಾರ್ ಹನುಮಂತನಗರದ ಶಂಕರ್‌ನಾಗ್ ಸರ್ಕಲ್ ಬಳಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಆಗ ಸಂಗಾತಿ ವೆಂಕಟೇಶ್ ಅವರ ಸಹಚರರು ಆಟೋ ತಡೆದು, ವಾಹನದ ಹಿಂಭಾಗದಲ್ಲಿ ಅಂಟಿಸಿದ್ದ “ಕಾರು ಪೂಲಿಂಗ್ ವ್ಯವಸ್ಥೆಗೆ ಬೆಂಬಲ ನೀಡಿರುವ ತೇಜಸ್ವಿ ಸೂರ್ಯಗೆ ಧಿಕ್ಕಾರ’ ಎಂಬ ಪೋಸ್ಟರ್ ಕಿತ್ತೆಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೇ ವೇಳೆ ಅದನ್ನು ಪ್ರಶ್ನಿಸಿದ ಇತರೆ ಆಟೋ ಚಾಲಕರಿಗೆ ನಿಂದಿಸಿ, ಅವರ ಆಟೋಗಳ ಹಿಂಭಾಗದಲ್ಲಿ ಅಂಟಿಸಿದ್ದ ಪೋಸ್ಟರ್‌ಗಳನ್ನು ಹರಿದುಹಾಕಿ ದೌರ್ಜನ್ಯ ಎಸಗಿದ್ದರು. ಬಳಿಕ ಸಂಗಾತಿ ವೆಂಕಟೇಶ್‌ರನ್ನು ಸ್ಥಳಕ್ಕೆ ಕರೆಸಿಕೊಂಡ ಕಿಡಿಗೇಡಿಗಳು, ಅವರ ಮುಂದೆಯೇ ಆಟೋ ಚಾಲಕರಿಗೆ “ಮತ್ತೂಮ್ಮೆ ನಮ್ಮ ಏರಿಯಾಗೆ ಬಂದರೆ ಕತ್ತರಿಸಿ ಬಿಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮನೋಜ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.