Advertisement
ಭಾರತೀಯ ಜೀವ ವಿಮಾ ನಿಗಮದ ವಿಮಾ ಪಾಲಿಸಿಯೊಂದರ ಘೋಷವಾಕ್ಯ ಹೀಗಿದೆ: ಜೀವನದ ಜತೆಗೂ, ಜೀವನದ ನಂತರವೂ. ಅಂದರೆ ಆ ಪಾಲಿಸಿ ಮಾಡಿಸಿದರೆ ವಿಮಾದಾರರು ಬದುಕಿರುವಾಗ ಅದರ ಮೊತ್ತ ಸಿಗುತ್ತದೆ ಹಾಗೂ ವಿಮಾ ಮೊತ್ತ ಸಿಕ್ಕಿದ ನಂತರ ಯಾವಾಗ ಮೃತರಾದರೂ ಅವಲಂಬಿತರಿಗೆ ಮತ್ತೂಮ್ಮೆ ವಿಮಾ ಮೊತ್ತ ಸಿಗುತ್ತದೆ, ಹೀಗೆ ಅದರ ಅರ್ಥ. ಹೀಗೆಯೇ ಕೆಲವು ಸರಕಾರಿ ಅಧಿಕಾರಿಗಳು ತಮ್ಮ ಸೇವಾವಧಿಯುದ್ದಕ್ಕೂ ಆಯಕಟ್ಟಿನ ಜಾಗದಲ್ಲಿ ಇರುವುದಲ್ಲದೆ, ನಿವೃತ್ತಿ ನಂತರವೂ ಫಲವತ್ತಾದ ಉದ್ಯೋಗ ಸೃಷ್ಟಿಸಿ ಅದರಲ್ಲಿ ಇನ್ನಷ್ಟು ವರ್ಷ ವಿರಾಜಮಾನರಾಗಿ, ಪಿಂಚಣಿ ಜತೆಗೆ ಕೈತುಂಬ ಸಂಬಳ (ಜತೆಗೆ ಒಂದಷ್ಟು ಗಿಂಬಳ) ಗಿಟ್ಟಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುತ್ತಾರೆ, ಹೇಗನ್ನುತ್ತೀರಾ, ಇಲ್ಲಿದೆ ವಿವರ:
Related Articles
Advertisement
ಶಿಕ್ಷಕರ ಅಥವಾ ಸಾಮಾನ್ಯ ನೌಕರರ, ಪತಿ-ಪತ್ನಿಯರಿಗೆ ಕನಿಷ್ಟ ಒಂದೇ ತಾಲೂಕಿನೊಳಗೆ ವರ್ಗಾವಣೆಗೂ ನೂರೆಂಟು ಕಾರಣ ಒಡ್ಡುವ ಉನ್ನತ ಹುದ್ದೆಯಲ್ಲಿರುವ ಆಡಳಿತಗಾರರಿಗೆ ವರ್ಗಾವಣೆಯಾಗುವಾಗ ಅವರ ಪತಿ/ಪತ್ನಿಯವರಿಗೆ ಕೇಂದ್ರ ಸ್ಥಾನದಲ್ಲಿ ಅವರ ಹುದ್ದೆಗೆ ಸೂಕ್ತ ಹುದ್ದೆ ಇಲ್ಲದಿದ್ದರೂ, ಇರುವ ಹುದ್ದೆ ಉನ್ನತೀಕರಿಸಿ, ಅಥವಾ ಹೊಸದಾಗಿ ಸೃಷ್ಟಿಸಿ ವರ್ಗಾಯಿಸಲಾಗುತ್ತದೆ. ಅವರು ಅಲ್ಲಿಂದ ಬೇರೆಡೆಗೆ ವರ್ಗಾವಣೆ ಆದರೆ ಕೂಡಲೇ ಆ ಹುದ್ದೆಯನ್ನೂ ಅವರ ಜತೆಗೆ ಸ್ಥಳಾಂತರಿಸುವ ಅಥವಾ ಹುದ್ದೆಯೇ ರದ್ದಾಗುವ ಅದ್ಭುತ ಯೋಜನೆಗಳಿವೆ. ಬಡಪಾಯಿ ಶಿಕ್ಷಕರು, ಸಾಮಾನ್ಯ ನೌಕರರು ಮತ್ತು ಅವರ ಕುಟುಂಬದವರು ಮನುಷ್ಯರಲ್ಲವೇ?
ಇಷ್ಟಕ್ಕೇ ಮುಗಿಯಲಿಲ್ಲ, ಯಾವುದಾದರೂ ನಿಯಮಾವಳಿಗಾಗಿ ಕಾನೂನು ಸಲಹೆಗೋ ನಿಯಮಾವಳಿಗಳ ರಚನೆಗೋ ಹೊಸ ಸಮಿತಿಗಳ ರಚನೆಯಾದಾಗ ಅದರ ಅಧ್ಯಕ್ಷ-ಸದಸ್ಯರನ್ನಾಗಿ ತಜ್ಞರನ್ನು ಕೇವಲ ಬೆಂಗಳೂರು, ಹೆಚ್ಚೆಂದರೆ ಪಕ್ಕದ ತುಮಕೂರು ಜಿಲ್ಲೆಯವರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಅವರ ಅಭಿಪ್ರಾಯಕ್ಕೆ ಮಾತ್ರ ಮನ್ನಣೆ. ಇಂತಹ ವರದಿಗಳ ಪರಿಣಾಮ ಮಾತ್ರ ರಾಜ್ಯ ವ್ಯಾಪಿ ಇರುವುದಾದರೂ ಪ್ರಸ್ತಾವನೆ, ನಿಯಮಾವಳಿಗಳು ಕೇವಲ ಬೆಂಗಳೂರಿನವರಿಂದ ರೂಪುಗೊಳ್ಳುತ್ತದೆ. ಇದರಿಂದಲೇ ರಾಜ್ಯದ ಇತರೆಡೆಗಳಿಗಿಂತ ತೀರಾ ಭಿನ್ನವಾದ ಪರಿಸ್ಥಿತಿ ಇರುವ ಕರಾವಳಿ ಜಿಲ್ಲೆಯಲ್ಲಿ, ಮರಳು ನೀತಿ, ಭೂಪರಿವರ್ತನೆ ಮುಂತಾದ ಹಲವಾರು ನಿಯಮಗಳು ಸಮಸ್ಯೆಗಳನ್ನು ಹುಟ್ಟು ಹಾಕುವುದು ಮತ್ತು ಇದರಿಂದ ಈ ಜಿಲ್ಲೆಗಳ ಜನರು ಪದೇಪದೇ ಸಂಕಷ್ಟಕ್ಕೆ ಈಡಾಗುವುದು.
ರಾಜಕಾರಣಿಗಳಿಗಾಗಿ ರೂಪಿತವಾದ ಬಹುತೇಕ ನಿಗಮ ಮಂಡಳಿಗಳ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇದೆ. ಇದರಲ್ಲಿ ಎರಡು ರೀತಿಯ ಅನುಕೂಲತೆಗಳಿವೆ. ಒಂದು ಇದರ ಅಧ್ಯಕ್ಷತೆ ಮತ್ತು ಸದಸ್ಯರಾಗಿ ನೇಮಕವಾಗುವ ರಾಜಕೀಯ ಧುರೀಣರು ತಮ್ಮ ಊರಿನಿಂದ ಬೆಂಗಳೂರಿಗೆ ಪದೇಪದೇ ಪ್ರವಾಸ ಕೈಗೊಳ್ಳಲು, ಮತ್ತು ಬೆಂಗಳೂರಿನಲ್ಲಿ ತಂಗುವ ಉದ್ದೇಶದಿಂದ ಸಾಕಷ್ಟು ಭತ್ಯೆ ಪಡೆಯಲು ಸಾಧ್ಯ. ಜತೆಗೆ ಈ ನಿಗಮ ಮಂಡಳಿಗೆ ನೇಮಕವಾಗುವ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿ ವಸತಿ ಸೇರಿದಂತೆ ಒಂದಷ್ಟು ಕಾಲ ಉದ್ಯೋಗ. ಹೇಗಿದೆ ಹೊಂದಾಣಿಕೆಯ ಬದುಕು?
ನ್ಯಾಯಮೂರ್ತಿ ವೆಂಕಟಾಚಲಯ್ಯ ಮತ್ತು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಾಲದಲ್ಲಿ ರಾಜ್ಯದ ಬಹುತೇಕ ಭ್ರಷ್ಟ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದ್ದ, ದೇಶದಲ್ಲೇ ಮಾದರಿ ಎನಿಸಿದ್ದ ಕರ್ನಾಟಕ ಲೋಕಾಯುಕ್ತ, ನ್ಯಾಯಮೂರ್ತಿ ಭಾಸ್ಕರರಾವ್ ಅಂತಹವರ ಕೆಟ್ಟ ಆಡಳಿತವನ್ನೂ ನೋಡಿದೆ. ಕಠಿಣ ಕ್ರಮಗಳ ಖ್ಯಾತಿಯ ವಿಪಿನ್ ಸಿಂಗ್, ಮಧುಕರ ಶೆಟ್ಟಿ ಅಂತಹ ದಕ್ಷ ಅಧಿಕಾರಿಗಳನ್ನು ಹೊಂದಿದ್ದ ಈ ವ್ಯವಸ್ಥೆಯಲ್ಲಿ ಕೂಡಾ ಈಗ ನೆಲೆ ಅರಸಿ ಬಂದಿರುವವರು ಸೇರಿರಬಹುದಾದ ಕಾರಣ ಅಲ್ಲಿಂದೀಚೆಗೆ ಲೋಕಾಯುಕ್ತ ಎನ್ನುವುದು ಕುರಿ ಕಾಯಲು ತೋಳನನ್ನು ನೇಮಿಸಿದ ಕಥೆಯಂತಾಗಿದೆ.
ಮಾಹಿತಿ ಆಯೋಗ, ಮಾನವ ಹಕ್ಕು ಆಯೋಗ, ಮಹಿಳಾ ಆಯೋಗ, ಕರಾವಳಿ, ಮಲೆನಾಡು, ಹೈದರಾಬಾದ್, ಕನ್ನಡ, ತುಳು, ಕೊಂಕಣಿ ಅಭಿವೃದ್ಧಿ ಪ್ರಾಧಿಕಾರಗಳು ಒಂದೆಡೆಯಾದರೆ, ಇನ್ನೂ ಕೆಲವು ಶಾಸನಾತ್ಮಕ ಪ್ರಾಧಿಕಾರಗಳ ಅಧ್ಯಕ್ಷತೆ ರಾಜಕಾರಣಿಗಳಿಗಾದರೆ, ಆಡಳಿತ ನಿವೃತ್ತ ಅಥವಾ ಕೇಂದ್ರ ಸ್ಥಾನಕ್ಕೆ ಅಂಟಿಕೊಂಡಿರುವ ಅಧಿಕಾರಿಗಳಿಗೆ- ಅಧೀನ ಕಚೇರಿಯಲ್ಲಿ ಬರೀ ಒದ್ದಾಟ; ಹೇಗಿದೆ ಹೊಂದಾಣಿಕೆ ವ್ಯವಸ್ಥೆ?
ಇಂತಹ ಪಟ್ಟಭಧ್ರ ಹಿತಾಸಕ್ತಿ ಉಳ್ಳವರ ಮೊಂಡುತನದಿಂದಲೇ ಕೊಡಗಿನ, ತುಳುನಾಡಿನ, ಉತ್ತರ ಕರ್ನಾಟಕ ಮುಂತಾದೆಡೆ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿರುವುದು. ಈ ತಾರತಮ್ಯದ ನಡವಳಿಕೆಗಳಿಗೆ ಪರಿಹಾರ ಎಲ್ಲಿದೆ?
ಮೋಹನದಾಸ ಕಿಣಿ