Advertisement

ಸರಕು ಸಾಗಣೆ ನೀತಿ ಕರಡು ಸಿದ್ಧ: ಕೆ.ಜೆ.ಜಾರ್ಜ್‌ 

06:00 AM Aug 22, 2018 | |

ಬೆಂಗಳೂರು: ಐಟಿ, ಏರೋಸ್ಪೇಸ್‌ ನೀತಿಗಳಂತೆ ಸರಕು ಸಾಗಣೆ ಉದ್ಯಮದ ಅಭಿವೃದ್ಧಿಗೂ ಹೊಸ ನೀತಿ ಬರುತ್ತಿದೆ. ಈಗಾಗಲೇ ಕರಡು ಸಿದ್ಧಗೊಂಡಿದ್ದು, ತಿಂಗಳಲ್ಲಿ ಇದು ಅಂತಿಮ ಸ್ವರೂಪ ಪಡೆದುಕೊಳ್ಳಲಿದೆ. ಈ ಹೊಸ ಸರಕು ಸಾಗಣೆ ನೀತಿ (ಲಾಜಿಸ್ಟಿಕ್‌ ಪಾಲಿಸಿ)ಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಹೂಡಿಕೆದಾರರಿಗೆ ಹಣಕಾಸು ಸೇರಿದಂತೆ ವಿಶೇಷ ಉತ್ತೇಜನ, ಕೌಶಲ್ಯಾಭಿವೃದ್ಧಿ, ಗುಣಮಟ್ಟದ ಸೇವೆ
ಗಳು, ತಂತ್ರಜ್ಞಾನಗಳ ಅನ್ವೇಷಣೆಗೆ ಒತ್ತು ಮತ್ತಿತರ ಅಂಶಗಳಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಇದಲ್ಲದೆ, ನೀತಿಯಿಂದ ರೈತರಿಗೂ ಅನುಕೂಲ ಆಗಲಿದೆ ಎಂದು ಬೃಹತ್‌ ಕೈಗಾರಿಕೆಗಳು, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ವಿಜ್ಞಾನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಭಾರತೀಯ ಕೈಗಾರಿಕೆ ಗಳ ಒಕ್ಕೂಟ (ಸಿಐಐ) ಹಮ್ಮಿಕೊಂಡಿದ್ದ “ಸರಕು ಸಾಗಣೆ ನೀತಿ-2018′ ಕುರಿತಾದ ಪ್ರತಿನಿಧಿಗಳೊಂದಿಗಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಡು ಈಗ ಸಿದ್ಧಗೊಂಡಿದ್ದು, ತಿಂಗಳಲ್ಲಿ ಅಂತಿಮ ರೂಪ ನೀಡಲಾಗುವುದು. ಇದರ ಉದ್ದೇಶ ಮೂಲಸೌಕರ್ಯ ಅಭಿವೃದ್ಧಿ ಜತೆಗೆ ರೈತರ ಆದಾಯ ಹೆಚ್ಚಿಸುವುದಾಗಿದೆ. ಬೆಳೆ ಕಟಾವಿಗೆ ಬಂದಾಗ, ಮಾರುಕಟ್ಟೆಯಲ್ಲಿ ಬೆಲೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ದಾಸ್ತಾನು ಮಾಡಲಾಗದೆ, ಬಂದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೊಸ ನೀತಿಯಡಿ ವಾಲ್‌ಮಾರ್ಟ್‌ ಸೇರಿದಂತೆ ದೊಡ್ಡ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಅಲ್ಲಿ ದಾಸ್ತಾನು ಮಾಡಿ, ಬೆಲೆ ಹೆಚ್ಚಳವಾದಾಗ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎಂದು ಹೇಳಿದರು.

5,500 ಕೋಟಿ ಹೂಡಿಕೆ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾಭಿವೃದ್ಧಿ ಆಯುಕ್ತ ದರ್ಪಣ್‌ ಜೈನ್‌ ಮಾತನಾಡಿ, ದಕ್ಷಿಣ ಭಾರತದಲ್ಲಿ ಜಾರಿಗೆ ಬರಲಿರುವ ಮೊದಲ ಸರಕು ಸಾಗಣೆ ನೀತಿ ಇದಾಗಿದೆ. ದೇಶದಲ್ಲಿ ಕರ್ನಾಟಕವು ಸರಕು ಸಾಗಣೆ ಉದ್ಯಮದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ತಲುಪುವ ಗುರಿಯಿಂದ ಈ ನೀತಿ ರೂಪಿಸಲಾಗುತ್ತಿದೆ. ಇದರಡಿ 5,500 ಕೋಟಿ ರೂ.ಹೂಡಿಕೆ ನಿರೀಕ್ಷಿಸಲಾಗಿದ್ದು, 40 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಇದೆ. ಸ್ಟಾರ್ಟ್‌ಅಪ್‌ ತಂತ್ರಜ್ಞಾನಗಳಿಗೂ ಇದರಲ್ಲಿ ಅವಕಾಶ ನೀಡಲಾಗುವುದು. ದಾಬಸ್‌ಪೇಟೆಯ ಬಳಿ ಬೃಹತ್‌ ಸರಕು ಸಾಗಣೆ ಪಾರ್ಕ್‌ ನಿರ್ಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಐಐ ಕರ್ನಾಟಕ ಅಧ್ಯಕ್ಷ ಎನ್‌. ಮುತ್ತುಕುಮಾರ್‌, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ
ಸುಧಾಕರ್‌ ಶೆಟ್ಟಿ, ಕಾಸಿಯಾ ಅಧ್ಯಕ್ಷ ಬಸವರಾಜ ಜವಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯ ದರ್ಶಿ ಗೌರವ್‌ ಗುಪ್ತ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next